»   » ಪ್ರಕಾಶ್‌ ರೈ ದಿನಕ್ಕೆ 10 ಪೈಸೆ ಸಂಭಾವನೆಗೆ ನಟಿಸಲು ಒಪ್ಪುವುದೆಂದರೆ ?

ಪ್ರಕಾಶ್‌ ರೈ ದಿನಕ್ಕೆ 10 ಪೈಸೆ ಸಂಭಾವನೆಗೆ ನಟಿಸಲು ಒಪ್ಪುವುದೆಂದರೆ ?

Posted By: Super
Subscribe to Filmibeat Kannada

ಮುನ್ನುಡಿಯ ಪಿ.ಶೇಷಾದ್ರಿ ಅವರ ಹೊಸ ಚಿತ್ರದಲ್ಲಿ ನಟಿಸಲು ಪ್ರಕಾಶ್‌ ರೈ ಒಪ್ಪಿಕೊಂಡಿದ್ದಾರೆ ; ಸಂಭಾವನೆ- 1 ರುಪಾಯಿ. ರೈ ಅವರೇನೋ ನನ್ನ ಕಾಲ್‌ಷೀಟ್‌ ಸಂಪೂರ್ಣ ಉಚಿತ ಎಂದಿದ್ದರು. ಸಾಂಕೇತಿಕವಾಗಿಯಾದರೂ ಇರಲಿ ಎಂದು ಶೇಷಾದ್ರಿ 1 ರುಪಾಯಿ ಸಂಭಾವನೆ ನಿಗದಿಪಡಿಸಿದ್ದಾರೆ, ರೈ ಒಪ್ಪಿಕೊಂಡಿದ್ದಾರೆ.

ಶೇಷಾದ್ರಿ ಅವರ ಹೊಸಚಿತ್ರಕ್ಕೆ ರೈ 10 ದಿನಗಳ ಕಾಲ್‌ಷೀಟ್‌ ನೀಡಿದ್ದಾರೆ. ಅಂದರೆ ದಿನಕ್ಕೆ 10 ಪೈಸೆ ಸಂಭಾವನೆ ಎಂದಾಯಿತು. ಶೇಷಾದ್ರಿ ಅವರ ಪ್ರತಿಭೆಗೆ ರೈ ಅವರ ಪುರಸ್ಕಾರ- ಪ್ರೋತ್ಸಾಹವಿದು. ಹೊಸಬರಿಗೆ- ಹೊಸ ಪ್ರಯತ್ನಗಳಿಗೆ ನನ್ನ ಬೆಂಬಲವಿದ್ದೇ ಇದೆ. ಅವರ ಚಿತ್ರಗಳಲ್ಲಿ ಉಚಿತವಾಗಿ ನಟಿಸಲೂ ನಾನು ಸಿದ್ಧ ಎಂದು ರೈ ಆಗಾಗ ಹೇಳುತ್ತಲೇ ಬಂದಿದ್ದರು. ಆಚರಣೆಗೆ ಅತಿಥಿ ಒಂದು ಅವಕಾಶ ಕಲ್ಪಿಸಿದೆ. ಮಾತು ತಪ್ಪದ ರೈಗೆ ಮಾತು ತಪ್ಪದ ಮಗ ಎಂದು ಬಿರುದು ನೀಡಲಿಕ್ಕಡ್ಡಿಯಿಲ್ಲ.


ಪ್ರಕಾಶ್‌ ರೈ ಅವರ ಕಾಲ್‌ಷೀಟ್‌ ಕೇಳಲಿಕ್ಕೆ ಶೇಷಾದ್ರಿ ಹಿಂದುಮುಂದು ನೋಡಿದ್ದರು. ತಮಿಳು, ತೆಲುಗಿನಲ್ಲಿ ಬೇಡಿಕೆಯಲ್ಲಿರುವ ಕಲಾವಿದ. ಲಕ್ಷಾಂತರ ರುಪಾಯಿ ಸಂಭಾವನೆ ಪಡೆಯುವಂಥ ಮನುಷ್ಯ. ನನ್ನ ಚಿತ್ರಕ್ಕೂ ಅದೇರೀತಿ ಸಂಭಾವನೆ ಕೇಳಿದರೆ ಏನು ಮಾಡುವುದು.. ಎಂದೆಲ್ಲಾ ಶೇಷಾದ್ರಿ ಯೋಚನೆ ಮಾಡಿದ್ದರು. ಕೊನೆಗೆ, ನೋಡಿಯೇ ಬಿಡೋಣ ಎಂದು ಧೈರ್ಯ ಮಾಡಿ ಕೇಳಿದರೆ- ನೀವು ಸಿನಿಮಾ ಮಾಡಿ, ಸಂಭಾವನೆ ಬೇಡವೇ ಬೇಡ ಎಂದು ರೈ ಹೇಳುವುದೇ! ಶೇಷಾದ್ರಿ ಅವರಿಗಂತೂ ಸ್ವರ್ಗ ಮೂರೇ ಗೇಣು.

ಅಂದಹಾಗೆ, ಶೇಷಾದ್ರಿ ಚಿತ್ರದ ಹೆಸರು ಅತಿಥಿ. ಇದೇನೂ ಅತಿಥಿ ಸತ್ಕಾರದ ಕಥೆಯಲ್ಲ , ಬದಲಾಗಿ ಅಭ್ಯಾಗತನ ಕಥೆ. ಇವತ್ತು ವಿಶ್ವದ ತುಂಬೆಲ್ಲಾ ಕಬಂಧ ಹಸ್ತಗಳನ್ನು ಚಾಚಿದೆಯಲ್ಲ , ಆ ಭಯೋತ್ಪಾದಕತೆಯ ಕತೆ. ಪ್ರಕಾಶ್‌ ರೈ ಅವರದ್ದು ಭಯೋತ್ಪಾದಕನ ಪಾತ್ರ. ಇಂಥ ಪಾತ್ರಗಳಲ್ಲಿ ರೈ ನುರಿತಿರುವುದರಿಂದ ಶೇಷಾದ್ರಿ ಅವರಿಗೆ ಕೆಲಸ ಸುಲಭವಾದೀತು.

ನವಂಬರ್‌ 25 ರಿಂದ ಚಿತ್ರೀಕರಣ ಪ್ರಾರಂಭ. 10 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ. ಜನವರಿಯಲ್ಲಿ ಬಿಡುಗಡೆ ಎಂದು ಶೇಷಾದ್ರಿ ಟೈಂ ಟೇಬಲ್‌ ಹಾಕಿಕೊಂಡಿದ್ದಾರೆ. ಬೇಗ ಚಿತ್ರೀಕರಣ ಮುಕ್ತಾಯ, ಬಜೆಟ್‌ ಉಳಿತಾಯ ಎನ್ನುವುದು ಶೇಷಾದ್ರಿ ಮಂತ್ರ. ಅವರು ಪಕ್ಕಾ ಹೋಂವರ್ಕ್‌ ಗಿರಾಕಿಯಾದುದರಿಂದ ಅಂದುಕೊಂಡದ್ದನ್ನು ಮಾಡಬಲ್ಲರು, ಸಾಕ್ಷಿಯಾಗಿ 20 ಲಕ್ಷದಲ್ಲಿ ತಯಾರಿಯಾದ ಮುನ್ನುಡಿಯಿದೆ.

ಮುನ್ನುಡಿ ಚಿತ್ರವನ್ನು ನವಚಿತ್ರ ಎನ್ನುವ ಗೆಳೆಯರ ಬಳಗದ ಲಾಂಛನದಲ್ಲಿ ಶೇಷಾದ್ರಿ ನಿರ್ಮಿಸಿದ್ದರು. ಆದರೆ, ಅತಿಥಿ ಚಿತ್ರಮಿತ್ರ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿದೆ. ಪಾತ್ರವರ್ಗದಲ್ಲಿ ದತ್ತಾತ್ರೇಯ ಹಾಗೂ ಲಕ್ಷ್ಮಿ ಚಂದ್ರಶೇಖರ್‌, ವಿ.ಮನೋಹರ್‌ ಸಂಗೀತ, ಕೆಂಪರಾಜ್‌ ಸಂಕಲನ, ಚಂದ್ರು ಅವರ ಛಾಯಾಗ್ರಹಣ ಅತಿಥಿಗಿದೆ. ಸಕಲೇಶಪುರದಲ್ಲಿ ಚಿತ್ರೀಕರಣ.

ನೆಹರೂಪಾರ್ಕ್‌ ನೆನೆಗುದಿಯಲ್ಲಿದೆ..

ಮಕ್ಕಳಿಗಾಗಿ ಒಂದು ಸಿನಿಮಾ ಮಾಡಬೇಕೆನ್ನುವುದು ಶೇಷಾದ್ರಿ ಕನಸು. ಮುನ್ನುಡಿ ನಂತರ ನೆಹರೂಪಾರ್ಕ್‌ ಎನ್ನುವ ಮಕ್ಕಳ ಸಿನಿಮಾ ಮಾಡುವ ಕನಸನ್ನು ಶೇಷಾದ್ರಿ ಕಂಡಿದ್ದರು. ಆದರೆ ನೆಹರೂಪಾರ್ಕ್‌ಗೆ ನಾನಾ ಅಡ್ಡಿಗಳು ಬಂದಿದ್ದರಿಂದ ಶೇಷಾದ್ರಿ ಬೇಜಾರಿನಲ್ಲಿದ್ದರು. ಇದೇ ಹೊತ್ತಿನಲ್ಲಿ ಕಥೆಗಾರ ಜೆ.ಎಂ. ಪ್ರಹ್ಲಾದ್‌ ಅತಿಥಿಯ ಕಥೆ ಹೇಳಿದರು. ಒಂದು ಕೈ ನೋಡಿಯೇ ಬಿಡೋಣ ಎಂದು ಶೇಷಾದ್ರಿ ನಿರ್ಧರಿಸಿದ್ದರ ಫಲ ಅತಿಥಿ ಸೆಟ್ಟೇರುತ್ತಿದೆ, ಶೇಷಾದ್ರಿ ಮತ್ತೊಮ್ಮೆ ನಿರ್ದೇಶಕರಾಗುತ್ತಿದ್ದಾರೆ.

English summary
Believe it or not, Prakash Rais fee is Rs 1

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada