NH 66 ನಲ್ಲಿ ಶ್ರುತಿ ಹರಿಹರನ್ ಜೊತೆ ಪ್ರಮೋದ್ ಶೆಟ್ಟಿ ಜರ್ನಿ; ಹೇಗಿರುತ್ತೆ ರೋಡ್ ಸ್ಟೋರಿ?
ಸ್ಯಾಂಡಲ್‌ವುಡ್‌ನಲ್ಲಿ ಹೊಚ್ಚ ಹೊಸ ಪರಿಕಲ್ಪನೆಯ ಸಿನಿಮಾಗಳು ಸೆಟ್ಟೇರುತ್ತಿವೆ. ಹಾಗೇ ಇತ್ತೀಚೆಗೆ ಪ್ರಮೋದ್ ಶೆಟ್ಟಿ, ಶ್ರುತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಎನ್‌ಎಚ್ 66' (NH 66) ಸಿನಿಮಾ ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಮುಹೂರ್ತದ ಜೊತೆಗೆ ಟೈಟಲ್ ಕೂಡ ಲಾಂಚ್ ಆಗಿದೆ.
'NH 66' ಸಿನಿಮಾವನ್ನು ರಾಯ ಫಿಲಂಸ್ ಬ್ಯಾನರ್‌ನಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಮಂಜುನಾಥ್ ಈ ಹಿಂದೆನೇ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಬಳಿಕ ವಿದೇಶಕ್ಕೆ ತೆರಳಿ ಸಿನಿಮಾ ಮೇಕಿಂಗ್ ಬಗ್ಗೆ ವಿಶೇಷ ಅಧ್ಯಯನ ಮಾಡಿ ಭಾರತಕ್ಕೆ ಹಿಂತಿರುಗಿದ್ದಾರೆ. ಇಲ್ಲಿಗೆ ಬಂದ್ಮೇಲೆ 'NH 66' ಸಿನಿಮಾ ಆರಂಭ ಮಾಡುತ್ತಿದ್ದಾರೆ.

ಇನ್ನು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ರಮೋದ್ ಶೆಟ್ಟಿ ಸಿನಿಮಾದ ಕಥೆಯನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. "ಮಂಜುನಾಥ್ ಹೇಳಿದ ಕಥೆ ಇಷ್ಟವಾಯಿತು. ಅವರೇ ಹೇಳಿದ ಹಾಗೆ ಇದೊಂದು ರೋಡ್ ಸ್ಟೋರಿ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಈ ಸಿನಿಮಾದಲ್ಲಿ ನಾನು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಶ್ರುತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಜೊತೆಗೆ ನಟಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ. ರಾಯರ ಭಕ್ತರಾದ ಮಂಜುನಾಥ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾವನ್ನು ರಾಯರ ಸನ್ನಿಧಿಯಲ್ಲೇ ಆರಂಭಿಸಿದ್ದಾರೆ. ರಾಯರು ಅವರಿಗೆ ಒಳ್ಳೆಯದು ಮಾಡಲಿ" ಎಂದು ನಟ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಶ್ರುತಿ ಹರಿಹರನ್ ಕೂಡ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. "ಮಂಜುನಾಥ್ ಅವರಿಗೆ ಸಿನಿಮಾ ಮೇಲೆ ಇರುವ ಪ್ರೀತಿ ಹಾಗೂ ಅವರು ಕಥೆ ಹೇಳಿದ ರೀತಿ ಬಹಳ ಇಷ್ಟವಾಯಿತು. ನಾನು ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಈವರೆಗೂ ಮಾಡಿರದ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡುತ್ತಿದ್ದೇನೆ. ಪ್ರಮೋದ್ ಶೆಟ್ಟಿ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ" ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಮಂಜುನಾಥ್ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. "ನಾನು ಹಿರಿಯ ನಿರ್ದೇಶಕ ಭಾರ್ಗವ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೆ. ನಂತರ ಕಾರಣಾಂತರದಿಂದ ವಿದೇಶಕ್ಕೆ ತೆರಳಿದೆ. ಅಲ್ಲಿಯೇ ಸ್ಕ್ರಿಪ್ಟ್ ರಚನೆ , ಚಿತ್ರಕಥೆ ಬಗ್ಗೆ ವಿಶೇಷ ಅಧ್ಯಯನ ನಡಿಸಿದೆ. ಈಗ ಇಲ್ಲಿಗೆ ಬಂದು ನನ್ನ ಮೊದಲ ನಿರ್ದೇಶನದ ಚಿತ್ರವನ್ನು ಆರಂಭಿಸಿದ್ದೇನೆ. ರಾಯರ ಪರಮಭಕ್ತನಾದ ನಾನು ಅವರ ಹೆಸರಿನಲ್ಲಿಯೇ ರಾಯ ಫಿಲಂಸ್ ಎಂಬ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದೇನೆ. NH 66 ಹೆಸರೆ ಹೇಳುವಂತೆ ಒಂದು ರೋಡ್ ಸ್ಟೋರಿ. ಥ್ರಿಲ್ಲರ್ ಡ್ರಾಮ ಜಾನರ್ ನ ಚಿತ್ರವೂ ಹೌದು. ಪ್ರಮೋದ್ ಶೆಟ್ಟಿ ಹಾಗೂ ಶೃತಿ ಹರಿಹರನ್ ಅವರಿಗೆ ಈ ಚಿತ್ರದ ಕಥೆ ಹೇಳಿದಾಗ, ಕಥೆ ಇಷ್ಟಪಟ್ಟು ಈ ಚಿತ್ರದಲ್ಲಿ ನಟಿಸಲು ಒಪ್ಪಿದರು. ರಾಜೇಶ್ ನಟರಂಗ ಅವರು ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದು ಎರಡು ರಾತ್ರಿಗಳಲ್ಲಿ ಮಂಗಳೂರಿನಿಂದ ಗೋವಾಗೆ ಹೋಗುವ ಮಧ್ಯದಲ್ಲಿ ನಡೆಯುವ ಕಥೆಯಾಗಿದ್ದು, ಮೂರು ಅಥವಾ ನಾಲ್ಕು ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ. NH 66 ಚಿತ್ರಕ್ಕೆ "ಒನ್ ಹೈವೆ. ಮೆನಿ ಸೀಕ್ರೆಟ್ಸ್" ಎಂಬ ಅಡಿಬರಹವಿದೆ. ಏಪ್ರಿಲ್ 6 ರಿಂದ ಮಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸುನೀತ್ ಹಲಗೇರಿ ಛಾಯಾಗ್ರಹಣ ಹಾಗೂ ಸ್ವಾಮಿನಾಥನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ" ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಮಂಜುನಾಥ್ ಟಿ.ಆರ್ ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications