NTR: ದಿವಂಗತ ನಟ, ಮಾಜಿ ಸಿಎಂ ಎನ್‌ಟಿಆರ್ ಸ್ಮರಣಾರ್ಥ 100 ರೂಪಾಯಿ ನಾಣ್ಯ ಬಿಡುಗಡೆ
ಈ ವರ್ಷ ದಿವಂಗತ ದಿಗ್ಗಜ ನಟ, ತೆಲುಗು ದೇಶಂ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ 100 ನೇ ಜನ್ಮಶತಮಾನೋತ್ಸವ ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಸೋಮವಾರ ನವದೆಹಲಿಯಲ್ಲಿ ಅವರ ಸ್ಮರಣಾರ್ಥ 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆಯಾಗಿದೆ.
ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಣ್ಯ ಬಿಡುಗಡೆ ಮಾಡಿದ್ದಾರೆ. ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ, ರಾಮಕೃಷ್ಣ, ಭುವನೇಶ್ವರಿ, ಪುರಂದರೇಶ್ವರಿ ಸೇರಿದಂತೆ ಎನ್‌ಟಿ ರಾಮರಾವ್ ಅವರ ಪುತ್ರರು ಮತ್ತು ಪುತ್ರಿಯರು ಸೇರಿ ಕುಟುಂಬದ ಇತರ ಸದಸ್ಯರೂ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಟಿಡಿಪಿ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಕೂಡ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎನ್‌ಟಿ ರಾಮರಾವ್ ಅವರ ಅತ್ಯುತ್ತಮ ಕೊಡುಗೆಗಳನ್ನು ಸ್ಮರಿಸಿದರು. ಎನ್ ಟಿ ರಾಮರಾವ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಎನ್‌ಟಿಆರ್‌ನ ಭಗವಾನ್ ಕೃಷ್ಣ ಮತ್ತು ಶ್ರೀರಾಮನ ಚಿತ್ರಣವು ಸಿನಿಪರದೆಯ ಜೊತೆಗೆ ಜನರ ಮನಸ್ಸಿನಲ್ಲಿಯೂ ಶಾಶ್ವತವಾಗಿ ಉಳಿಯುತ್ತದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.
ಸಮಾರಂಭದ ಹಿನ್ನೆಲೆ ಎನ್‌ಟಿಆರ್ ಕುಟುಂಬಕ್ಕೆ ಕೇಂದ್ರ ಸರ್ಕಾರ ಆಹ್ವಾನ ನೀಡಿತ್ತು. ಹೀಗಾಗಿ ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಬಿಜೆಪಿ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ ಸೇರಿದಂತೆ ಎನ್‌ಟಿಆರ್ ಅವರ ಪುತ್ರರು ಮತ್ತು ಪುತ್ರಿಯರು ಭಾನುವಾರ ರಾತ್ರಿ ದೆಹಲಿ ತಲುಪಿದ್ದರು.

ಎನ್‌ಟಿಆರ್ ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ ಕೇಂದ್ರ ಸರ್ಕಾರವು ಎನ್‌ಟಿಆರ್ ನಾಣ್ಯವನ್ನು ಬಿಡುಗಡೆ ಮಾಡಿದೆ. 100 ರೂಪಾಯಿ ಮುಖಬೆಲೆಯ ನಾಣ್ಯವು 44 ಮಿಮೀ ವ್ಯಾಸವನ್ನು ಹೊಂದಿದೆ. ನಾಣ್ಯದಲ್ಲಿ 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತು ಇದೆ.
ನಾಣ್ಯದ ಒಂದು ಬದಿಯಲ್ಲಿ ಮೂರು ಸಿಂಹಗಳು ಮತ್ತು ಅಶೋಕ ಚಕ್ರವಿದೆ. ಇನ್ನೊಂದು ಬದಿಯಲ್ಲಿ ಹಿಂದಿಯಲ್ಲಿ 'ನಂದಮೂರಿ ತಾರಕ ರಾಮರಾವ್ ಶತಜಯಂತಿ' ಎಂಬ ಪದದೊಂದಿಗೆ ಎನ್‌ಟಿಆರ್ ಅವರ ಚಿತ್ರವಿದೆ. ಅದರ ಕೆಳಗೆ ನಾಣ್ಯವನ್ನು 1923-2023 ಎಂದು ಗುರುತಿಸಲಾಗಿರುವ ಇಸವಿಯಿದೆ. ಇದು ಖ್ಯಾತ ನಟ ಎನ್‌ಟಿಆರ್ ಅವರ ಶತಮಾನೋತ್ಸವದ ಆಚರಣೆಯನ್ನು ಸೂಚಿಸುತ್ತದೆ.
ಎನ್‌ಟಿಆರ್ ಪತ್ನಿಗಿಲ್ಲ ಆಹ್ವಾನ...?
ಇನ್ನೊಂದು ವಿಷಯವೆಂದರೇ ಆಂಧ್ರ ಪ್ರದೇಶದ ತೆಲುಗು ಮತ್ತು ಸಂಸ್ಕೃತ ಅಕಾಡೆಮಿ ಅಧ್ಯಕ್ಷೆ ಮತ್ತು ದಿವಂಗತ ಎನ್‌ಟಿಆರ್ ಅವರ ಪತ್ನಿ ನಂದಮೂರಿ ಲಕ್ಷ್ಮಿ ಪಾರ್ವತಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ. ಈ ಬಗ್ಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿಲ್ಲ ಜೂನಿಯರ್ ಎನ್‌ಟಿಆರ್!
ಎನ್‌ಟಿಆರ್ ಸ್ಮರಣಾರ್ಥ 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಜೂನಿಯರ್ ಎನ್‌ಟಿಆರ್ ಭಾಗಿಯಾಗಿಲ್ಲ. ತಮ್ಮ ಮುಂಬರುವ ಬಹುನಿರೀಕ್ಷಿತ 'ದೇವರ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಬಿಡುವಿಲ್ಲದ ಕಾರಣ ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದಾರೆ.
ನಂದಮೂರಿ ಅಭಿಮಾನಿಗಳು ಬಾಲಯ್ಯ ಹಾಗೂ ಜೂನಿಯರ್ ಎನ್‌ಟಿಆರ್ ಅವರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶವಿದೆ ಎಂದು ಕಾದು ಕುಳಿತಿದ್ದರು. ಆದರೆ ನಟ ಎನ್‌ಟಿಆರ್ 'ದೇವರ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.


Click it and Unblock the Notifications











