"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
ಪ್ಯಾನ್ ಇಂಡಿಯಾ ಟ್ರೆಂಡ್ ಶುರು ಆಗಿದ್ದೇ ಆಗಿದ್ದು ಭಾಷೆಯ ಎಲ್ಲೆ ಮೀರಿ ಕಲಾವಿದರು, ತಂತ್ರಜ್ಞರು ಹೆಚ್ಚು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟ-ನಟಿಯರು ಕನ್ನಡಕ್ಕೆ ಬರುತ್ತಿದ್ದಾರೆ. ಅದೇ ರೀತಿ ಕನ್ನಡ ತಾರೆಯರು ಅಕ್ಕ ಪಕ್ಕದ ಇಂಡಸ್ಟ್ರಿಗಳಿಗೆ ಲಗ್ಗೆ ಇಟ್ಟಿದ್ದಾರೆ. ಕನ್ನಡಿಗರಿಗೆ ಈಗ ಪರಭಾಷೆಗಳಲ್ಲಿ ಭಾರೀ ಡಿಮ್ಯಾಂಡ್ ಶುರುವಾಗಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇಅಲ್ಲ 'ಸಲಾರ್' ಚಿತ್ರದಲ್ಲಿ ಕನ್ನಡ ಕಲಾವಿದರು, ತಂತ್ರಜ್ಞರು ಕೂಡ ಕೆಲಸ ಮಾಡಿದ್ದಾರೆ. 'ದೇವ' ಪ್ರಭಾಸ್ ಎದುರು ಚಿತ್ರದಲ್ಲಿ ವರದರಾಜ ಮನ್ನಾರ್ ಆಗಿ ಪೃಥ್ವಿರಾಜ್ ಸುಕುಮಾರ್ ಅಬ್ಬರಿಸಿದ್ದಾರೆ. ಇಬ್ಬರು ಸ್ನೇಹಿತರು ಬದ್ಧ ಶತ್ರುಗಳಾದರೆ ಹೇಗಿರುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಇನ್ನು ವರದರಾಜ ಮನ್ನಾರ್ ಸಹೋದರನ ಪಾತ್ರದಲ್ಲಿ ಕನ್ನಡ ನಟ ಪ್ರಮೋದ್ ಪಂಜು ನಟಿಸಿದ್ದಾರೆ.

'ಸಲಾರ್' ಬೆನ್ನಲ್ಲೇ ಟಾಲಿವುಡ್‌ನಿಂದ ಪ್ರಮೋದ್‌ಗೆ ಸಾಕಷ್ಟು ಅವಕಾಶಗಳು ಅರಸಿ ಬರ್ತಿವೆ. ಅಲ್ಲು ಅರ್ಜುನ್ ನಟನೆ 'ಪುಷ್ಪ'-2 ಚಿತ್ರದ ಖಳನಟ ಪಾತ್ರ ಮಾಡುವಂತೆ ಕೇಳಿದ್ದರಂತೆ. ಆದರೆ ಪಾತ್ರ ಕೇಳಿದ ಮೇಲೆ ಪ್ರಮೋದ್ ನಟಿಸೋಕೆ ಒಲ್ಲೆ ಎಂದರಂತೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಈಗ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
"ಪುಷ್ಪ-2 ಚಿತ್ರದಿಂದ ಅವಕಾಶ ಬಂದಿತ್ತು. ನೀವೇ ಆ ಪಾತ್ರ ಮಾಡಬೇಕು ಅಂದ್ರು. ನನಗೆ ಮೊದಲಿಗೆ ಇಷ್ಟ ಆಯ್ತು. ಬಳಿಕ ನನ್ನ ಕ್ಯಾರೆಕ್ಟರ್ ಏನು ಅಂತ ಹೇಳಿದ್ರು. ಹೀರೊ ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಅಂದ್ರು. ಅಂದ್ರೆ ಅಷ್ಟು ರಾ ಇರುವ ಪಾತ್ರ ಅದು. ಯಾಕೋ ಮನಸ್ಸಿಗೆ ಸ್ವಲ್ಪ ಕಷ್ಟ ಆಯ್ತು. ಯಾಕೋ ಬೇಡ ಎನಿಸಿತು. ನನ್ನ ಮನಸ್ಸು ಇಲ್ಲೆ ಸೆಳೆಯುತ್ತಿತ್ತು" ಎಂದು ಪ್ರಮೋದ್ ಹೇಳಿದ್ದಾರೆ.
"ನನ್ನನ್ನು ಹೀರೊ ಆಗಿ ನೋಡುತ್ತಿದ್ದಾರೆ ತುಂಬಾ ಜನ. ಹಾಗಾಗಿ ಇಲ್ಲೇ ಪ್ರೂವ್ ಮಾಡಿಕೊಳ್ಳಬೇಕು. ಇಲ್ಲೇ ಮಾಡೋಣ. ನನಗೆ ಕನ್ನಡ ಪ್ರೇಕ್ಷಕರ ಮೇಲೆ ನಂಬಿಕೆ ಜಾಸ್ತಿ. ಇವತ್ತಲ್ಲ ನಾಳೆ ನಮ್ಮನ್ನು ಗೆಲ್ಲಿಸೇ ಗೆಲ್ಲಿಸುತ್ತಾರೆ. ಸಾಕಷ್ಟು ಜನರನ್ನು ಗೆಲ್ಲಿಸಿದ್ದಾರೆ, ಸಾಕುತ್ತಿದ್ದಾರೆ. ನನ್ನನ್ನು ಗೆಲ್ಲಿಸ್ತಾರೆ. ಆ ನಂಬಿಕೆಯಿಂದ ಇನ್ನು ಸಿನಿಮಾ ನೋಡೋಕೆ ಸ್ಫೂರ್ತಿ"

"ಇಲ್ಲಿ ಆಗೋದೆ ಇಲ್ಲ ಅಂದಾಗ ವಿಲನ್ ಆಗಿ ನಟಿಸಬೇಕಾಗುತ್ತದೆ, ಹೊಡೆಸಿಕೊಳ್ಳಬೇಕಾಗುತ್ತದೆ. ಎಲ್ಲದ್ದಕ್ಕೂ ನಾನು ಸಿದ್ಧ. ಆದರೆ ಸದ್ಯದ ಪರಿಸ್ಥಿತಿಯಲ್ಲಿ 'ಪುಷ್ಪ'-2 ಚಿತ್ರದ ಅವಕಾಶ ಬಂದರೂ ನಟಿಸೋಕೆ ಆಗಲಿಲ್ಲ. ಮನಸ್ಸು ಒಪ್ಪಲಿಲ್ಲ. ಯಾಕಂದರೆ ನಮ್ಮ ಪ್ರೇಕ್ಷಕರ ಮೇಲಿನ ನಂಬಿಕೆ" ಎಂದು ವಿವರಿಸಿದ್ದಾರೆ.
'ಗೀತಾ ಬ್ಯಾಂಗಲ್ಸ್ ಸ್ಟೋರ್' ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಪ್ರಮೋದ್ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರತ್ನನ್ ಪ್ರಪಂಚ' ಚಿತ್ರದಲ್ಲಿ ಧನಂಜಯ ಜೊತೆ ನಟಿಸಿ ಪ್ರಮೋದ್ ಗೆದ್ದಿದ್ದರು. ಉಡಾಳ್ ಬಾಬುರಾವ್ ಪಾತ್ರದಲ್ಲಿ ಉತ್ತರ ಕರ್ನಾಟಕ ಹೈದನಾಗಿ ಪ್ರಮೋದ್ ಪ್ರೇಕ್ಷಕರ ಮನಗೆದ್ದಿದ್ದರು. ಸದ್ಯ 'ಇಂಗ್ಲೀಷ್ ಮಂಜ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ 2 ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಚಿತ್ರದಲ್ಲಿ ಡಾಲಿ ಧನಂಜಯ ಕೂಡ ವಿಲನ್ ಆಗಿ ಅಬ್ಬರಿಸಿದ್ದರು. ಸದ್ಯ ಚಿತ್ರದ ಸೀಕ್ವೆಲ್ ಚಿತ್ರೀಕರಣ ಭರದಿಂದ ಸಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.


Click it and Unblock the Notifications











