»   » ಓನ್‌ ಟೂ ಥ್ರೀ ನಲ್ಲಿ ನಂಬಿಕೆ ಇಲ್ಲದ ಪ್ರೇಮಾ

ಓನ್‌ ಟೂ ಥ್ರೀ ನಲ್ಲಿ ನಂಬಿಕೆ ಇಲ್ಲದ ಪ್ರೇಮಾ

Posted By: * ಕೌಟಿಲ್ಯ
Subscribe to Filmibeat Kannada

ಓಂ, ನಮ್ಮೂರ ಮದಾರ ಹೂವೆ, ಚಂದ್ರಮುಖಿ ಪ್ರಾಣಸಖಿ, ಉಪೇಂದ್ರ, ಯಜಮಾನ ಮೊದಲಾದ ಚಿತ್ರಗಳಲ್ಲಿ ಮಿಂಚಿದ ಅಚ್ಚ ಕನ್ನಡದ ಪ್ರತಿಭೆ ಪ್ರೇಮ. ಸದ್ಯಕ್ಕೆ ಕನ್ನಡದ ನಂ.1 ನಟಿ ಎನ್ನಲು ಅಡ್ಡಿ ಇಲ್ಲ. ಆದರೆ, ಪ್ರೇಮಾರಿಗೆ ನಂ.1, 2, 3 ನಲ್ಲಿ ನಂಬಿಕೆಯೇ ಇಲ್ಲ. ಸದ್ಯಕ್ಕೆ ಕನ್ನಡದ ನಂ.1 ನಟಿ ನೀವೇ ಅಲ್ಲವೇ? ಎಂದು ಯಾರಾದರೂ ಪ್ರಶ್ನಿಸಿದರೆ, ಏಕ್‌.. ದೋ.. ತೀನ್‌........ ಬಾರಾ ತೇರಾ ಹಾಡು ಗುನುಗುತ್ತಾರೆ.

ಪ್ರೇಮ ಚಂದಿರಾ : ಮೊನ್ನೆ ಕೂಡ ಕನಸುಗಾರ ಸೆಟ್‌ನಲ್ಲಿ ಸ್ವಲ್ಪ ಹೊತ್ತು ಫ್ರೀಯಾಗಿದ್ದ ಪ್ರೇಮಾ, ನೀಲಾಕಾಶದಿ ಚಂದ್ರಮನ ನೋಡುತ್ತಾ ಕಭೀ.. ಕಭೀ ಮೇರೆ ದಿಲ್‌ ಮೇ ಕಯಾಲ್‌ ಆತಾ ಹೈ... ಹಾಡನ್ನು ಹಾಡುತ್ತಿದ್ದರು. ಪ್ರಶಾಂತವಾದ ಮುಸ್ಸಂಜೆಯಲ್ಲಿ, ಬೀಸುತ್ತಿದ್ದ ತಂಗಾಳಿಯ ನಡುವೆ ಕೃತಕ ಸಮುದ್ರದ ಸೆಟ್‌ ಬಳಿ ಆನಂದ ಸಾಗರದಲ್ಲಿ ತೇಲುತ್ತಾ ಚಂದ್ರಮನ ನೋಡುತ್ತಿದ್ದ ಪ್ರೇಮಾರಿಗೆ ಪತ್ರಕರ್ತರೊಬ್ಬರು ಹೇಳಿದರು.

ಮೇಲೆ ಚಂದ್ರಮ.. ಕೆಳಗೆ ಪ್ರೇಮ... ಪ್ರೇಮ ನಸು ನಕ್ಕರು. ಇನ್ನೊಬ್ಬ ಪತ್ರಕರ್ತರಂದರು. ಒಟ್ಟಾರೆ ಪ್ರೇಮ ಚಂದ್ರಮ... ಪ್ರೇಮ ತುಸು ಜೋರಾಗಿಯೇ ನಕ್ಕರು. ಬಿಡು ಬೀಸಾಗಿ ನಕ್ಕರು. ನಗುನಗುತ್ತಾ ಮಾತಿಗೂ ಇಳಿದರು. ತಮ್ಮ ಅಂತರಂಗದ ಕೆಲವು ಮಾತುಗಳನ್ನು ಹೊರಹಾಕಿದರು.

ಹುಚ್ಚಿಯಾಗುವ ಬಯಕೆ : ಶರಪಂಜರದಲ್ಲಿ ಮಿನುಗುತಾರೆ ಕಲ್ಪನಾ ಅವರಂತೆ ತಾವೂ ಹುಚ್ಚಿಯ ಪಾತ್ರದಲ್ಲಿ ಮಿಂಚಬೇಕೆಂಬ ಬಯಕೆ ಹೊರಗಿಟ್ಟರು. ಹುಚ್ಚಿಯಾಗಿ ನಟಿಸುವ ತಮ್ಮ ಆಸೆ ಇನ್ನೂ ಪೂರ್ತಿ ಆಗಿಲ್ಲ. ಗಾಜಿನ ಮನೆ ಚಿತ್ರದಲ್ಲಿ ಕೇವಲ 5 ನಿಮಿಷ ಮಾತ್ರ ಹುಚ್ಚಿ ಪಾತ್ರ ಮಾಡಿದ್ದೆ. ಅದು ಸಾಲದು ಎಂದು ನಿಟ್ಟುಸಿರು ಬಿಟ್ಟರು.

ಇದು ಕೇವಲ ನಟನೆ. ಚಿತ್ರದ ಅಭಿನಯ ಅಂತ ಮಾತ್ರ ಸ್ವೀಕರಿಸಬೇಕು. ಜೀವನದಲ್ಲೂ ಹುಚ್ಚುಚ್ಚಾಗಿ ಆಡಬಾರದು ಎಂಬ ಥಿಯರಿಯನ್ನೂ ಹೇಳಿದರು.

ಮೊದಲೇ ಪಾತ್ರದ ಬಗ್ಗೆ ಹೇಳಿದರೆ ಕ್ಯಾಮರಾ ಫೇಸ್‌ ಮಾಡುವ ಮುನ್ನ ಮನೆಯಲ್ಲಿ ಕನ್ನಡಿಯ ಮುಂದೆ ನಿಂತು ರಿಹರ್ಸಲ್‌ ಮಾಡ್ತೀವಿ, ಕ್ಯಾಮರಾ ಮುಂದೆ ಬಂದಾಗ ನಿರ್ದೇಶಕರ ಎಕ್ಸ್‌ಪೆಕ್ಟೇಷನ್‌ಗೆ ಬರ್ತೀವೋ ಇಲ್ವೋ ಗೊತ್ತಿಲ್ಲ. ನನಗಂತೂ ಕ್ಯಾಮರಾ ಎದುರು ರಿಹರ್ಸಲ್‌ ಮಾಡೋದೇ ಇಷ್ಟ ಎಂದೂ ಹೇಳಿದರು. ನಾಗಾ ಚಿತ್ರಮಂದಿರದಲ್ಲಿ ಅಮೀರ್‌ ಖಾನ್‌ ಅಭಿನಯದ ಲಗಾನ್‌ ಚಿತ್ರವನ್ನು ಫಸ್ಟ್‌ ಡೇ, ಫಸ್ಟ್‌ ಷೋ ನೋಡಿ ಮೆಚ್ಚಿದ್ದಾಗಿಯೂ ತಿಳಿಸಿದರು.

ಸದ್ಯಕ್ಕೆ ನೀಲಾಂಬರಿ, ಗ್ರಾಮದೇವತೆ, ಪರ್ವ, ಕನಸುಗಾರ ಮೊದಲಾದ ಚಿತ್ರಗಳಲ್ಲಿ ಬಿಜಿಯಾಗಿರುವ ಪ್ರೇಮಾಗೆ ಹುಚ್ಚಿಯಾಗುವ ಬಯಕೆ ಅಷ್ಟೇ ಅಲ್ಲ ಡಾ. ರಾಜ್‌ಕುಮಾರ್‌ ಎದುರು ನಾಯಕಿಯಾಗಿ ಇಲ್ಲವೆ ಅವರ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿಯಾದರೂ ನಟಿಸುವ ಬಯಕೆ ಇದೆಯಂತೆ. ಅವರ ಬಯಕೆಗಳು ಕೈಗೂಡಲೆಂದು ಹಾರೈಸೋಣ.ವಾರ್ತಾ ಸಂಚಯ

English summary
I love insane character and I want to act with Dr.Rajkumar says prema

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada