'ಕೃಷ್ಣ ಇಲ್ಲದ ಮಹಾಭಾರತ,ಸುದೀಪ್ ಇಲ್ಲದ ಬಿಗ್ ಬಾಸ್ ಊಹಿಸಲೂ ಸಾಧ್ಯವಿಲ್ಲ'
ಕರುನಾಡಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಕಾರಣ ಸುದೀಪ್. ಹನ್ನೊಂದು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು ಕೂಡ ಮರೆತು ಬಿಗ್ ಬಾಸ್‌ಗೋಸ್ಕರ ಬೆವರು ಸುರಿಸಿದ್ಧಾರೆ.
ಆದರೆ ಈಗ ಸುದೀಪ್ ಅವರಿಗೆ ಬಿಗ್ ಬಾಸ್ ಸಹವಾಸ ಸಾಕೆನಿಸಿದೆ. ಇದಕ್ಕೆ ಕಾರಣ ಖುದ್ದು ಸುದೀಪ್ ಅವರಿಗೆ ಗೊತ್ತಾದರೂ, ಸುದೀಪ್ ಅವರ ಈ ನಡೆಯಿಂದ ಅನೇಕರು ಬೇಸರಗೊಂಡಿದ್ದಾರೆ. ನೀವು ಇಲ್ಲದ ಬಿಗ್ ಬಾಸ್ ಅಪೂರ್ಣ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇನ್ನೊಮ್ಮೆ ಯೋಚನೆ ಮಾಡಿ, ನಿರ್ಧಾರವನ್ನು ಬದಲಿಸಿ ಎಂಬ ಮನವಿಯನ್ನೂ ಕೂಡ ಮಾಡುತ್ತಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಸದ್ಯದ ಉದಾಹರಣೆ.

ಹೌದು, ಈ ಹಿಂದೆ ಬಿಗ್ ಬಾಸ್ ಮನೆಗೆ ತರಳಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡಿದ್ದ ಪ್ರಶಾಂತ್ ಸಂಬರಗಿ, ಕಿಚ್ಚ ಸುದೀಪ್ ಅವರಿಗೆ ಬಹಿರಂಗವಾದ ಪತ್ರವೊಂದನ್ನು ಬರೆದಿದ್ದಾರೆ. ಕೃಷ್ಣ ಇಲ್ಲದ ಮಹಾಭಾರತ ಮತ್ತು ಸುದೀಪ್ ಇಲ್ಲದ ಬಿಗ್‌ಬಾಸ್ ಸ್ವೀಕಾರಾರ್ಹವಲ್ಲ ಎಂದಿದ್ದಾರೆ. ಹಾಗಿದ್ದರೆ ಪ್ರಶಾಂತ್ ಸಂಬರಗಿ ಬರೆದ ಪತ್ರದಲ್ಲಿ ಏನಿದೆ ಎಂದು ತಿಳಿಯಲು ಮುಂದೆ ಓದಿ.
ಪ್ರಶಾಂತ್ ಸಂಬರಗಿ ಬರೆದಿರುವ ಪತ್ರ ಇಲ್ಲಿದೆ...!
ಆತ್ಮೀಯ ದೀಪು,
ನಾನು ಈ ಪತ್ರವನ್ನು ಬರೀತಾರೋದು ನಾನು ಒಬ್ಬ ಮಾಜಿ ಬಿಗ್ ಬಾಸ್ ಸ್ಪರ್ಧಿಯಾಗಿ ಅಥವಾ ತಮ್ಮ ವೈಯಕ್ತಿಕ ಸ್ನೇಹಿತನಾಗಿ ಅಲ್ಲ. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಪ್ರಾಮಾಣಿಕ ವೀಕ್ಷಕನಾಗಿ, ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿ ಮತ್ತು ಕರ್ನಾಟಕ ಮನರಂಜನಾ ಉದ್ಯಮದ ಓರ್ವ ಸದಸ್ಯನಾಗಿ ಇದನ್ನು ನಾನು ಬರೆಯುತ್ತಿದ್ದೇನೆ

ಇವತ್ತು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಪ್ರಮುಖ ವ್ಯಕ್ತಿಯಾಗಿ ನೀವು ನಿಂತಿರುವುದಕ್ಕೆ ಮತ್ತು ದಕ್ಷಿಣ ಭಾರತದ ಹಲವಾರು ಬ್ರ್ಯಾಂಡ್‌ಗಳ ರಾಯಭಾರಿಯಾಗಿರುವುದಕ್ಕೆ ನಿಮಗೆ ಶುಭಾಶಯಗಳು. ನಿಮಗೆ ನೆನಪಿರಬೇಕು, 2003ರಲ್ಲಿ ರಿಲಯನ್ಸ್ ಇನ್ಫೋ ಕಾಮ್‌ನ ಪ್ರಿಪೇಯ್ಡ್ ಮೊಬೈಲ್ ಜಾಹೀರಾತಿನ ಜೊತೆ ನಿಮ್ಮ ಈ ಪ್ರಯಾಣ ಆರಂಭವಾಯಿತು. ಅವತ್ತು ನೀವು 12,500 ಅಡಿಗಳಿಂದ ಪ್ಯಾರಾಚೂಟ್ ನಿಂದ ಹಾರಿದ ಆ ಕ್ಷಣ ನಿಜಕ್ಕೂ ಅವಿಸ್ಮರಣೀಯ. "ಶೀಘ್ರದಲ್ಲೇ ಬಾಹ್ಯಾಕಾಶದಿಂದ ಏನೋ ಕೆಳಗೆ ಬರಲಿದೆ... ವೀಕ್ಷಿಸುತ್ತಿರಿ.'' ಎಂದು ನೀವು ಹೇಳಿದ ಆ ಟ್ಯಾಗ್ ಲೈನ್ ನನಗೆ ಇನ್ನೂ ನೆನಪಿದೆ. ಆಹ್..ಅಂದು ನಿಮ್ಮ ಜೊತೆ ಅದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಲು ಸಿಕ್ಕ ಅವಕಾಶಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ. ನಿಮ್ಮ ಯಶಸ್ಸು ನನ್ನನ್ನೂ ಒಳಗೊಂಡಂತೆ ಅನೇಕರಿಗೆ ಸ್ಫೂರ್ತಿಯನ್ನು ನೀಡಿದೆ.
2013ರಿಂದ ನೀವು ಬಿಗ್ ಬಾಸ್ ಕನ್ನಡ ಶೋದ ಜವಾಬ್ಧಾರಿಯನ್ನು ವಹಿಸಿಕೊಂಡು ನಡೆಸಿಕೊಂಡು ಬಂದಿದ್ದೀರಿ. ಅದು ಅನೇಕರಿಗೆ ಕಿರುತೆರೆಗೆ ಬರಲು ದಾರಿಯಾಯಿತು. ಕಳೆದ ಹನ್ನೊಂದು ಸೀಸನ್‌ಗೆ ನೀವು ಹಾಕಿದ ಶ್ರಮ, ನಿಮ್ಮ ಸಮರ್ಪಣಾ ಮನೋಭಾವದಿಂದ ಇವತ್ತು ಆ ಕಾರ್ಯಕ್ರಮ ಕರ್ನಾಟಕದೆಲ್ಲೆಡೆ ಮನೆ ಮಾತಾಗಿಸಿದೆ.
ನೀವು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರವನ್ನು ನಾನು ಒಪ್ಪುತ್ತೇನೆ. ಆದರೆ, ನೀವು ಕೇವಲ ನಿರೂಪಕ ಮಾತ್ರ ಅಲ್ಲ. ಈ ಕಾರ್ಯಕ್ರಮದ ಮೂಲಕ ಅಸಂಖ್ಯಾತ ಯುವಜನಾಂಗಕ್ಕೆ ಮಾರ್ಗದರ್ಶಕರಾಗಿದ್ದೀರಾ. ಸ್ಫೂರ್ತಿಯ ಮೂಲವಾಗಿದ್ದೀರಾ. ನಿಮ್ಮ ಈ ಅನುಭವ ಬೆಲೆ ಕಟ್ಟಲಾಗದ ಸಂಪತ್ತು. ಹೀಗಾಗಿ ನಿಮ್ಮ ಈ ನಿರ್ಧಾರವನ್ನು ನೀವು ಮರುಪರಿಶೀಲಿಸಿ ಎಂದು ನಾನು ನಿಮ್ಮಲ್ಲಿ ವಿನಮ್ರ ಪೂರ್ವಕವಾಗಿ ಮನವಿಯನ್ನು ಮಾಡುತ್ತೇನೆ. ಬೇಕಿದ್ದರೆ ಕೆಲ ಸಮಯ ವಿಶ್ರಾಂತಿಯನ್ನು ನೀವು ಪಡೆಯಿರಿ, ಆದರೆ ಕಾರ್ಯಕ್ರಮಕ್ಕೆ ಮರಳಿ ಬನ್ನಿ. ಯಾಕೆಂದರೆ ಈ ಶೋಗೆ ನಿಮ್ಮ ಉಪಸ್ಥಿತಿ ತುಂಬಾ ಅಗತ್ಯವಾಗಿದೆ. ಕೃಷ್ಣ ಇಲ್ಲದ ಮಹಾಭಾರತ ಮತ್ತು ಸುದೀಪ್ ಇಲ್ಲದ ಬಿಗ್ ಬಾಸ್ ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯ ಇಲ್ಲ.
ಹೀಗೆ ಪ್ರಶಾಂತ್ ಸಂಬರಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಪ್ರಶಾಂತ್ ಸಂಬರಗಿ ಅವರು ಬರೆದ ಈ ಪತ್ರ ಸುದೀಪ್ ಅವರ ಕಣ್ಣಿಗೆ ಬೀಳುತ್ತಾ, ಇದಕ್ಕೆ ಸುದೀಪ್ ಪ್ರತಿಕ್ರಿಯೆಯನ್ನು ನೀಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











