ಗಣೇಶ್ ಗೆ ಜೋಡಿಯಾದ ಮತ್ತೊಬ್ಬ ಕೇರಳ ಸುಂದರಿ
ನಟ ಗಣೇಶ್ ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಪೈಕಿ 'ಗೀತಾ' ಸಿನಿಮಾ ಕೂಡ ಒಂದಾಗಿದೆ. 'ಆಟೋ ರಾಜ' ಬಳಿಕ ಶಂಕರ್ ನಾಗ್ ಅವರ ಸಿನಿಮಾದ ಮೂಲಕ ಮತ್ತೆ ಗಣೇಶ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
'ಗೀತಾ' ಸಿನಿಮಾದ ಮೇಲೆ ಈಗಾಗಲೇ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಜೊತೆ ಜೊತೆಗೆ ಸಿನಿಮಾ ಸಾಕಷ್ಟು ವಿಚಾರಗಳಿಂದ ಆಗಾಗ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಮೂರು ಜನ ನಾಯಕಿಯರಿದ್ದು, ಈ ಪೈಕಿ ಇಬ್ಬರ ಆಯ್ಕೆ ಆಗಿದೆ.
ಈ ಹಿಂದೆ ಮಲೆಯಾಳಂ ನಟಿ ಪಾರ್ವತಿ ಅರುಣ್ ಸಿನಿಮಾಗೆ ನಾಯಕಿಯಾಗಿ ಫಿಕ್ಸ್ ಆಗಿದ್ದರು. ಈಗ ಮತ್ತೊಬ್ಬ ಕೇರಳ ಸುಂದರಿ ಈ ಚಿತ್ರದಲ್ಲಿ ನಾಯಕಿ ಆಗುವ ಅವಕಾಶ ಪಡೆದಿದ್ದಾರೆ. ಮುಂದೆ ಓದಿ...

ಪ್ರಯಗಾ ಮಾರ್ಟಿನ್
ಗಣೇಶ್ ಗೆ ಈಗ ಮತ್ತೊಬ್ಬ 'ಗೀತಾ' ಸಿಕ್ಕಿದ್ದಾರೆ. ಅರ್ಥಾತ್ ಈ ಸಿನಿಮಾಗೆ ನಾಯಕಿಯಾಗಿ ಪ್ರಯಗಾ ಮಾರ್ಟಿನ್ ಆಯ್ಕೆ ಆಗಿದ್ದಾರೆ. ಇದು ಕನ್ನಡದಲ್ಲಿ ಅವರ ಮೊದಲ ಸಿನಿಮಾವಾಗಿದೆ. ಮೊದಲ ಚಿತ್ರದಲ್ಲಿಯೇ ಪ್ರಯಗಾ ಗೋಲ್ಡನ್ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

14 ನೇ ಸಿನಿಮಾ
'ಗೀತಾ' ಪ್ರಯಗಾ ಮಾರ್ಟಿನ್ ಅವರ 14 ನೇ ಸಿನಿಮಾವಾಗಿದೆ. ಬಾಲ ನಟಿಯಾಗಿ ಸಿನಿಮಾ ಜರ್ನಿ ಶುರು ಮಾಡಿದ ಪ್ರಯಗಾ ಬಳಿಕ ಪೂರ್ಣ ಪ್ರಮಾಣದ ನಟಿಯಾಗಿ ಗುರುತಿಸಿಕೊಂಡರು. ಈ ವರ್ಷ ಅವರು ಮೂರು ಮಲೆಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಎರಡನೇ ನಾಯಕಿ
'ಗೀತಾ' ಸಿನಿಮಾದಲ್ಲಿ ಒಟ್ಟು ಮೂರು ನಾಯಕಿಯರು ಇದ್ದಾರೆ. ಒಂದು ಪಾತ್ರದಲ್ಲಿ ಪಾರ್ವತಿ ಅರುಣ್ ಪಕ್ಕಾ ಆಗಿತ್ತು. ಈಗ ಇನ್ನೊಬ್ಬ ನಾಯಕಿಯಾಗಿ ಪ್ರಯಗಾ ಮಾರ್ಟಿನ್ ಫಿಕ್ಸ್ ಆಗಿದ್ದಾರೆ. ಉಳಿದ ಒಂದು ಪಾತ್ರಕ್ಕೆ ನಾಯಕಿಯರು ಇನ್ನೂ ಆಯ್ಕೆ ಆಗಬೇಕಿದೆ. ಚಿತ್ರದ ಕೊನೆಯ ನಾಯಕಿಯರ ಪಟ್ಟ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ಡಿಸೆಂಬರ್ 3 ರಿಂದ ಚಿತ್ರೀಕರಣ
ಈ ಸಿನಿಮಾದ ಚಿತ್ರೀಕರಣ ಡಿಸೆಂಬರ್ 3 ರಿಂದ ಶುರು ಆಗಲಿದೆ. ಸಿನಿಮಾವನ್ನು ಗಣೇಶ್ ತಮ್ಮ ಬ್ಯಾನರ್ ನಲ್ಲಿಯೇ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ 'ಮುಗುಳುನಗೆ' ಚಿತ್ರದ ನಿರ್ಮಾಪಕ ಸೈಯದ್ ಸಲಾಂ ಕೂಡ ಹಣ ಹಾಕುತ್ತಿದ್ದಾರೆ. ಶ್ರೀಶಕುದುವಳ್ಳಿ ಛಾಯಾಗ್ರಹಣ ಸಿನಿಮಾಗೆ ಇದೆ.

ವಿಜಯ್ ನಾಗೇಂದ್ರ ಅವರ ಮೊದಲ ಚಿತ್ರ
ವಿಜಯ್ ನಾಗೇಂದ್ರ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ರಾಜಕುಮಾರ' ಸೇರಿದಂತೆ ಅನೇಕ ಸಿನಿಮಾಗಳಿಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ಇವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾಗಿದೆ. ವಿ ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡಲಿದ್ದಾರೆ.


Click it and Unblock the Notifications











