»   » ಉಗ್ರನ ಜೇಬಲ್ಲಿ ಪ್ರೀತಿ

ಉಗ್ರನ ಜೇಬಲ್ಲಿ ಪ್ರೀತಿ

Posted By: Staff
Subscribe to Filmibeat Kannada

ಮುಂಬಯಿ : ಬಾಲಿವುಡ್‌ ಚಿತ್ರಗಳಿಗೆ ಹಣ ಪೂರೈಸುವ ಭರತ್‌ ಶಾ ಬಂಧನದ ನಂತರ ಹಿಂದಿ ಚಿತ್ರ ತಾರೆಗಳು ಭೂಗತ ಜಗತ್ತಿನೊಟ್ಟಿಗೆ ಕೊಂಡಿ ಕಳಚಿಕೊಂಡಿದ್ದಾರೆ ಎಂದು ನಂಬಲಾಗಿತ್ತು. ಆದರೆ ಹಾಗೇನೂ ಆಗಿಲ್ಲ ಎನ್ನುವಂತಿದೆ ಈ ಸುದ್ದಿ...

ಡಿಸೆಂಬರ್‌ 13ರಂದು ಸಂಸತ್ತಿನ ಮೇಲೆ ದಾಳಿಯಿಟ್ಟು, ಹತರಾದ ಐವರು ಭಯೋತ್ಪಾದಕರ ಲ್ಯಾಪ್‌ಟಾಪಿನಲ್ಲಿ ಹಿಂದಿ ಚಿತ್ರತಾರೆಗಳ ವಿಳಾಸ ವಗೈರೆಗಳು ಸಿಕ್ಕಿವೆ. ಅಲ್ಲದೆ ಒಬ್ಬಾತನ ಜೇಬಿನಲ್ಲಿ ಸಿಕ್ಕಿರುವ ಚೀಟಿಯಲ್ಲಿ ನಟಿ ಪ್ರೀತಿ ಜಿಂಟಾ ಇ-ಮೇಲ್‌ ಐಡಿ ದೊರೆತಿದ್ದು, ಬಾಲಿವುಡ್‌ನ ಸದ್ಯದ ವಿವಾದದ ಅಲೆ ಇದು.

ಆಸ್ಟ್ರೇಲಿಯಾದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಪ್ರೀತಿಯನ್ನು ಮಾಧ್ಯಮಗಳು ಮೊದಲು ಸಂಪರ್ಕಿಸಿದಾಗ, ಆಕೆಗೆ ಈ ವಿಷಯ ಆಶ್ಚರ್ಯದೊಟ್ಟಿಗೆ ಭಯ ಹುಟ್ಟಿಸಿತು. ಮಾತೇ ಹೊರಡದಷ್ಟು ಶಾಕ್‌ ಆ ಕ್ಷಣ ಅವರಿಗಾಯಿತು. ಆದರೀಗ ಪ್ರೀತಿ ಸೇರಿದಂತೆ ಭಯೋತ್ಪಾದಕರ ಲ್ಯಾಪ್‌ಟಪ್‌ನಲ್ಲಿರುವ ಯಾವ ಸಿನಿ ತಾರೆಯೂ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.

ಭಯೋತ್ಪಾದಕರ ಚೀಟಿಯಲ್ಲಿರುವ ಪ್ರೀತಿ ಇ- ಮೇಲ್‌ ವಿಳಾಸ pre_zai@hotmail.com. ಆದರೆ ಪ್ರೀತಿ ಜಿಂಟಾ ಕಾರ್ಯದರ್ಶಿ ಪಂಕಜ್‌ ಕರ್‌ಬಂದ ಹೇಳುವಂತೆ ಇದು ಪ್ರೀತಿ ಅವರ ಇ- ಮೇಲ್‌ ಅಲ್ಲವೇ ಅಲ್ಲ. ಅವರು ಕಳೆದ ಆರೇಳು ತಿಂಗಳಿಂದ ಇ- ಮೇಲ್‌ ಕಳುಹಿಸುವ ಗೊಡವೆಗೇ ಹೋಗಿಲ್ಲವಂತೆ. ಕಾರಣ, ಕೈತುಂಬಾ ಚಿತ್ರಗಳಿವೆ. ಇಂಟರ್ನೆಟ್‌ ಮುಂದೆ ಕೂರಲು ಟೈಮಿಲ್ಲ. ಪಂಕಜ್‌ ಪ್ರಕಾರ ಪ್ರೀತಿ ಇ- ಮೇಲ್‌ ಐಡಿ spacejunky@hotmail.com. ಈ ಮಾಹಿತಿ ಕೊಟ್ಟ ತಕ್ಷಣವೇ ಈ ಇ- ಮೇಲ್‌ ಈಗ ಕೆಲಸ ಮಾಡದೆಯೂ ಇರಬಹುದು. ಯಾಕೆಂದರೆ 6 ತಿಂಗಳಿಂದ ಪ್ರೀತಿ ಇದನ್ನು ಉಪಯೋಗಿಸಿಯೇ ಇಲ್ಲ ಎಂದು ಹೇಳಲು ಪಂಕಜ್‌ ಮರೆಯಲಿಲ್ಲ.

'ದಿಲ್‌ ಸೆ' ಹಾಗೂ 'ಮಿಷನ್‌ ಕಾಶ್ಮೀರ್‌' ಎಂಬ ಭಯೋತ್ಪಾದಕರ ಸುತ್ತ ಹೆಣೆದ ಕತೆಗಳುಳ್ಳ ಹಿಂದಿ ಸಿನಿಮಾಗಳಲ್ಲಿ ಪ್ರೀತಿ ನಟಿಸಿದ್ದಾರೆ. ಇಂಥಾ ಸಿನಿಮಾಗಳಲ್ಲಿ ನಟಿಸಿರುವುದಕ್ಕೆ ಉಗ್ರರಿಗೆ ಕೋಪ ಬಂದು, ಜಿಂಟಾ ಅವರನ್ನು ಉಡಾಯಿಸಲು ಸ್ಕೆಚ್‌ ಹಾಕಿದ್ದರು ಎಂಬ ಆಧಾರ ರಹಿತ ಮಾತೂ ಕೇಳಿಬರುತ್ತಿದೆ. ಆದರೆ ಈ ಹಿಂದೆ ಜಿಂಟಾಗೆ ಯಾವುದೇ ರೀತಿಯ ನೇರ ಧಮಕಿ ಬಂದಿಲ್ಲ.

ಚೋರಿ ಚೋರಿ... : ಪ್ರೀತಿ ನಟಿಸಿದ್ದ 'ಚೋರಿ ಚೋರಿ ಚುಪ್ಕೆ ಚುಪ್ಕೆ' ಚಿತ್ರದ ನಿರ್ಮಾಪಕ ನಜೀಂ ರಿಜ್ವಿಗೂ ಭೂಗತ ಜಗತ್ತಿಗೂ ಕೊಂಡಿಯಿದೆ ಎಂದು ಪೊಲೀಸರು ಬಲವಾಗಿ ನಂಬಿದ್ದರು. ನಜೀಂ ಪೊಲೀಸರ ಅತಿಥಿಯೂ ಆಗಿದ್ದರು. ಆ ಸಂದರ್ಭದಲ್ಲಿ ಪ್ರೀತಿ ಕೂಡ ವಿಚಾರಣೆಗೊಳಗಾಗಿದ್ದರು. ಚೋರಿ ಚೋರಿ.. ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಬಕ್ಕ ಬಾರಲು ಬಿದ್ದರೂ, ವಿವಾದದ ಕಾರಣದಿಂದಾಗಿ ಸಾಕಷ್ಟು ಸದ್ದು ಮಾಡಿತ್ತು. ಈಗ ಭಯೋತ್ಪಾದಕರ ಬಳಿ ಪ್ರೀತಿ ಮಾಹಿತಿ ಸಿಕ್ಕಿರುವುದು ಮುಂಬೈ ಪೊಲೀಸರ ಮಾಫಿಯಾ ಶಿಕಾರಿಗೆ ಹೊಸ ತಿರುವು ಕೊಟ್ಟಿದೆ ಎಂಬುದಂತೂ ನಿಜ.

ಬಾಲಿವುಡ್‌ ಸಂಪೂರ್ಣವಾಗಿ ಭಯೋತ್ಪಾದಕರ ಭೀತಿಯಲ್ಲಿ ಅದ್ದಿ ತೆಗೆದಂತಿದೆ. ಅಲ್ಲಿ ಭೂಗತ ದೊರೆಗಳು ಚಿತ್ರ ನಿರ್ಮಾಪಕರಿಗೆ ದುಡ್ಡು ಕೊಡುವುದು, ವಿದೇಶೀ ಹಂಚಿಕೆಗೆ ಕಿತ್ತಾಟ ನಡೆಸುವುದು, ಮನ ಬಂದಾಗ ತಾರೆಯರ ಲೈವ್‌ ಷೋ ಆಯೋಜಿಸಿ ಕಾಡಿಸುವುದು ಸಾಮಾನ್ಯ. ಭೂಗತ ದೊರೆಗಳ ಇಶಾರೆಗೆ ಒಲ್ಲೆ ಎನ್ನುವ ನಟ- ನಟಿಯರಿಗೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದೇ ಬಾಲಿವುಡ್‌ ನಂಬಿದೆ. ಯಾರದೇ ಕಾಲ್‌ಶೀಟನ್ನು ತಿರುಗಾ ಮುರುಗಾ ಮಾಡುವಷ್ಟು ಶಕ್ತ ಮುಂಬೈ ಮಾಫಿಯಾ.

ಅಂದಹಾಗೆ, ಪ್ರೀತಿ ಮುಂದಿನ ವರ್ಷ ಜನವರಿ 15ರವರಗೆ ಪೂರಾ ಬ್ಯುಸಿ. ಅಲ್ಲಿಯವರೆಗೆ ಭಾರತಕ್ಕೆ ಮರಳುವುದಿಲ್ಲ. ಈಗ ಎದುರಾಗಿರುವ ಆತಂಕ ಭಾರತಕ್ಕೆ ವಾಪಸ್ಸು ಬರುವ ಅವರ ಕಾರ್ಯಕ್ರಮವನ್ನು ಮುಂದೂಡುವಂತೆ ಮಾಡಿದರೂ ಆಶ್ಚರ್ಯವಿಲ್ಲ.

ಮುಂಬೈ ಮಾಫಿಯಾಗೂ ಉಗ್ರರಿಗೂ ವ್ಯಾಪಕ ಸಂಬಂಧವಿದೆ ಎಂಬುದು ಈ ಹೊಸ ಬೆಳವಣಿಗೆಯಲ್ಲಿ ಹೊರ ನೋಟಕ್ಕೆ ಕಾಣುತ್ತಿದೆ. ಇನ್ನು ಮುಂದೆ ಬಾಲಿವುಡ್‌ ಸ್ಥಿತಿ ಯಾವ ಮಟ್ಟಕ್ಕೆ ತಲುಪುವುದೋ ಏನೋ?

English summary
Bollywood actress Preity Zinta is confused, but underworld Mafia and terrorists know what they are doing !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada