'ಜೋಡೆತ್ತು' ಸಾಂಗ್ ಮೂಲಕ ಮತ್ತೆ ಗೆದ್ದ ಪ್ರೇಮ್; 'ಕೆಡಿ' ಸಿನಿಮಾ ರಿಲೀಸ್ ಡೇಟ್ ಘೋಷಣೆ
ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾಗಳು ಗೆಲ್ಲುತ್ತೋ ಬಿಡುತ್ತೋ ಹಾಡುಗಳು ಸದ್ದು ಮಾಡುತ್ತವೆ. ಅವರ ಎಲ್ಲಾ ಸಿನಿಮಾ ಹಾಡುಗಳು ಹಿಟ್ ಆಗಿದೆ. ಸಂಗೀತಪ್ರೇಮಿಗಳ ನಾಡಿಮಿಡಿತ ಬಲ್ಲ ಪ್ರೇಮ್ ಪ್ರತಿ ಬಾರಿ ಹೊಸ ಹಾಡನ್ನು ಹೊತ್ತು ಬರ್ತಾರೆ. ಈಗ 'ಕೆಡಿ' ಚಿತ್ರದ 'ಅಣ್ತಮ್ಮ ಜೋಡೆತ್ತು ಕಣೋ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಕೆವಿಎಳ್ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದೆ. ಸಿನಿಮಾ ಸೆಟ್ಟೇರಿ ಸರಿಯಾಗಿ 4 ವರ್ಷಗಳ ಬಳಿಕ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ 'ಶಿವ ಶಿವ' ಹಾಗೂ 'ಸೆಟ್ಟಾಗಲ್ಲಾ ಹೋಗೆ ನಂಗು ನಿಂಗೂ' ಹಾಡುಗಳು ರಿಲೀಸ್ ಆಗಿ ಹಿಟ್ ಆಗಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಮತ್ತೊಂದು ಸಾಂಗ್ ಹೊರ ಬಂದಿದೆ.

ಪ್ರೇಮ್ ಬಹುಮುಖ ಪ್ರತಿಭೆ. ಸಿನಿಮಾ ನಿರ್ದೇಶನದ ಜೊತೆಗೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಾರೆ. ಅಷ್ಟೇ ಅಲ್ಲ ಸೊಗಸಾಗಿ ಹಾಡುತ್ತಾರೆ. ತಮ್ಮ ಸಿನಿಮಾಗಳಲ್ಲಿ ಒಂದಾದರೂ ಹಾಡು ಹಾಡುತ್ತಾರೆ. ಇದೀಗ 'ಕೆಡಿ' ಚಿತ್ರದ 'ಅಣ್ತಮ್ಮ ಜೋಡೆತ್ತು ಕಣೋ' ಸಾಂಗ್ ಹಾಡಿ ಗಮನ ಸೆಳೆದಿದ್ದಾರೆ.
ಅರ್ಜುನ್ ಜನ್ಯಾ ಸಂಗೀತದ ಹಾಡಿಗೆ ಮಂಜುನಾಥ್ ಬಿ. ಎಸ್ ಸಾಹಿತ್ಯ ಬರೆದಿದ್ದು ಪ್ರೇಮ್ ದನಿಯಲ್ಲಿ ಕೇಳಲು ಇಂತಾಗಿದೆ. ಸಹೋದರರ ಅನುಬಂಧ ಹೇಗಿರಬೇಕು? ಎನ್ನುವುದನ್ನು ಹಾಡಿನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಅರ್ಥಗರ್ಭಿತ ಸಾಲುಗಳನ್ನು ಅಷ್ಟೇ ಸೊಗಸಾಗಿ ಹಾಡಿ ಪ್ರೇಮ್ ಗೆದ್ದಿದ್ದಾರೆ. ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ವರ್ಷದ ಹಿಟ್ ಸಾಂಗ್‌ಗಳ ಲಿಸ್ಟ್‌ಗೆ ಸೇರುವಂತಿದೆ. "ಒಂದೇ ತಾಯಿಗೆ ಹುಟ್ಟಾರೋ ಆಮೇಲ್ ತಾಯೀನಾ ಭಾಗ ಮಾಡ್ತಾರೋ, ಒಂದೇ ಮನೇಲಿ ಬೆಳಿತಾರೋ ಮಧ್ಯ ಗೋಡೆ ಕಟ್ಕೊಂಡು ಸಾಯ್ತಾರೋ, ನಾನೂ ನಾನೇ ಅಂತಾ ಮೆರಿ ಬೇಡ್ರಪ್ಪಾ" ಎನ್ನುವ ಸಾಲುಗಳು ಇಷ್ಟವಾಗುತ್ತದೆ.
ಬಹಳ ಅದ್ಧೂರಿಯಾಗಿ ಈ ಸಾಂಗ್ ಶೂಟ್ ಮಾಡಿರುವುದು ಗೊತ್ತಾಗುತ್ತಿದೆ. ಲಿರಿಕಲ್ ವೀಡಿಯೋ ಸಾಂಗ್ ಬಂದಿದ್ದರೂ ಅಲ್ಲಲ್ಲಿ ಸಣ್ಣ ವಿಡಿಯೋ ಝಲಕ್ ನೋಡಬಹುದು. 'ಕೆಡಿ' ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ಕೂಡ ನಟಿಸಿದ್ದಾರೆ. ಹಾಡಿನಲ್ಲಿ ಅವರೆಲ್ಲರನ್ನು ತೋರಿಸಿರುವುದು ನೋಡಿದ್ರೆ, 4 ಜನ ಸಹೋದರರಾಗಿ ನಟಿಸಿದ್ದಾರಾ? ಎನ್ನುವ ಅನುಮಾನ ಮೂಡುವಂತಿದೆ. ಮುಂದಿನ ವರ್ಷ ಏಪ್ರಿಲ್ 30ರಂದು 'ಕೆಡಿ' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
2022ರ ಏಪ್ರಿಲ್ 18ರಂದು 'ಕೆಡಿ' ಸಿನಿಮಾ ಸೆಟ್ಟೇರಿತ್ತು. ಪದೇ ಪದೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲೇ ಸಿನಿಮಾ ಬಿಡುಗಡೆ ಎಂದು ಪ್ರೇಮ್ ಹೇಳಿದ್ದರು. ಆದರೆ ಬಹಳ ತಡವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಇನ್ನು ಕಿಚ್ಚ ಸುದೀಪ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿರುವುದು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತೊಂದು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ.
70ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಗಳ ಹಿನ್ನೆಲೆಯಲ್ಲಿ 'ಕೆಡಿ' ಸಿನಿಮಾ ಕಟ್ಟಿಕೊಡಲಾಗಿದೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಟೀಸರ್ ಕೂಡ ಬಂದು ಗಮನ ಸೆಳೆದಿದೆ. ಪ್ರೇಕ್ಷಕರು ಕಾದು ಕಾದು ಸುಸ್ತಾಗಿದ್ದಾರೆ. ಅದ್ಯಾಕೋ ಧ್ರುವ ಸರ್ಜಾ ನಟನೆಯ ಎಲ್ಲಾ ಸಿನಿಮಾಗಳ ಬಿಡುಗಡೆ ತಡವಾಗುತ್ತದೆ. 'ಕೆಡಿ' ಕೂಡ ಅದೇ ಸಾಲಿಗೆ ಸೇರಿದ್ದು ಇನ್ನು 4 ತಿಂಗಳು ಕಾಯುವಂತಾಗಿದೆ.


Click it and Unblock the Notifications











