ಆ ನಟನಿಗೆ ಮಾತು ಕೊಟ್ಟಿದ್ದೀನಿ, ಖಂಡಿತ ಕನ್ನಡ ಸಿನಿಮಾ ಮಾಡ್ತೀನಿ: ಪ್ರಶಾಂತ್ ನೀಲ್
ಬೆಂಗಳೂರಿನಲ್ಲಿ ನಡೆದ 'ಕೆಜಿಎಫ್ 2' ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಮಾತೊಂದು ಹೇಳಿದರು, ''ದಕ್ಷಿಣ ಭಾರತ ಸಿನಿಮಾ ವಿಶ್ವಮಟ್ಟದಲ್ಲಿ ಮಿನುಗಬೇಕೆಂಬ ಕನಸನ್ನು ನನಸು ಮಾಡಿದ ನಿರ್ದೇಶಕ ರಾಜಮೌಳಿ ಹಾಗೂ ಪ್ರಶಾಂತ್ ನೀಲ್'' ಎಂದು.
ಅದು ನಿಜವೂ ಹೌದು, ವಿಶ್ವಮಟ್ಟದಲ್ಲಿ ನಮ್ಮ ಸಿನಿಮಾ ಮಿನುಗಬಹುದು ಎಂಬುದನ್ನು ತೋರಿಸಿಕೊಟ್ಟವರು ರಾಜಮೌಳಿ ಆದರೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಪ್ರಶಾಂತ್ ನೀಲ್.
ಕನ್ನಡದ 'ಉಗ್ರಂ' ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶನ ಆರಂಭಿಸಿದ ಪ್ರಶಾಂತ್ ನೀಲ್, ತಮ್ಮ ಎರಡನೇ ಸಿನಿಮಾ 'ಕೆಜಿಎಫ್; ಚಾಪ್ಟರ್ 1' ಮೂಲಕ ತಾವೆಂತಾ ಗಟ್ಟಿ ನಿರ್ದೇಶಕ ಎಂಬುದನ್ನು ಸಾರಿ ಹೇಳಿದರು. ತಮ್ಮ ಮೂರನೇ ಸಿನಿಮಾ 'ಕೆಜಿಎಫ್ 2' ಬಿಡುಗಡೆ ಆಗುವ ಮುನ್ನವೇ ದಕ್ಷಿಣದ ಹಲವು ಸ್ಟಾರ್ ನಟರಿಗೆ ಡೇಟ್ಸ್ ನೀಡಿ ಬ್ಯುಸಿಯಾಗಿಬಿಟ್ಟಿದ್ದಾರೆ. 'ಕೆಜಿಎಫ್ 2' ಪ್ರಶಾಂತ್ ನೀಲ್‌ರ ಕೊನೆಯ ಕನ್ನಡ ಸಿನಿಮಾ ಆಗಲಿದೆ ಆ ಬಳಿಕ ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಎಲ್ಲ ಗಾಳಿ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ ನೀಲ್.

''ನಾನು ಕನ್ನಡಿಗ, ಇಲ್ಲಿ ಸಿನಿಮಾ ಮಾಡಿಯೇ ಮಾಡ್ತೀನಿ''
'ಕೆಜಿಎಫ್ 2' ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯೊಂದರಲ್ಲಿ, ನೀವು ಇನ್ನು ಮುಂದೆ ಕನ್ನಡ ಸಿನಿಮಾ ಮಾಡುವುದಿಲ್ಲವಾ? ಎಂಬ ಪ್ರಶ್ನೆ ಎದುರಾಗಿದೆ, ಇದಕ್ಕೆ ಕನ್ನಡಿಗರು ಹೆಮ್ಮೆ ಪಡುವ ಉತ್ತರ ನೀಡಿದ ಪ್ರಶಾಂತ್ ನೀಲ್, ''ನಾನು ಕನ್ನಡ ಸಿನಿಮಾ ಮಾಡುವ ಮೂಲಕ ಕನ್ನಡಕ್ಕೆ ನಾನೇನೋ ಕೊಡುತ್ತಿದ್ದೇನೆ, ಸೇವೆ ಮಾಡುತ್ತಿದ್ದೇನೆ ಎಂದೆಲ್ಲ ಏನೂ ಇಲ್ಲ. ನಾನು ಕನ್ನಡಿಗ ಹಾಗಾಗಿ ಕನ್ನಡದಲ್ಲಿ ಸಿನಿಮಾ ಮಾಡುವುದು ನನ್ನ ಕರ್ತವ್ಯ, ಮುಂದೆಯೂ ನಾನು ಕನ್ನಡದಲ್ಲಿ ಸಿನಿಮಾ ಮಾಡಿಯೇ ಮಾಡುತ್ತೀನಿ. ನಾನು ಎಲ್ಲಿಯೇ ಹೋದರು ನಾನು ಕನ್ನಡಿಗನೇ, ನಾನು ವಾಪಸ್ ಬಂದು ಕನ್ನಡ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ ಸಹ'' ಎಂದಿದ್ದಾರೆ ಪ್ರಶಾಂತ್ ನೀಲ್.

ಅವರು ತೋರಿಸಿದ ಪ್ರೀತಿ ಆಪ್ತವಾಗಿತ್ತು: ನೀಲ್
''ಈಗ ನನಗೆ ಕೆಲವು ಅವಕಾಶಗಳು ದೊರೆತಿವೆ, ಅವುಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. 'ಕೆಜಿಎಫ್: ಚಾಪ್ಟರ್ 1' ಸಿನಿಮಾ ಬಿಡುಗಡೆ ಆದ ಬಳಿಕ ಯಾರು ಬಂದು ನನ್ನನ್ನು ಸಂಪರ್ಕಿಸಿದರೊ ಅವರು ತೋರಿಸಿದ ಪ್ರೀತಿ, ಅವರು ನೀಡಿದ ಗೌರವ, ಆಪ್ತಾಯಮಾನವಾಗಿತ್ತು. ಅದೂ ಅಲ್ಲದೆ, ನಾನೂ ಸಹ ನನ್ನ ವೃತ್ತಿಜೀವನವನ್ನು ಪ್ರಗತಿಯೆಡೆಗೆ ಕೊಂಡೊಯ್ಯಬೇಕಿತ್ತು. ನಾನೂ ಸಹ ವೃತ್ತಿಯಲ್ಲಿ ಮುಂದಡಿ ಇಡಬೇಕಿತ್ತು'' ಎಂದಿರುವ ನೀಲ್ ಈ ಎಲ್ಲ ಕಾರಣಗಳಿಗಾಗಿ ಬೇರೆ ಭಾಷೆಯ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದರು.
Recommended Video


ಶ್ರೀಮುರಳಿಗೆ ಮಾತು ಕೊಟ್ಟಿದ್ದೀನಿ: ಪ್ರಶಾಂತ್ ನೀಲ್
''ನಾನು ಖಂಡಿತವಾಗಿ ಕನ್ನಡ ಸಿನಿಮಾಗಳನ್ನು ಮಾಡುತ್ತೇನೆ. ಅಲ್ಲದೆ, ನಾನು ಈಗಾಗಲೇ ಕನ್ನಡ ಸಿನಿಮಾ ನಿರ್ದೇಶಕ ಮಾಡಲು ಯೋಜನೆ ಸಹ ರೂಪಿಸಿಕೊಂಡಿದ್ದೇನೆ. ಶ್ರೀಮುರಳಿ ಅವರ ಜೊತೆ ಒಂದು ಕನ್ನಡ ಸಿನಿಮಾ ಮಾಡಲೇ ಬೇಕು ನಾನು. ಅವರಿಗೆ ನಾನು ಮಾತು ಕೊಟ್ಟಿದ್ದೀನಿ. ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆಂದು'' ಎಂದರು ಪ್ರಶಾಂತ್ ನೀಲ್. ಆ ಮೂಲಕ ತಮ್ಮ ಭಾವ ಶ್ರೀಮುರಳಿಗೆ ಮತ್ತೊಂದು ಸಿನಿಮಾ ಮಾಡುವುದಾಗಿ ಘೋಷಿಸಿದರು ನೀಲ್.

ಸ್ಟಾರ್ ನಟರಿಗೆ ಸಿನಿಮಾ ಮಾಡುತ್ತಿದ್ದಾರೆ
ಪ್ರಶಾಂತ್ ನೀಲ್ ಪ್ರಸ್ತುತ ಬಹಳ ಬ್ಯುಸಿ ನಿರ್ದೇಶಕ, ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ದೇಶಿಸುತ್ತಿರುವ ನೀಲ್ ಆ ಬಳಿಕ ಜೂ ಎನ್‌ಟಿಆರ್ ಜೊತೆಗೆ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಆ ಬಳಿಕ ರಾಮ್ ಚರಣ್ ತೇಜಗಾಗಿ ಹೊಸ ಸಿನಿಮಾ ಮಾಡಲಿದ್ದಾರೆ. ಅಲ್ಲು ಅರ್ಜುನ್ ಗಾಗಿಯೂ ಸಿನಿಮಾ ನಿರ್ದೇಶಿಸಲಿದ್ದಾರೆ. ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಲಿದ್ದಾರೆ. ಒಟ್ಟಾರೆ ಇನ್ನೂ ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲಿ ಬಹಳ ಬ್ಯುಸಿಯಾಗಿರಲಿದ್ದಾರೆ.


Click it and Unblock the Notifications











