20 years of Excuse Me: 'ಗೋಕರ್ಣ' ಎದುರು ಕೋರ್ಟ್‌ಗೆ ಹೋಗಿ ಗೆದ್ದ 'ಎಕ್ಸ್‌ಕ್ಯೂಸ್ ಮಿ' ಒಟ್ಟು ಗಳಿಕೆ ಎಷ್ಟು?
ಜೋಗಿ ಪ್ರೇಮ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿ 'ಎಕ್ಸ್‌ಕ್ಯೂಸ್..ಮಿ' ಸಿನಿಮಾ 20 ವರ್ಷ ಪೂರೈಸಿದೆ. ಎನ್. ಎಂ ಸುರೇಶ್ ನಿರ್ಮಾಣದ ಈ ಟ್ರಯಾಂಗಲ್ ಲವ್ ಸ್ಟೋರಿ ಸಿನಿಮಾದಲ್ಲಿ ಅಜಯ್ ರಾವ್, ರಮ್ಯಾ ಹಾಗೂ ಸುನಿಲ್ ರಾವ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಆರ್.ಪಿ ಪಟ್ನಾಯಕ್ ಸಂಗೀತದ ಹಾಡುಗಳನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ.
'ಕರಿಯ' ಸಿನಿಮಾ ಮಾಡಿ ಗೆದ್ದಿದ್ದ ಪ್ರೇಮ್ 'ಎಕ್ಸ್‌ಕ್ಯೂಸ್ ಮಿ' ಎನ್ನುವ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಕೈ ಹಾಕಿದ್ದಾಗ ಗಾಂಧಿನಗರ ಬೆರಗುಗಣ್ಣಿನಿಂದ ನೋಡಿತ್ತು. ಅಜಯ್, ಸುನೀಲ್, ರಮ್ಯಾ ಎಲ್ಲರೂ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರೂ ಈ ಚಿತ್ರಕ್ಕೆ ಇನ್ನು ಹೊಸಬರೇ ಆಗಿದ್ದರು. ಸಾಯಿಕೃಷ್ಣ, ವಿ. ನಾಗೇಂದ್ರ ಪ್ರಸಾದ್ ಎಲ್ಲರಿಗೂ ಅದು ಮೊದಲ ಸಿನಿಮಾ ಆಗಿತ್ತು.

ಎಲ್ಲಾ ಹೊಸಬರು ಸೇರಿ ಒಂದು ಸೊಗಸಾದ ಸಿನಿಮಾ ಮಾಡಿ ಗೆದ್ದಿದ್ದರು. 'ಎಕ್ಸ್‌ಕ್ಯೂಸ್ ಮಿ' ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಸತತ 238 ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. 225ನೇ ದಿನ ಕೂಡ ಚಿತ್ರದ ಟಿಕೆಟ್ ಕಪಾಲಿ ಚಿತ್ರಮಂದಿರದಲ್ಲಿ ಬ್ಲಾಕ್‌ನಲ್ಲಿ ಮಾರಾಟವಾಗಿತ್ತು ಎಂದು ನಟ ಸುನೀಲ್ ರಾವ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.
'ಎಕ್ಸ್‌ಕ್ಯೂಸ್ ಮಿ' ಸಿನಿಮಾ ನಿರ್ಮಾಣಕ್ಕೆ 2 ಕೋಟಿ ರೂ. ಹಾಗೂ ಪ್ರಚಾರಕ್ಕೆ 1 ಕೋಟಿ ರೂ. ವ್ಯಯಿಸಲಾಗಿತ್ತು. ಆ ಕಾಲಕ್ಕೆ ಸಿನಿಮಾ ಐದಾರು ಕೋಟಿ ಲಾಭ ತಂದು ಕೊಟ್ಟಿತ್ತು. ಅಜಯ್ ಮುಖ ನೋಡದೇ ಬರೀ ಆತನ ಸಂಗೀತಕ್ಕೆ ಮಾರುಹೋಗಿ ಪ್ರೀತಿಸುವ ನಾಯಕಿ ಮಧು. ಆ ಸಂಗೀತ ನುಡಿಸಿದ್ದು ನಾನೇ ಎಂದು ಸುಳ್ಳು ಹೇಳಿಕೊಂಡು ಮಧು ಪ್ರೀತಿ ಪಡೆಯಲು ಮುಂದಾಗುವ ಸುನೀಲ್, ಕೊನೆಗೆ ಅಜಯ್-ಮಧು ಒಂದಾಗುತ್ತಾರಾ? ಎನ್ನುವ ಕತೆ ಪ್ರೇಕ್ಷಕರ ಮನಗೆದ್ದಿತ್ತು.

ಪ್ರೇಮ್ ಕತೆ- ಚಿತ್ರಕತೆ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ. ಆರ್. ಪಿ ಪಟ್ನಾಯಕ್ ಸಂಗೀತ ಎಲ್ಲಾ ಸೇರಿ 'ಎಕ್ಸ್‌ಕ್ಯೂಸ್ ಮಿ' ಸಿನಿಮಾ ಮ್ಯಾಜಿಕ್ ಕ್ರಿಯೇಟ್ ಮಾಡಿತ್ತು. 2003, ಡಿಸೆಂಬರ್ 5ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಸಿನಿಮಾ ಎಲ್ಲಾ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿತ್ತು. ಇದೇ ಸಮಯದಲ್ಲಿ ಉಪೇಂದ್ರ ನಟನೆಯ 'ಗೋಕರ್ಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು.
ಥಿಯೇಟರ್‌ಗಳಿಂದ 'ಎಕ್ಸ್‌ಕ್ಯೂಸ್ ಮಿ' ಸಿನಿಮಾ ತೆಗೆದು 'ಗೋಕರ್ಣ' ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೆದಿತ್ತು. ಇಂತಹ ಸಮಯದಲ್ಲಿ ನಿರ್ಮಾಪಕರಾದ ಎನ್. ಎಂ ಸುರೇಶ್ ಕೋರ್ಟ್‌ನಿಂದ ಸ್ಟೇ ತಂದು ತಮ್ಮ ಸಿನಿಮಾ ತೆಗೆಯದಂತೆ ನೋಡಿಕೊಂಡಿದ್ದರು. ಪರಿಣಾಮ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಂದು ನಾನು ಕೊಂಚ ಯಾಮಾರಿ ಕೈ ಚೆಲ್ಲಿದ್ದರೆ 'ಎಕ್ಸ್‌ಕ್ಯೂಸ್ ಮಿ' ಸಿನಿಮಾ ಹಿಟ್ ಆಗುತ್ತಿರಲಿಲ್ಲ. ಜನ ಇವತ್ತಿಗೂ ಸಿನಿಮಾ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ನಿರ್ಮಾಪಕರು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
'ಎಕ್ಸ್‌ಕ್ಯೂಸ್ ಮಿ' ಚಿತ್ರದ ನಾಯಕನಟ ಅಜಯ್ ರಾವ್ ಸ್ಪೆಷಲ್ ವಿಡಿಯೋ ಮಾಡಿ ಸಿನಿಮಾ 20 ವರ್ಷ ಪೂರೈಸಿದ ಸಂಭ್ರಮ ಹಂಚಿಕೊಂಡಿದ್ದಾರೆ. "ಡಿಸೆಂಬರ್ 5ನೇ ತಾರೀಖು. ಇವತ್ತಿಗೆ 'ಎಕ್ಸ್‌ಕ್ಯೂಸ್ ಮಿ' ಸಿನಿಮಾ ಬಿಡುಗಡೆಯಾಗಿ 20 ವರ್ಷ ಪೂರೈಸಿದೆ. ಬೆಳ್ಳೆ ತೆರೆಮೇಲೆ ಇದು ನನ್ನ ಜನ್ಮದಿನ ಅಂತ ಕೂಡ ಹೇಳಬಹುದು. ಈ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟ ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ಎನ್. ಎಂ ಸುರೇಶ್ ಅವರಿಗೆ ನನ್ನ ಧನ್ಯವಾದ"
"ನನ್ನ ಜೊತೆ ನಟಿಸಿದ ಗೆಳೆಯ ಸುನಿಲ್ ರಾವ್, ನಟಿ ರಮ್ಯಾ ಅವರಿಗೂ ನನ್ನ ವಂದನೆಗಳು. ಮುಖ್ಯವಾಗಿ ಎಲ್ಲಾ ಮಾಧ್ಯಮ ಮಿತ್ರರು ಹಾಗೂ ಪ್ರೇಕ್ಷಕರಿಗೆ ಕೈಮುಗಿದು ನನ್ನ ನಮಸ್ಕಾರ ಹೇಳುತ್ತೇನೆ" ಎಂದು ಹೇಳಿದ್ಧಾರೆ.


Click it and Unblock the Notifications











