ಪೈರಸಿ ವಿರುದ್ಧ ಪ್ರೇಮ್ ಗರಂ, ಸಿಎಂಗೆ ದೂರು ನೀಡಲು ಸಜ್ಜು
ಕೆಲವು ದಿನಗಳ ಹಿಂದೆ ಮಲ್ಟಿಫ್ಲೆಕ್ಸ್‌ಗಳ ವಿರುದ್ಧ ಗರಂ ಆಗಿದ್ದ ನಿರ್ದೇಶಕ ಪ್ರೇಮ್ ಈಗ ಟೆಲಿಗ್ರಾಂ ಮೆಸೆಂಜರ್ ಅಪ್ಲಿಕೇಶನ್ ವಿರುದ್ಧ ಗರಂ ಆಗಿದ್ದಾರೆ. ಅಸಲಿಗೆ ಅವರ ಸಿಟ್ಟಿಗೆ ಕಾರಣ ಟೆಲಿಗ್ರಾಂ ಅಪ್ಲಿಕೇಶನ್ ಅಲ್ಲ ಬದಲಿಗೆ ಪೈರಸಿ.
ಪೈರಸಿ ಸಿನಿಮಾಗಳು ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ದೊರೆಯುವುದು ಗುಟ್ಟಾಗಿ ಏನೂ ಉಳಿದಿಲ್ಲ. ಯಾವುದೇ ಹೊಸ ಸಿನಿಮಾ ಬಿಡುಗಡೆ ಆದರೂ ಅದರ ಬಹುತೇಕ ಒರಿಜಿನಲ್ ಕಾಪಿಗಳು ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂನಲ್ಲಿ ಲಭ್ಯವಾಗುತ್ತವೆ. ಇತ್ತೀಚೆಗೆ ಬಿಡುಗಡೆ ಆದ 'ಏಕ್ ಲವ್ ಯಾ' ಸಿನಿಮಾದ ಪೈರಸಿ ಕಾಪಿ ಸಹ ಟೆಲಿಗ್ರಾಂಗೆ ಅಪ್‌ಲೋಡ್ ಆಗಿತ್ತು.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ''ನಮ್ಮ 'ಏಕ್ ಲವ್ ಯಾ' ಸಿನಿಮಾದ್ದು ಬಹಳ ಪೈರಸಿ ಮಾಡುತ್ತಿದ್ದಾರೆ. ಮುಂದಿನ ವಾರ ನಾನು ಖುದ್ದಾಗಿ ಸಿಎಂ ಸರ್ ಅವರನ್ನು ಭೇಟಿಯಾಗಿ ಅವರಿಗೊಂದು ಪತ್ರ ಕೊಟ್ಟು, ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಕೇವಲ 'ಏಕ್ ಲವ್ ಯಾ' ಮಾತ್ರವಲ್ಲ ಇದರಿಂದ ಎಲ್ಲ ಸಿನಿಮಾಗಳಿಗೆ ಒಳ್ಳೆಯದಾಗುತ್ತದೆ ಎಂದು ಮನವಿ ಮಾಡುತ್ತೇನೆ'' ಎಂದಿದ್ದಾರೆ.

ನಮ್ಮ ಕಾಲನ್ನು ನಾವೇ ಎಳೆದುಕೊಳ್ಳುತ್ತಿದ್ದೇವೆ: ಪ್ರೇಮ್
''ನಮ್ಮ ಕಾಲನ್ನು ನಾವೇ ಎಳೆದುಕೊಂಡು ನಮ್ಮ ಕಾಲನ್ನು ನಾವೇ ತುಳಿದುಕೊಂಡು ಬಾಳುವ ಪರಿಸ್ಥಿತಿ ಉಂಟಾಗಿದೆ ಚಿತ್ರರಂಗದಲ್ಲಿ. ಯಾರೊ ಒಬ್ಬರು ಪೈರಸಿ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆಂದರೆ ಅವರು ಯಾರದ್ದೋ ನಾಯಕನ ಹೆಸರನ್ನು ಅದರೊಂದಿಗೆ ಸೇರಿಸಿ ಹಾಕುತ್ತಾರೆ. ಅಷ್ಟು ಬಹಿರಂಗ ವ್ಯವಹಾರ ಇದಾಗಿದೆ. ಅಲ್ಲದೆ, ಸುಖಾ ಸುಮ್ಮನೆ ಹೀರೋಗಳು, ಅವರುಗಳ ಅಭಿಮಾನಿಗಳ ನಡುವೆ ವೈಮನಸ್ಯ ಉಂಟು ಮಾಡುವ ಕಾರ್ಯವನ್ನು ಮಾಡುತ್ತಾರೆ'' ಎಂದರು ಪ್ರೇಮ್.

ಚಿತ್ರಮಂದಿರದಲ್ಲಿ ಸಿನಿಮಾ ಸಾಯುತ್ತೆ: ಪ್ರೇಮ್
''ಒಂದು ಸಿನಿಮಾ ಅಪ್‌ಲೋಡ್ ಆಗುತ್ತಿದ್ದಂತೆ ಅದನ್ನು ಸಾವಿರಾರು ಮಂದಿ ಹಂಚಿಕೊಳ್ಳುತ್ತಾರೆ. ಮತ್ತೊಬ್ಬನಿಗೆ ಟ್ಯಾಗ್ ಮಾಡಿ ನೋಡುವಂತೆ ಹೇಳುತ್ತಾರೆ. ಇದು ಸರಿಯಲ್ಲ. ಯಾರೊ ಒಬ್ಬ ಅಪ್‌ಲೋಡ್ ಮಾಡಿರುತ್ತಾನೆ, ಅದನ್ನು ನೀವು ಯಾಕೆ ಮುಂದುವರೆಸುತ್ತೀರಿ. ಬಿಡುಗಡೆ ಆದ ಒಂದು-ಎರಡು ತಿಂಗಳಲ್ಲಿ ಒಟಿಟಿಗೆ ಬರುತ್ತೆ, ಆದರೆ ಪೈರಸಿ ಆದರೆ ಆ ಸಿನಿಮಾ ಚಿತ್ರಮಂದಿರದಲ್ಲಿ ಸಾವನ್ನಪ್ಪುತ್ತದೆ'' ಎಂದರು ಪ್ರೇಮ್.

ಪ್ರತಿದಿನ ಲಿಂಕ್‌ಗಳು ಬರುತ್ತವೆ: ಪ್ರೇಮ್
''ರಕ್ಷಿತಾ ಮೇಡಂ ಅವರು ಪೈರಸಿ ಪಟ್ಟಿ ತೋರಿಸಿದರು ಆದರೆ ಅದು ಕಡಿಮೆ, ನನಗೆ ಪ್ರತಿದಿನ ಅದೆಷ್ಟೋ ಲಿಂಕ್‌ಗಳು ಬರುತ್ತವೆ. ನಾವೊಂದು ಆಂಟಿ ಪೈರಸಿ ತಂಡ ಇಟ್ಟಿದ್ದೇವೆ. ಅವರು ಪ್ರತಿದಿನ ಕಳಿಸುತ್ತಾರೆ. ದಿನವೂ ಸಂಬಂಧಪಟ್ಟವರಿಗೆ ಇ-ಮೇಲ್ ಹಾಕಿ ಅದನ್ನು ತೆಗೆಸುತ್ತಿದ್ದೇವೆ. ಸೈಬರ್ ಪೊಲೀಸರಿಗೆ ದೂರುಗಳನ್ನು ನೀಡುತ್ತಲೇ ಇದ್ದೇವೆ. ಅವರಾದರೂ ಹೆಚ್ಚಿಗೇನು ಮಾಡಲು ಸಾಧ್ಯ. ಇರುವ ಲಿಂಕ್ ಅನ್ನು ತೆಗೆಯಬಲ್ಲರು ಅಷ್ಟೆ. ಆದರೆ ನಾವು ಲಿಂಕ್‌ಗಳನ್ನು ತೆಗೆಯುವ ವೇಳೆಗೆ ಹಲವಾರು ಮಂದಿ ಅದನ್ನು ಡೌನ್‌ಲೋಡ್ ಮಾಡಿಕೊಂಡು ಬಿಟ್ಟಿರುತ್ತಾರೆ. ಅದನ್ನು ಮತ್ತೊಬ್ಬರಿಗೆ ಹಂಚಿಕೊಂಡು ಬಿಟ್ಟಿರುತ್ತಾರೆ'' ಎಂದರು ಪ್ರೇಮ್.

ಫೆಬ್ರವರಿ 24 ರಂದು ಬಿಡುಗಡೆ
ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಫೆಬ್ರವರಿ 24 ರಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಹೊಸ ಪ್ರತಿಭೆಗಳಾದ ರಾಣಾ, ರೀಷ್ಮಾ ನಟಿಸಿದ್ದಾರೆ. ರಚಿತಾ ರಾಮ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೇಮ ಕತೆಯುಳ್ಳ ಈ ಸಿನಿಮಾ ಬಗ್ಗೆ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿತ್ತು. ಆದರೆ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಂಡಿತ್ತು. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಆದರೆ ಇದೀಗ ಸಿನಿಮಾಕ್ಕೆ ಪೈರಸಿ ಕಾಟ ಪ್ರಾರಂಭವಾಗಿದೆ.


Click it and Unblock the Notifications











