ಜೋಗಿ ಪ್ರೇಮ್ ಮಾಡಿದ ಅದೊಂದು ತಪ್ಪಿಂದ 5 ಕೋಟಿ ರೂ. ಕಳ್ಕೊಂಡ ಕೆವಿಎನ್ ಸಂಸ್ಥೆ?
ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ತೆರೆಗೆ ಬಂದು ಪ್ರೇಕ್ಷಕರ ಮನಗೆದ್ದಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು ಚಿತ್ರತಂಡ ಖುಷಿಯಾಗಿದೆ. ಸಿನಿಮಾ ನೋಡಿದವರು ಪ್ರೇಮ್ ಹಾಗೂ ಧ್ರುವ ಜೋಡಿಯನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಮಾಸ್ ಪ್ರೇಕ್ಷಕರು ಬಯಸುವ ಎಲ್ಲಾ ಅಂಶಗಳನ್ನು ಸೇರಿಸಿ ಕಂಪ್ಲೀಟ್ ಪ್ಯಾಕೇಜ್ ಕಟ್ಟಿಕೊಟ್ಟು ತಂಡ ಗೆದ್ದಿದೆ.
ಮೊದಲ ದಿನ 'ಕೆಡಿ' ಸಿನಿಮಾ 3.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿರುವುದರಿಂದ ವೀಕೆಂಡ್ ಬಾಕ್ಸಾಫೀಸ್ ಶೇಕ್ ಆಗುವ ನಿರೀಕ್ಷೆಯಿದೆ. ಅದೆಲ್ಲಾ ಪಕ್ಕಕ್ಕಿಟ್ಟರೆ ಸಿನಿಮಾ ಬಿಡುಗಡೆ ಬೆನ್ನಲ್ಲೇ ನಿರ್ಮಾಪಕರಿಗೆ 5ರಿಂದ 6 ಕೋಟಿ ರೂ. ನಷ್ಟವಾಗಿರುವುದು ಗೊತ್ತಾಗುತ್ತಿದೆ. ಅದಕ್ಕೆ ಕಾರಣ 'ಕೆಡಿ' ಚಿತ್ರದ ಅದೊಂದು ಸಾಂಗ್.

ಪ್ರೇಮ್ ಸಿನಿಮಾಗಳು ಅಂದ್ರೆ ಸಾಂಗ್ಸ್ ಚೆನ್ನಾಗಿರುತ್ತೆ. ಆ ವಿಚಾರದಲ್ಲಿ ಸಿನಿರಸಿಕರ ನಾಡಿಮಿಡಿತ ಅವರಿಗೆ ಚೆನ್ನಾಗಿ ಗೊತ್ತು. ಅದೇ ರೀತಿ 'ಕೆಡಿ' ಸಿನಿಮಾ ಆಲ್ಬಮ್ ಕೂಡ ಹಿಟ್ ಆಗಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಾಂಗ್ಸ್ ಕೇಳಬಹುದು. ಅಷ್ಟೆ ಸೊಗಸಾಗಿ ಸಾಂಗ್ಸ್ ತೆರೆಮೇಲೆ ತಂದು ಪ್ರೇಮ್ ಸಕ್ಸಸ್ ಕಂಡಿದ್ದಾರೆ. ದೇಶ ವಿದೇಶಗಳಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ.
ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಸದ್ಯ ಚಿತ್ರದಿಂದ ಆ ಸಾಂಗ್ ಕೈಬಿಟ್ಟಿದ್ದಾರೆ. ಅಶ್ಲೀಲ ಸಾಹಿತ್ಯದ ಕಾರಣಕ್ಕೆ ಸಾಂಗ್ ಚರ್ಚೆ ಹುಟ್ಟಾಕ್ಕಿತ್ತು. ಹಿಂದಿಯಲ್ಲಿ ವಿವಾದ ವಿಕೋಪಕ್ಕೆ ತಿರುಗಿ ಯುಟ್ಯೂಬ್‌ನಿಂದ ಡಿಲೀಟ್ ಮಾಡುವಂತಾಯಿತು. ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿ ಇತ್ತೀಚೆಗೆ ಸಂಜಯ್ ದತ್ ಹೋಗಿ ಕ್ಷಮೆ ಕೇಳಿದ್ದರು. ಸ್ವತಃ ಪ್ರೇಮ್ ಕೂಡ ಈ ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದರು. ಮತ್ತೆ ಹೊಸ ಸಾಹಿತ್ಯ ಬರೆದು ಸಾಂಗ್ ಬಿಡುಗಡೆ ಮಾಡ್ತೀನಿ ಎಂದಿದ್ದರು. ಆದರೆ ಈಗ ಸಿನಿಮಾದಲ್ಲಿ ಅದಕ್ಕೆ ಕತ್ತರಿ ಹಾಕಿದ್ದಾರೆ. ಮೊಬೈಲ್, ಟಿವಿಯಲ್ಲಿ ನೋಡ್ಕೊಳಿ ಎಂದು ಸುಮ್ಮನಾಗಿದ್ದಾರೆ.

ಕ್ಲೈಮ್ಯಾಕ್ಸ್ ಫೈಟ್ ಮುನ್ನ 'ಸರ್ಸೆ ಸರ್ಸೆ' ಸಾಂಗ್ ಬರಬೇಕಿತ್ತು. ಆದರೆ ಸುಮ್ಮನೆ ವಿವಾದ ಯಾಕೆ ಎನ್ನುವ ಕಾರಣಕ್ಕೆ ಕತ್ತರಿಸಿ ಬಿಸಾಕಿದ್ದಾರೆ. ಅಂದಹಾಗೆ ಈ ಸಾಂಗ್‌ನಲ್ಲಿ ಕುಣಿಯಲು ಬಾಲಿವುಡ್ ಬ್ಯೂಟಿ ನೋರಾ ಫತೇಹಿಗೆ 3 ಕೋಟಿ ರೂ. ಸಂಭಾವನೆ ಕೊಟ್ಟಿದ್ದರು ಎನ್ನಲಾಗ್ತಿದೆ. ಇನ್ನು ಭಾರೀ ಸೆಟ್ ಹಾಕಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿತ್ತು. ಬಜೆಟ್ 5 ಕೋಟಿ ರೂ. ಮೀರಿತ್ತು ಎನ್ನುವ ಮಾತುಗಳು ಕೇಳಿಬರ್ತಿದೆ. ಇಷ್ಟು ಖರ್ಚು ಮಾಡಿ ಶೂಟ್ ಮಾಡಿದ ಸಾಂಗ್ ಯಾಕೆ ಬಳಸಿಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ಹೀಗಾಗಿ ಸಿನಿಮಾ ರಿಲೀಸ್ ಮುನ್ನ ನಿರ್ಮಾಪಕರಿಗೆ ಭಾರೀ ನಷ್ಟವಾದಂತೆ ಆಗಿದೆ.
'ಕೆಡಿ' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗ್ತಿದೆ. 70ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಅವತ್ತಿನ ಬೆಂಗಳೂರು ನಗರವನ್ನು ತೋರಿಸುವ ಸಾಹಸ ಮಾಡಿದ್ದಾರೆ. ಮಾರ್ಕೆಟ್, ಟೌನ್ ಹಾಲ್ ಸೆಟ್ ಹಾಕಲಾಗಿದೆ. ಪ್ರತಿ ಫ್ರೇಮ್‌ನಲ್ಲಿ ನೂರಾರು ಸಹಕಲಾವಿದರು, ಪ್ರತಿ ಹಾಡಿನಲ್ಲೂ ನೂರಾರು ಡ್ಯಾನ್ಸರ್ಸ್ ಬಳಸಿಕೊಳ್ಳಲಾಗಿದೆ. ಎಲ್ಲದಕ್ಕೂ ಕೋಟಿ ಕೋಟಿ ಸುರಿಯಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾ ಎನ್ನುವ ಕಾರಣಕ್ಕೆ ಧೈರ್ಯ ಮಾಡಿ ನಿರ್ಮಾಪಕರು ಹಣ ಸುರಿದಿದ್ದರು.
ಬೇಸರದ ಸಂಗತಿ ಅಂದರೆ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ 'ಕೆಡಿ' ಸಿನಿಮಾ ಬಿಡುಗಡೆ ಆಗಿಲ್ಲ. ಹೊರರಾಜ್ಯಗಳಲ್ಲಿ ಪ್ರಚಾರಕ್ಕೂ ತಂಡ ಹೋಗಲಿಲ್ಲ. ಕರ್ನಾಟಕದಲ್ಲಿ ರೆಸ್ಪಾನ್ಸ್ ನೋಡಿಕೊಂಡು ಮುಂದೆ ಬೇರೆ ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ಮಾಡಲಾಗ್ತಿದೆ. ಅದೆಲ್ಲ ಏನೇ ಇದ್ದರೂ ಪ್ರೇಮ್ ಕೊಂಚ ಎಚ್ಚರಿಕೆ ವಹಿಸಿದ್ದರೆ 'ಸರ್ಸೆ ಸರ್ಸೆ' ಸಾಂಗ್ ಸಿನಿಮಾದಿಂದ ತೆಗೆಯುವಂತೆ ಆಗ್ತಿರಲಿಲ್ಲ. ಸುಖಾ ಸುಮ್ಮನೆ ಸಾಂಗ್ ಶೂಟ್ ಮಾಡಿ ಹಣ ವ್ಯರ್ಥ ಮಾಡಿದಂತಾಗಿದೆ. ಸಿನಿಮಾ ಬಿಡುಗಡೆ ಬಳಿಕ ಮಾತನಾಡಿರುವ ಪ್ರೇಮ್ ಶೀಘ್ರದಲ್ಲೇ ಸಾಂಗ್ ಚಿತ್ರಕ್ಕೆ ಸೇರಿಸ್ತೀವಿ ಎಂದಿದ್ದಾರೆ.


Click it and Unblock the Notifications