ಮೇ 24ರಂದು ಬ್ಲಾಕ್ ಬಸ್ಟರ್ ಸಮಾಚಾರ ನೀಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ...!
ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂರು ವರ್ಷಕ್ಕೊಂದು ಚಿತ್ರ ಮಾಡ್ತಾರೆ ಅನ್ನುವ ಪ್ರೀತಿ ತುಂಬಿದ ತಕರಾರೊಂದು ಇವರ ಅಭಿಮಾನಿಗಳಲ್ಲಿದೆ. ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಇವರ ಭಕ್ತಗಣ ಮೇಲಿಂದ ಮೇಲೆ ಮನವಿ ಪತ್ರವನ್ನೂ ಸಲ್ಲಿಸಿದ್ದು ಇದೆ.
ಧ್ರುವ ಕೂಡ ತಮ್ಮ VIP ಬಣದಿಂದ ಬಂದ ಈ ಮನವಿ ಪತ್ರವನ್ನ ಗಂಭೀರವಾಗಿ ಪರಿಗಣಿಸಿ ಕೆಲಸಕ್ಕೆ ಇಳಿದಿದ್ದಾರೆ ಕೂಡ. ಆದರೂ ಅದ್ಯಾಕೋ.. ಈ ತ್ರೈವಾರ್ಷಿಕ ಯೋಜನೆ ಮಾತ್ರ ಧ್ರುವ ಸರ್ಜಾ ಅವರನ್ನ ನೆರಳಿನಂತೆ ಹಿಂಬಾಲಿಸುತ್ತಾನೇ ಇದೆ. ಇದಕ್ಕೆ ಪೂರಕವಾಗಿ ಧ್ರುವ ಅಭಿನಯದ ಮಾರ್ಟಿನ್ ಮುಹೂರ್ತ ಭಾಗ್ಯ ಕಂಡು ಮೂರು ವರ್ಷಗಳಾಗಿವೆ. ಆದರೂ ಬಿಡುಗಡೆಯ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ.

ಇನ್ನೂ.. ಧ್ರುವ ಕೈಯಲ್ಲಿ ಇದೊಂದೇ ಸಿನಿಮಾ ಅಲ್ಲ. ಪ್ರೇಮ್ ನಿರ್ದೇಶನದ ಕೆ.ಡಿ ಚಿತ್ರ ಕೂಡ ಇದೆ. ಕಾಕತಾಳೀಯ.. ಈ ಚಿತ್ರ ಕೂಡ ಆರಂಭವಾಗಿ ಮೊನ್ನೆಯ ಏಪ್ರಿಲ್ ಗೆ ಎರಡು ವರ್ಷ ಕಳೆದಿದೆ. ಆದರೆ ಅದರ ಬಗ್ಗೆ ಕೂಡ ಯಾವ ಮಾಹಿತಿ ಇಲ್ಲ. ಈ ಕಾರಣಕ್ಕೆ ಧ್ರುವ ಅವರ ಅಭಿಮಾನಿಗಳಲ್ಲಿಯೇ ಅಸಹನೆ-ಅಸಮಾಧಾನದ ಹೊಗೆಯಾಡ್ತಿದೆ. ಸಂದರ್ಭ- ಸನ್ನಿವೇಶ ಹೀಗಿರುವಾಗ ಈಗ ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನ ನೀಡಲು ಸಿದ್ಧರಾಗಿದ್ದಾರೆ.
ಹೌದು, ಮಾರ್ಟಿನ್ ಕಥೆ ಎಲ್ಲಿಗೆ ಬಂತು, ಬಿಡುಗಡೆ ಯಾವತ್ತು ಎಂಬ ಇತ್ಯಾದಿ ವಿಚಾರ ಸದ್ಯಕ್ಕೆ ಗೊತ್ತಿಲ್ಲವಾದರೂ ಧ್ರುವ ಸರ್ಜಾ ಸದ್ಯಕ್ಕೆ ತಮ್ಮ ಕೆಡಿ ಚಿತ್ರದ ಕುರಿತು ಬ್ಲಾಕ್ ಬಸ್ಟರ್ ಸಮಾಚಾರ ನೀಡಲು ಮುಂದಾಗಿದ್ದಾರೆ. ಚಿತ್ರದ ಬಿಡುಗಡೆ ಮತ್ತು ಚಿತ್ರಕ್ಕೆ ಸಂಬಂಧಿಸಿದ ಆಚೀಚೆ ವಿಚಾರದ ಸುತ್ತ ಬ್ರೇಕಿಂಗ್ ನ್ಯೂಸ್ ನೀಡಲು ಸಿದ್ಧರಾಗಿದ್ದಾರೆ.

ಹೌದು, ಇದೇ ಮೇ 24ಕ್ಕೆ ನಮ್ಮ - ನಿಮ್ಮೆಲ್ಲರ ಮುಂದೆ ಕೆಡಿ ಚಿತ್ರದ ಕುರಿತು ಮಾಹಿತಿಯನ್ನ ಧ್ರುವ ಸರ್ಜಾ ಹಂಚಿಕೊಳ್ಳಲಿದ್ದಾರೆ. ಇಂಥಹದ್ದೊಂದು ಸುದ್ದಿ ಸದ್ಯಕ್ಕೆ ಗಾಂಧಿನಗರದಲ್ಲಿ ಹಬ್ಬಿದೆ.
ಮೇ 24ಕ್ಕೆ ಧ್ರುವ ಸರ್ಜಾ ಕೆಡಿ ಚಿತ್ರದ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡ್ತಾರಾ ಗೊತ್ತಿಲ್ಲ. ಆದರೆ.. ಸದ್ಯಕ್ಕೆ ಈ ಸುದ್ದಿ ಕೇಳಿ ಗಾಂಧಿನಗರಕ್ಕೆ ಗಾಂಧಿನಗರ ಎಚ್ಚೆತ್ತುಕೊಂಡಿದೆ. ಮೇ 24ಕ್ಕೆ ಧ್ರುವ ಯಾವ ಸುದ್ದಿಯನ್ನ ಕೊಡಬಹುದು ಎಂಬ ಲೆಕ್ಕಾಚಾರ ಹಾಕ್ತಿದೆ.
ಅಂದಹಾಗೇ ಧ್ರುವ ಸರ್ಜಾ ಅವರ ಈ ಕೆಡಿ ಅವತಾರಕ್ಕೆ ಸಾರಥ್ಯವನ್ನ ವಹಿಸಿಕೊಂಡಿರುವುದು ಬೇರೆ ಯಾರು ಅಲ್ಲ ಬದಲಿಗೆ ಪ್ರೇಮ್. ಇನ್ನೂ ನಿಮಗೆ ಗೊತ್ತು.. ಸಿನಿಮಾ ರಿಲೀಸ್ ಗೂ ಮುನ್ನವೇ ನಿರೀಕ್ಷೆಗೂ ಮೀರಿ ಮಾರ್ಕೆಟ್ ಮಾಡುವ ಬುದ್ದಿವಂತ ನಿರ್ದೇಶಕರ ಪೈಕಿ ಜೋಗಿ ಪ್ರೇಮ್ ಪ್ರಥಮ ಸ್ಥಾನದಲ್ಲಿರುತ್ತಾರೆ. ಸಿನಿಮಾ ಹೇಗಾದರೂ ಇರಲಿ.. ಬಿಡಲಿ.. ಆದರೆ ಬಂಡವಾಳ ಹೂಡಿದ ನಿರ್ಮಾಪಕರಿಗಂತೂ ಪ್ರೇಮ್ ಮೋಸವಾಗದಂತೆ ನೋಡಿಕೊಳ್ಳುತ್ತಾರೆ ಎಂಬುದು ಪ್ರೇಮ್ ಮೇಲೆ ಸಾಕಷ್ಟು ನಿರ್ಮಾಪಕರಿಗೆ ಇರುವ ನಂಬಿಕೆ. ವಿಶ್ವಾಸ.

ಇಂಥ ಪ್ರೇಮ ತಮ್ಮ ಮತ್ತು ಧ್ರುವ ಸರ್ಜಾ ಅವರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾದ ಕೆಡಿ ಚಿತ್ರದ ಕುರಿತು ಸುಲಭವಾಗಿ ಯಾವ ಗುಟ್ಟನ್ನೂ ರಟ್ಟು ಮಾಡಲು ಸಾಧ್ಯ ಇಲ್ಲ. ಹೀಗಾಗಿಯೇ ಮೇ 24ರ ಮೇಲೀಗ ಗಾಂಧಿನಗರದ ಮಂದಿ ಕಣ್ಣಿಟ್ಟಿದ್ದಾರೆ. ಬಿಡುಗಡೆಯ ದಿನ ಅನೌನ್ಸ್ ಮಾಡ್ತಾರಾ ಅಥವಾ ಪ್ರೇಮ್ ಇನ್ಯಾವುದಾದರೂ ಚಮಕ್ ಕೊಡ್ತಾರಾ ಎಂದು ಚರ್ಚೆಯನ್ನೂ ಮಾಡ್ತಿದ್ದಾರೆ.
ಉಳಿದಂತೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡ್ತಿರುವ ಕೆಡಿ ಬಗ್ಗೆ ನಿಮಗೆ ಈಗಾಗಲೇ ಗೊತ್ತಿರಬೇಕು. ಯಾಕೆಂದರೆ ಸಿನಿಮಾ ಆರಂಭವಾದ ದಿನದಿಂದ ಮಾಡ್ತಿರುವ ಸದ್ದು ಅಷ್ಟಿಷ್ಟಲ್ಲ. ಅದೇನೆ ಇರಲಿ.. ಸದ್ಯಕ್ಕೆ ಮೇ 24ಕ್ಕೆ ಕೆಡಿ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರ ಬೀಳಲಿದೆ ಅನ್ನುವ ಸುದ್ದಿ ಇದೆ. ಧ್ರುವ ಮತ್ತು ಪ್ರೇಮ ಕೊಡಲಿರುವ ಈ ಸುದ್ದಿಯ ಮೇಲೀಗ ಎಲ್ಲರ ಗಮನ ಇದೆ. ಇನ್ನೇನು ಕೆಲವೇ ದಿನ ಕುತೂಹಲಕ್ಕೆ ತೆರೆ ಬೀಳಲಿದೆ.


Click it and Unblock the Notifications











