"ಸಿನಿಮಾ ಮಾಡೋರೆಲ್ಲ ಅಶ್ವಿನಿ ಮೇಡಂ ಸಹಾಯ ತಗೊಳ್ತಾರೆ, ಯಾರಾದ್ರೂ ಅವ್ರ ಸಿನ್ಮಾ ನೆನಪಿಸಿಕೊಂಡ್ರಾ?"
ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿಂಧು ಶ್ರೀನಿವಾಸಮೂರ್ತಿ 'ಆಚಾರ್ & ಕೋ' ಸಿನಿಮಾ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತ್ತು. ಹೊಸಬರ ತಂಡ ಸೇರಿ ಮಾಡಿರುವ ಈ ಚಿತ್ರದ ಟ್ರೈಲರ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದು ಟ್ರೈಲರ್ ನೋಡಿದವರು ಸಿನಿಮಾ ನೋಡಲು ಬಹಳ ಕಾತರರಾಗಿದ್ದಾರೆ.
ಬೆಂಗಳೂರಿನ ಜಯನಗರ ನಿವಾಸಿ ಮಧುಸೂದನ್ ಆಚಾರ್ - ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ನಡೆಯುವ ಕಥೆ 'ಆಚಾರ್ & ಕೋ'. ಇದೊಂದು ಅವಿಭಕ್ತ ಕುಟುಂಬದ ಕಥೆ ಆಗಿದ್ದು ಕಾಮಿಡಿ ಟಚ್ ಕೊಟ್ಟು ಬಹಳ ಸೊಗಸಾಗಿ ಸಿನಿಮಾ ಕಟ್ಟಿಕೊಟ್ಟಿರೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಮಧುಸೂದನ್ ಆಚಾರ್ ಪಾತ್ರದಲ್ಲಿ ಹಿರಿಯ ನಟ ಅಶೋಕ್, ಸಾವಿತ್ರಿ ಆಚಾರ್ ಪಾತ್ರದಲ್ಲಿ ಸುಧಾ ಬೆಳವಾಡಿ ಅಭಿನಯಿಸಿದ್ದಾರೆ.

ಅರವತ್ತರ ದಶಕದಲ್ಲಿ ನಡೆಯುವ ಕಥೆ ಇದಾಗಿದ್ದು ಸ್ವಲ್ಪ ಕೂಡ ಅಧುನಿಕತೆ ಕಾಣಬಾರದು ಎನ್ನುವ ಕಾರಣಕ್ಕೆ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಜೊತೆ ಈ ಸಿನಿಮಾ ಬಗ್ಗೆ ಸಿಂಧು ಶ್ರೀನಿವಾಸಮೂರ್ತಿ ಮಾತನಾಡಿದ್ದರಂತೆ. ಆದರೆ ಈ ಸಿನಿಮಾ ಶುರುವಾಗುವ ವೇಳೆಗೆ ಅಪ್ಪು ಇರಲಿಲ್ಲ. ಅಂತೂ ಇಂತೂ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಈ ತಿಂಗಳಾಂತಕ್ಕೆ ಸಿನಿಮಾ ತೆರೆಗೆ ಬರಲಿದೆ.
ಪ್ರಥಮ್ ಟ್ವೀಟ್ ವೈರಲ್
'ಆಚಾರ್ & ಕೋ' ಸಿನಿಮಾ ಬಗ್ಗೆ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಮಾಡಿರುವ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾ ಮಾಡೋರೆಲ್ಲರೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೇಡಂ ಸಹಾಯ ತಗೊಳ್ತಾರೆ, ನಾನು ಸಹಿತ ಎಲ್ಲರೂ ಅಪ್ಪು ಹೆಸರನ್ನು ಬೇಕೆಂದಾಗಲೆಲ್ಲಾ ಬಳಸಿಕೊಂಡಿದ್ದೀವಿ; ಯಾರಾದ್ರೂ ಅವ್ರ ಪ್ರೊಡಕ್ಷನ್ ಸಿನಿಮಾ ಬರೋವಾಗ ನೆನಪಿಸಿಕೊಂಡ್ರಾ? ಇಲ್ಲ. ಇದೇ 28, ಪಿಆರ್‌ಕೆ ಪ್ರೊಡಕ್ಷನ್ಸ್ ಸಿನಿಮಾ 'ಆಚಾರ್ಯ & ಕೋ' ಥಿಯೇಟರ್‌ನಲ್ಲಿ ನೋಡೋಣ. ಅಶ್ವಿನಿ ಮೇಡಂ ನಿಮ್ಮ ಜೊತೆ ನಾವಿರ್ತೀವಿ ಅನ್ನೋ ನಿಜವಾದ ಅರ್ಥ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ನೋಡಿದ್ದಾರೆ ಅಶ್ವಿನಿ
ಇನ್ನು 'ಆಚಾರ್ಯ & ಕೋ' ಸಿನಿಮಾ ಟ್ರೈಲರ್ ರಿಲೀಸ್ ವೇಳೆ ಮಾತನಾಡಿದ್ದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, "ನಾನು ಸಿನಿಮಾ ನೋಡಿದ್ದೇನೆ. ಚೆನ್ನಾಗಿದೆ. ಸಿಂಧು ಶ್ರೀನಿವಾಸಮೂರ್ತಿ ಮತ್ತು ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಬಿಂದುಮಾಲಿನಿ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಆಶಿಕ್ ಕುಸುಗೊಳ್ಳಿ ಸಂಕಲನ ಇದೆ. ತ್ರಿಲೋಕ್ ತ್ರಿವಿಕ್ರಮ ಸಂಭಾಷಣೆ ಚಿತ್ರದ ಹೈಲೆಟ್ ಎನ್ನಲಾಗ್ತಿದೆ.
'ನಟ ಭಯಂಕರ' ಚಿತ್ರಕ್ಕೆ ಬೆಂಬಲ
ಪ್ರಥಮ್ ನಿರ್ದೇಶಿಸಿ, ನಟಿಸಿದ 'ನಟ ಭಯಂಕರ' ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬೆಂಬಲ ಸೂಚಿಸಿದ್ದರು. ಚಿತ್ರದ ಹಾಡೊಂದನ್ನು ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದರು. ಅದಕ್ಕೂ ಮುನ್ನ ಸಿನಿಮಾ ಟ್ರೈಲರ್ ನೋಡಿ ಮನೆಗೆ ಕರೆದು ಪ್ರಥಮ್ ಮತ್ತವರ ತಂಡಕ್ಕೆ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಈ ವಿಚಾರವನ್ನು ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಸ್ವತಃ ಪ್ರಥಮ್ ಹೇಳಿದ್ದರು.
ಪ್ರಥಮ್ ಮದುವೆ ನಿಶ್ಚಯ
ಇತ್ತೀಚೆಗೆ ಪ್ರಥಮ್ ಸದ್ದಿಲ್ಲದೇ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು. ಪ್ರಥಮ್ ಮಂಡ್ಯ ಮೂಲದ ಭಾನುಶ್ರೀ ಎಂಬುವವರ ಕೈ ಹಿಡಿಯುತ್ತಿದ್ದಾರೆ. ಜೂನ್ 12ರಂದು ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಮದುವೆ ಪ್ಲ್ಯಾನ್ ಬಗ್ಗೆ ಕೂಡ ಪೋಸ್ಟ್ ಮಾಡಿದ್ದರು. ಶೀಘ್ರದಲ್ಲೇ ಮದುವೆ ದಿನಾಂಕ ಘೋಷಿಸುವುದಾಗಿ ಹೇಳಿದ್ದರು.


Click it and Unblock the Notifications











