ಪ್ರಕಾಶ್ 'ಗೋಕುಲ'ದಲ್ಲಿ ವಿಜಯ ರಾಘವೇಂದ್ರ
ಪುನೀತ್ ರಾಜ್ ಕುಮಾರ್ ಮತ್ತು ನಿಖಿತಾ ಅಭಿನಯದ 'ವಂಶಿ' ಚಿತ್ರ ನಿರ್ದೇಶಿಸಿದ್ದ ಪ್ರಕಾಶ್ ಮತ್ತೆ ಹಿಂತಿರುಗಿದ್ದಾರೆ. ಕಳೆದ ವರ್ಷ ಬಿಡುಗಡೆ ಕಂಡ 'ವಂಶಿ' ಚಿತ್ರ ಪರ್ವಾಗಿಲ್ಲ ಎನ್ನಿಸಿಕೊಂಡಿತ್ತು. ಈ ಬಾರಿ ಅವರು ವಿಜಯ್ ರಾಘವೇಂದ್ರ ಅವರನ್ನು ತಮ್ಮ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ 'ಗೋಕುಲ' ಎಂದು ಹೆಸರಿಡಲಾಗಿದೆ.
ವಿಜಯ್ ರಾಘವೇಂದ್ರ ಅವರೊಂದಿಗೆ ಪ್ರಕಾಶ್ ನಿರ್ದೇಶಿಸುತ್ತಿರುವ ನಾಲ್ಕನೆ ಚಿತ್ರ ಇದಾಗಲಿದೆ. ಈ ಹಿಂದೆ ಖುಷಿ, ರಿಷಿ ಮತ್ತು ಶ್ರೀ ಚಿತ್ರಗಳನ್ನು ಪ್ರಕಾಶ್ ನಿರ್ದೇಶಿಸಿದ್ದರು. ಮೊದಲ ಚಿತ್ರ 'ಖುಷಿ' ದಾಖಲೆ ನಿರ್ಮಿಸಿತ್ತು. ಎರಡನೆ ಚಿತ್ರ ರಿಷಿ ಪರ್ವಾಗಿಲ್ಲ ಎನ್ನಿಸಿಕೊಂಡಿತ್ತು. ಆದರೆ ಮೂರನೇ ಚಿತ್ರ ಶ್ರೀ ಮಾತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿತ್ತು.
ಈ ಚಿತ್ರದಲ್ಲಿ ಯಶ್ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಪೂಜಾಗಾಂಧಿ, ನಕ್ಷತ್ರಾ ಚಿತ್ರದ ಇಬ್ಬರು ನಾಯಕಿಯರು. ಒಬ್ಬರು ಯಶ್ ಗೆ ಜೋಡಿಯಾದರೆ ಮತ್ತೊಬ್ಬರು ವಿಜಯ್ ರಾಘವೇಂದ್ರಗೆ ಜೊತೆಯಾಗಲಿದ್ದಾರೆ. ಗೋಕುಲಕ್ಕೆ ಮನೋಮೂರ್ತಿ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











