'ಡಿಕೆ' ಸಾಹೇಬ ಬರ್ತಿದ್ದಾನೆ ಬಾಗಿಲು ತೆಗೆಯೇ ಸೇಸಮ್ಮ
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಚಿತ್ರ ಪ್ರೇಮ್ ಅಭಿನಯದ 'ಡಿಕೆ'. ಈ ಚಿತ್ರದ ಶೀರ್ಷಿಕೆಯ ಅರ್ಥ ಏನಿರಬಹುದು, ಡಿಕೆ ಅಂದ್ರೆ ಯಾರು ಎಂಬುದಕ್ಕೆ ಉತ್ತರ ಸಿಗುವ ಸಮಯ ಬಂದೇ ಬಿಟ್ಟಿದೆ. ಆರು ತಿಂಗಳ ಹಿಂದೆ ಸೆಟ್ಟೇರಿದ ಚಿತ್ರ ಇದೀಗ ಬಿಡುಗಡೆಯಾಗಲು ಸಿದ್ಧವಾಗಿದೆ.
ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರ ಇದೇ ಫೆಬ್ರವರಿ 13ರಂದು ತೆರೆ ಮೇಲೆ ರಾರಾಜಿಸಲಿದೆ. ವಿಜಯ್ ಕಂಪಳಿ (ಉದಯ ಪ್ರಕಾಶ್) ಅವರ ಆಕ್ಷನ್ ಕಟ್ ನಲ್ಲಿ ಮೂಡಿಬಂದಿರುವ ಚಿತ್ರ ಇದು.

ಈ ಚಿತ್ರವನ್ನು ಪ್ರೇಮ್ ಅವರ ಬಾಳಸಂಗಾತಿ ರಕ್ಷಿತಾ ಅವರು ನಿರ್ಮಿಸಿದ್ದಾರೆ. ಪ್ರೇಮ್ ಜೊತೆ ಚೈತ್ರಾ ಚಂದ್ರನಾಥ್ ಅಭಿನಯಿಸಿದ್ದು ವಿಶೇಷ ಹಾಡಿನಲ್ಲಿ ಬಾಲಿವುಡ್ ನ ಸೆಕ್ಸಿ ಕ್ವೀನ್ ಸನ್ನಿ ಲಿಯೋನ್ ಅಭಿನಯಿಸಿದ್ದಾರೆ. "ಬಾಗಿಲು ತೆಗೆಯೇ ಸೇಸಮ್ಮ..." ಎಂಬ ಹಾಡು ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಿದೆ.
ವಿವಾದಾತ್ಮಕ ಸ್ವಾಮೀಜಿ ಕಾಳಿ ಮಠದ ಋಷಿಕುಮಾರ ಅವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಹಾಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಕಥೆ ಇರಬಹುದೇ ಎಂಬ ಸಣ್ಣ ಅನುಮಾನವೂ ಸ್ಯಾಂಡಲ್ ವುಡ್ ನಲ್ಲಿದೆ. ಆದರೆ ಆ ಮಾತನ್ನು ಪ್ರೇಮ್ ತಳ್ಳಿಹಾಕುತ್ತಾರೆ.
ಚಿತ್ರದ ಇನ್ನೊಂದು ಹಾಡಿನಲ್ಲಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಎಂ ಕರುಣಾನಿಧಿ ಹಾಗೂ ಜಯಲಲಿತಾ ಹೆಸರುಗಳನ್ನು ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಈ ಹಾಡನ್ನು ಹಾಡಲು ನಾಲ್ಕು ಮಂದಿ ಗಾಯಕರು ನಿರಾಕರಿಸಿದ ಬಳಿಕ ಕಡೆಯದಾಗಿ ಗಾಯಕ ಹೇಮಂತ್ ಅವರು ಒಪ್ಪಿಕೊಂಡು ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. (ಏಜೆನ್ಸೀಸ್)


Click it and Unblock the Notifications