5 ದಿನಗಳಲ್ಲಿ ಪ್ರಥಮ್ 'ನಟ ಭಯಂಕರ' ಚಿತ್ರ ಮಾಡಿದ ಕಲೆಕ್ಷನ್ ಎಷ್ಟು?
ಒಳ್ಳೆ ಹುಡುಗ ಪ್ರಥಮ್ ನಟನೆಯ ಹಾಗೂ ನಿರ್ದೇಶನದ ನಟ ಭಯಂಕರ ಚಿತ್ರ ಬಿಡುಗಡೆಯಾಗಿ ಐದು ದಿನಗಳ ಓಟವನ್ನು ಪೂರೈಸಿದೆ. ಕಳೆದ ಶುಕ್ರವಾರ ( ಫೆಬ್ರವರಿ 7 ) ಬಿಡುಗಡೆಗೊಂಡ ಈ ಚಿತ್ರ ಪ್ರಥಮ್ ನಿರ್ದೇಶನ ಮಾಡಿರುವ ಮೊದಲ ಚಿತ್ರ ಇದಾಗಿದ್ದು, ಚಿತ್ರಕ್ಕೆ ಸಿನಿ ರಸಿಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇನ್ನು ಕಲೆಕ್ಷನ್ ವಿಚಾರವಾಗಿ ಈ ಚಿತ್ರ ವಿವಾದಕ್ಕೆ ಒಳಗಾಗಿದೆ. ಹಾಗೆಂದ ಮಾತ್ರಕ್ಕೆ ಚಿತ್ರತಂಡ ಸುಳ್ಳು ಕಲೆಕ್ಷನ್ ತೋರಿಸಿ ಟ್ರೋಲ್‌ಗೆ ಒಳಗಾಗಿದೆ ಎಂದಲ್ಲ. ಬದಲಾಗಿ ಕಾಣದ ಕೈಗಳು ಹಬ್ಬಿಸಿದ ನಕಲಿ ಕಲೆಕ್ಷನ್ ಪೋಸ್ಟರ್‌ನಿಂದಾಗಿ ಚಿತ್ರ ವಿವಾದಕ್ಕೆ ಒಳಗಾಗಿದೆ. ಹೌದು, ಚಿತ್ರ ಬಿಡುಗಡೆಯಾಗಿ ಮೊದಲ ದಿನದ ಪ್ರದರ್ಶನವನ್ನು ಪೂರೈಸಿದ ಬೆನ್ನಲ್ಲೇ ಚಿತ್ರ ಮೊದಲ ದಿನವೇ ಬರೋಬ್ಬರಿ 35 ಕೋಟಿ ಗಳಿಸಿ ಚಂದನವನದ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ ಎಂಬ ಪೋಸ್ಟರ್ ಹರಿದಾಡಿತ್ತು.
ಬಳಿಕ ಎರಡು ದಿನಕ್ಕೆ 109 ಕೋಟಿ ಗಳಿಕೆ ಮಾಡಿ ಅಬ್ಬರಿಸಿದೆ ಎಂಬ ಪೋಸ್ಟರ್ ಸಹ ಹರಿದಾಡಿತ್ತು. ಇನ್ನು ಈ ನಕಲಿ ಕಲೆಕ್ಷನ್ ಅನ್ನು ಸ್ಟಾರ್ ನಟರ ಚಿತ್ರಗಳ ಕಲೆಕ್ಷನ್ ಜತೆ ಹೋಲಿಕೆ ಮಾಡಿ ಟ್ರೋಲ್‌ಗಳನ್ನು ಮಾಡಲಾಗಿದ್ದು, ಚಿತ್ರ ವಿವಾದಕ್ಕೆ ಸಿಲುಕಲು ಕಾರಣವಾಗಿತ್ತು. ಮೊದಲೇ ಕನ್ನಡ ಚಿತ್ರರಂಗದಲ್ಲಿ ಚಿತ್ರಗಳು ಮೊದಲ ದಿನ ಎಷ್ಟು ಗಳಿಸಿದವು, ಎರಡನೇ ದಿನ ಎಷ್ಟು ಗಳಿಸಿದವು ಹಾಗೂ ನಂತರದ ದಿನಗಳಲ್ಲಿ ಎಷ್ಟು ಗಳಿಸಿದವು ಎಂಬುದನ್ನು ಅಧಿಕೃತವಾಗಿ ಘೋಷಿಸುವ ರೂಢಿ ಇಲ್ಲದ ಕಾರಣ ಈ ನಕಲಿ ಕಲೆಕ್ಷನ್ ಪೋಸ್ಟರ್‌ಗಳು ಕೆಲವರಲ್ಲಿ ಗೊಂದಲವನ್ನೂ ಸಹ ಮೂಡಿಸಿದವು. ಆದರೆ ಬಾಕ್ಸ್ ಆಫೀಸ್ ಟ್ರ್ಯಾಕರ್‌ಗಳು ಈ ಚಿತ್ರ ಯಾವ ದಿನದಂದು ಎಷ್ಟು ಗಳಿಸಿವೆ ಎಂಬ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು, ಅವುಗಳ ಮಾಹಿತಿ ಈ ಕೆಳಕಂಡಂತಿದೆ..

ಐದು ದಿನಗಳ ಕಲೆಕ್ಷನ್ ಎಷ್ಟು?
ಸ್ಯಾಕ್‌ನಿಕ್ ಎಂಬ ಬಾಕ್ಸ್ ಆಫೀಸ್ ಕಲೆಕ್ಷನ್ ವೆಬ್ ತಾಣ ನೀಡಿರುವ ಮಾಹಿತಿ ಪ್ರಕಾರ ನಟ ಭಯಂಕರ ಚಿತ್ರ ಬಿಡುಗಡೆಯಾದ ದಿನ 28 ಲಕ್ಷ, ಎರಡನೇ ದಿನ 36 ಲಕ್ಷ, ಮೂರನೇ ದಿನ 58 ಲಕ್ಷ, ನಾಲ್ಕನೇ ದಿನ 22 ಲಕ್ಷ ಹಾಗೂ ಐದನೇ ದಿನ 18 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ ಎಂದು ಪ್ರಕಟಿಸಲಾಗಿದ್ದು, ಐದು ದಿನಗಳಲ್ಲಿ ಚಿತ್ರ 1.62 ಕೋಟಿ ರೂಪಾಯಿಗಳ್ನು ಗಳಿಸಿದೆ ಎನ್ನಲಾಗಿದೆ.

ಅಧಿಕೃತ ಮಾಹಿತಿ ಇಲ್ಲ
ಇನ್ನು ಕನ್ನಡದ ಬಹುತೇಕ ಸಿನಿಮಾಗಳ ಹಾಗೆ ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ ನಿರ್ಮಾಪಕರೂ ಸಹ ಚಿತ್ರದ ಅಧಿಕೃತ ಕಲೆಕ್ಷನ್ ಎಷ್ಟು ಎಂಬುದನ್ನು ಘೋಷಿಸಿಲ್ಲ. ಇನ್ನು ನಟ ಹಾಗೂ ನಿರ್ದೇಶಕ ಪ್ರಥಮ್ ತಮ್ಮ ಸಿನಿಮಾ ಚೆನ್ನಾಗಿದ್ದು, ತಾವು ನಿರೀಕ್ಷಿಸಿದ ಮಟ್ಟಕ್ಕೆ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ, ದಯವಿಟ್ಟು ಬಂದು ಚಿತ್ರ ನೋಡಿ, ತುಂಬಾ ಕಷ್ಟಪಟ್ಟು ಚಿತ್ರ ಮಾಡಿದ್ದೇನೆ ಎಂದು ಕಣ್ಣೀರು ಹಾಕಿದ್ದರು.

ಫೇಕ್ ಕಲೆಕ್ಷನ್ ಬಗ್ಗೆ ಸ್ಪಷ್ಟನೆ ನೀಡಿದ್ದ ಪ್ರಥಮ್
ಮೊದಲಿಗೆ ಚಿತ್ರ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದೆ ಹಾಗೂ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದೆ ಎಂದು ನಕಲಿ ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಹರಿಯಬಿಟ್ಟು ವಿವಾದ ಸೃಷ್ಟಿಸಿದ್ದರು. ಈ ಕುರಿತಾಗಿ ಪ್ರತಿಕ್ರಿಯಿಸಿದ್ದ ಪ್ರಥಮ್ ಇಷ್ಟು ಕಲೆಕ್ಷನ್ ಅನ್ನು ನನ್ನ ಚಿತ್ರ ಮಾಡಿಲ್ಲ, ಇದೆಲ್ಲವೂ ನಕಲಿ ಎಂದು ಟ್ವೀಟ್ ಮಾಡಿದ್ದರು. ಈ ಮೂಲಕ ಹರಿದಾಡುತ್ತಿದ್ದ ಕಲೆಕ್ಷನ್ ಪೋಸ್ಟರ್‌ಗಳನ್ನು ನಂಬಬೇಡಿ ಎಂದು ತಿಳಿಸಿದ್ದರು.


Click it and Unblock the Notifications











