»   » ಬೇಸಗೆಯಲೆರಡು ಚಳಿ ಚಳಿ ಹಾಡುಗಳ ಪ್ರೇಮ ವೃತ್ತಾಂತ!

ಬೇಸಗೆಯಲೆರಡು ಚಳಿ ಚಳಿ ಹಾಡುಗಳ ಪ್ರೇಮ ವೃತ್ತಾಂತ!

Posted By: Staff
Subscribe to Filmibeat Kannada

ಪರ್ವ ಸಿನಿಮಾದಲ್ಲಿನ ನಟನೆಗೆ ಮಾರುಹೋಗಿ 'ಪ್ರೇಮಾ ಕನ್ನಡ ಚಿತ್ರರಂಗಕ್ಕೊಂದು ಗಿಫ್ಟು" ಎಂದಿದ್ದರು ಸುನೀಲ್‌ ಕುಮಾರ್‌ ದೇಸಾಯಿ. ದೇಸಾಯಿ ಮಾತನ್ನು ನಂಬಿ ಪರ್ವ ಸಿನಿಮಾಕ್ಕೆ ಹೋದವರಿಗೆ ಪ್ರೇಮಾ ಸಿಗಲಿಲ್ಲ , ದೇಸಾಯಿ ಅವರೂ ಸಿಗಲಿಲ್ಲ . ಅಬ್ಬರದ ಸಂಗೀತಮಯ ಚಿತ್ರದೊಳಗೆ ಇಬ್ಬರೂ ಎಲ್ಲಿ ಮಾಯವಾದರು ಅನ್ನುವ ಬ್ರಹ್ಮ ರಹಸ್ಯ ಪ್ರೇಕ್ಷಕರಿಗೆ ಗೊತ್ತಾಗಲಿಲ್ಲ. ಇನ್ನು ನಾಯಕ ವಿಷ್ಣು ವರ್ಧನ್‌ ಅವರದ್ದು ವಿಷಾದ ಯೋಗ; ಆ ಕಾರಣದಿಂದಾಗಿಯೇ ಅವರು ಪರ್ವದಲ್ಲಿ ಕುಡಿತಕ್ಕೆ ಶರಣು. ಇದೆಲ್ಲಾ ಖಾಲಿಯಾದವರ ಕಥೆ.

ಪ್ರೇಮಾ ಪ್ರತಿಭಾವಂತೆ ಅನ್ನುವ ಮಾತುಗಳು ಆಗಾಗ ಕೇಳಿಬರುತ್ತಲೇ ಇವೆ. ತಾವು ಪ್ರತಿಭಾವಂತೆ ಎಂದು ಸ್ವತಃ ಪ್ರೇಮಾ ಕೂಡಾ ನಂಬಿದಂತಿದೆ. ಮಿನುಗು ತಾರೆ ಕಲ್ಪನಾ ಜೊತೆ ಗುರ್ತಿಸಿಕೊಳ್ಳುವುದೆಂದರೆ ಪ್ರೇಮಾಗೆ ತುಂಬಾ ಖುಷಿ. ಶರಪಂಜರ ಮಾದರಿಯ ಹುಚ್ಚಿ ಪಾತ್ರವನ್ನು ಮಾಡುವುದು ಅವರ ಆಸೆ. ಅದು ಇನ್ನೂ ನೆರವೇರಿಲ್ಲ . ಆದರೆ, ಪರ್ವದಲ್ಲಿ ಹೊಸ ನಾಟ್ಯ ಪ್ರಕಾರವನ್ನು ಶೋಧಿಸಿದ ಪ್ರೇಮಾ ಅವರನ್ನು ನೋಡಿದ ಕೆಲವರಿಗೆ, ಕೆಲ ಗಂಟೆಗಳ ಕಾಲವಾದರೂ ಹುಚ್ಚು ಹಿಡಿದಂತೆ ಅನ್ನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ .

ಪ್ರೇಮಾ ಪ್ರತಿಭಾವಂತೆ ಅನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ, ಆಕೆ ಅದೃಷ್ಟವಂತೆ ಅನ್ನುವುದರಲ್ಲಿ ಎರಡು ಮಾತಿಲ್ಲ . ಪ್ರೇಮಾಗಿನ್ನು ವಿರಾಮ ಅಂದುಕೊಳ್ಳುವಾಗಲೇ ಅವರ ಚಿತ್ರಗಳು ದೊಡ್ಡ ರೀತಿಯಲ್ಲಿ ಗೆದ್ದಿವೆ. ಕಾಲ ಕಾಲಕ್ಕೆ ಯಶಸ್ವಿ ಚಿತ್ರಗಳನ್ನು ನೀಡುವ ಮೂಲಕ ಹಾಗೂ ವಿವಾದಗಳನ್ನು ಸೃಷ್ಟಿಸುವ ಮೂಲಕ ಪ್ರೇಮಾ ಚಾಲ್ತಿಯಲ್ಲಿದ್ದಾರೆ. ತೆಲುಗಿನಲ್ಲೂ ಒಂದು ಕೈ ನೋಡಿ ಬಂದ ಅನುಭವ ಅವರದು. ಕಳೆದ ವರ್ಷದ ಸೂಪರ್‌ ಡೂಪರ್‌ ಚಿತ್ರದಲ್ಲೂ ಪ್ರೇಮಾ ನಟಿಸಿದ್ದರು.

ಪೊರೆ ಕಳಚಿತು..

ಪ್ರೇಮಾ ನಟನೆಯ ಹೊಸ ಚಿತ್ರಗಳ ಬಗೆಗೆ ಕೂಡ ಉದ್ಯಮ ಭರವಸೆ ಇರಿಸಿಕೊಂಡಿದೆ. ಸೈನಿಕ ಹಾಗೂ ಕಂಬಾಲಹಳ್ಳಿ ಸಿನಿಮಾಗಳ ಬಗೆಗೆ ಜನಮನದಲ್ಲಿ ಒಂದು ಕುತೂಹಲವಿದೆ. ಈ ಎರಡು ಚಿತ್ರಗಳು ಬೇರೆ ಬೇರೆ ಕಾರಣಕ್ಕಾಗಿ ಕುತೂಹಲ ಮೂಡಿಸಿವೆಯಾದರೂ, ಆ ಕುತೂಹಲಕ್ಕೆ ಪ್ರೇಮಾ ಇನ್ನೊಂದು ಆಯಾಮವನ್ನು ಒದಗಿಸಿದ್ದಾರೆ. ಅದೆಂದರೆ- ಪ್ರೇಮಾ ಪಾರದರ್ಶಕವಾಗಿರುವುದು. ಅಂದರೆ- ಚಳಿ ಬಿಟ್ಟು ನಟಿಸಿರುವುದು. ಅಂದಹಾಗೆ, ಈಗ ಬೇಸಗೆ!

ಸೈನಿಕ ಚಿತ್ರದ ಪ್ರೇಮಗೀತೆಯಾಂದರಲ್ಲಿ ಪ್ರೇಮಾ ತುಂಬಾ ಬೋಲ್ಡ್‌ ಆಗಿ ನಟಿಸಿದ್ದಾರೆ ಎಂದು ಉದ್ಯಮ ಮಾತಾಡಿಕೊಳ್ಳುತ್ತಿದೆ. ಈ ಮುನ್ನ ಯೋಗೇಶ್ವರ್‌ ಅವರ ಮೊದಲ ಚಿತ್ರ ಉತ್ತರ ಧ್ರುವ..ದಲ್ಲೂ ಪ್ರೇಮಾ ನಟಿಸಿದ್ದರು, ನಾಚಿಕೆ ತೊರೆದಿದ್ದರು. ಆದರೆ, ಪ್ರೇಮಾ ಈಗ ಬಟ್ಟೆಯ ಮೇಲಿನ ಮೋಹವನ್ನೂ ತೊರೆದಿದ್ದಾರಂತೆ. ಅಭಿಮಾನಿಗಳಿಗೆ ಖುಷಿಯಾ? ಎಲ್ಲಕ್ಕೂ ಸೈ ಎನ್ನುವ ಸಾಕ್ಷಿಯಂಥ ಹುಡುಗಿಯೆದುರು ಎದ್ದು ಕಾಣಲು ಪ್ರೇಮಾ ಮನಸ್ಸು ಮಾಡಿದರಾ?

ಸೈನಿಕನದು ಪ್ರೇಮ ಪ್ರಸಂಗವಾದರೆ, ಕಂಬಾಲಹಳ್ಳಿಯದು ಸ್ನಾನ ಪ್ರಸಂಗ. ಮೈಗಂಟಿದ ಹಾಗೂ ಏನನ್ನೂ ಮರೆಮಾಚದ ಸೀರೆ ಹೊದ್ದುಕೊಂಡ ಪ್ರೇಮಾ ಕಿರುಪಂಚೆಯುಟ್ಟ ದೇವರಾಜ್‌ ಅವರನ್ನು ಅಪ್ಪಿಕೊಂಡು ಹೊಳೆಯಲ್ಲಿ ಈಜಾಡುವ ಹಾಡು ಕಂಬಾಲಹಳ್ಳಿಯಲ್ಲಿದೆ. ಈ ರೋಚಕ ಹಾಡು ವಿವಿಧ ವಾಹಿನಿಗಳಲ್ಲಿ ಈಗಾಗಲೇ ಪ್ರಸಾರವಾಗುತ್ತಲೂ ಇದೆ; ಪ್ರೇಮಾ ಪ್ರತಿಭೆಯ ಪಾರಾಯಣ ಮನೆ ಮನೆಯಲ್ಲಿ ನಡೆಯುತ್ತಿದೆ.

ಪ್ರೇಮಾ ಬೋಲ್ಡ್‌ ಆದದ್ದು ಯಾವಾಗ

ನವರಂಗಿ ನಾರಾಯಣ್‌ಗೆ ಜೋಡಿಯಾದಾಗ ಎಂದು ಅಭಿಮಾನಿಗಳು ಹೇಳಿದರೆ, ಉಪೇಂದ್ರ ಚಿತ್ರದ ಮೂಲಕ ಎಂದು ಉದ್ಯಮ ಹೇಳುತ್ತದೆ. ಉಪೇಂದ್ರ ಸಿನಿಮಾದಲ್ಲಿ ಪ್ರೇಮಾ ಹಾಗೂ ಉಪೇಂದ್ರ ನಟಿಸಿದ್ದ ದೃಶ್ಯವೊಂದನ್ನು ಕುರಿ-ಕೋತಿ ಖ್ಯಾತಿಯ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಹೀಗೆ ಬಣ್ಣಿಸಿದ್ದರು : 'ಗೋಡೆಯನ್ನು ಎಮ್ಮೆಯಾಂದು ಉಜ್ಜಿದಂತೆ ನಾಯಕ ನಾಯಕಿಯನ್ನು ಉಜ್ಜುತ್ತಾನೆ".

ನಾರಾಯಣ್‌ ಜೊತೆ ನನ್ನವಳು ಸಿನಿಮಾದಲ್ಲಿ ನ ನವರಂಗಿ ಕುಣಿತವನ್ನು ಹಾಗೂ ಕೋತಿಗಳು ಸಿನಿಮಾದಲ್ಲಿ ಹೆಣ್ಣು ಕೋತಿ ಆದುದನ್ನು ಕಲೆಯ ಹೆಸರಿನಲ್ಲಿ ಅಭಿಮಾನಿಗಳು ಸ್ವೀಕರಿಸಿದ್ದರು. ಉಪೇಂದ್ರ ಸಿನಿಮಾದ ಉಜ್ಜುವಿಕೆಗೂ ಒಂದು ಸಮರ್ಥನೆಯಿತ್ತು ; ಉಪ್ಪಿ ಚಿತ್ರದ ವೇಗವೇ ಅಂಥಾದ್ದು. ಆದರೆ, ಪ್ರೇಮಾ ಅವರ ಹೊಸ ಅವತಾರಗಳನ್ನು ಏನೆಂದು ಸಮರ್ಥಿಸುವುದು.
ಪ್ರತಿಭಾ ಪ್ರದರ್ಶನ ಎಂದರೆ ಇದೇನಾ? ಕನ್ನಡಕ್ಕೆ ಒಳ್ಳೆಯ ಗಿಫ್ಟ್‌ !

English summary
The rain dance : Prema with Devraj in Kambalahalli

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada