ಹುಟ್ಟುಹಬ್ಬದಂದೇ ಕನ್ನಡ ನಟಿಯ ಮೇಲೆ ಅತ್ಯಾಚಾರ
ಮತ್ತು ಬರಿಸುವ ಔಷಧ ನೀಡಿ ಕನ್ನಡ ನಟಿಯೊಬ್ಬರ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ವರದಿಯಾಗಿದೆ. ನಟಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯ ದಿನವೇ ಈ ದುರಂತ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Recommended Video
ಖಾಸಗಿ ಕಂಪೆನಿಯೊಂದರಲ್ಲಿ ಸಿಇಒ ಆಗಿರುವ ಬೆಂಗಳೂರಿನ ನಾಯಂಡಹಳ್ಳಿ ನಿವಾಸಿ ಮೋಹಿತ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ನಟಿ ನೀಡಿರುವ ದೂರಿನ ಅನ್ವಯ ಮೋಹಿತ್, ಆತನ ತಂದೆ ಮಹದೇವ್, ತಾಯಿ ನಾಗವೇಣಿ ಹಾಗೂ ರಾಹುಲ್ ಎಂಬುವವರ ವಿರುದ್ಧ ಜಗಜೀವನ್ ರಾಮ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಳೆದ ವರ್ಷವೇ ಅತ್ಯಾಚಾರ ಘಟನೆ ನಡೆದಿದ್ದು, ಆರೋಪಿಯಿಂದ ಸತತ ಬೆದರಿಕೆ ಬ್ಲ್ಯಾಕ್ ಮೇಲ್‌ಗೆ ಒಳಗಾದ ನಟಿ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮುಂದೆ ಓದಿ...

ಸಿಇಒ ಎಂದು ಪರಿಚಯ
2014ರಿಂದಲೂ ಚಿತ್ರರಂಗದಲ್ಲಿರುವ ಸಂತ್ರಸ್ತ ನಟಿ, ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರವೊಂದರಲ್ಲಿ ಕೂಡ ಅಭಿನಯಿಸಿದ್ದಾರೆ. 2018ರಲ್ಲಿ ಗಾಂಧಿಬಜಾರ್‌ನ ಕಾಫಿ ಡೇ ಒಂದರಲ್ಲಿ ನಟಿ ಹಾಗೂ ಆರೋಪಿ ಮೋಹಿತ್ ಪರಿಚಯವಾಗಿತ್ತು. ಅಲ್ಲಿ ನಟಿಯನ್ನು ಮಾತನಾಡಿಸಿದ್ದ ಮೋಹಿತ್, ತಾನು ಮೆಕಾಫ್ಲೈ ಕಂಪೆನಿಯ ಸಿಇಒ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.

ಗೋವಾದಲ್ಲಿ ಫೋಟೋ ಶೂಟ್
ತನ್ನ ಕಂಪೆನಿಯ ಬ್ರ್ಯಾಂಡ್ ಅಂಬಾಸೆಡರ್ ಮಾಡುವುದಾಗಿ ನಟಿಗೆ ಆರೋಪಿ ಮೋಹಿತ್ ಭರವಸೆ ನೀಡಿದ್ದ. 2019ರ ಜನವರಿಯಲ್ಲಿ ಆಕೆಯನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಫೋಟೊಶೂಟ್ ಕೂಡ ಮಾಡಿಸಿದ್ದ. ಆದರೆ ರಾಯಭಾರಿಯಾಗಿ ಬಳಸಿಕೊಂಡರೂ ನಟಿಗೆ ಹಣ ನೀಡಿರಲಿಲ್ಲ. ಕಂಪೆನಿ ಆರ್ಥಿಕ ಸಂಕಷ್ಟದಲ್ಲಿ ಇದೆ ಎಂದು ನಂಬಿಸಿ ನಟಿಯಿಂದಲೇ ಒಂದೂವರೆ ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ.

ಮನೆಯಲ್ಲಿ ಅತ್ಯಾಚಾರ
ಕಳೆದ ವರ್ಷ ಜೂನ್ 22ರಂದು ಮೋಹಿತ್ ಹುಟ್ಟುಹಬ್ಬ ಇತ್ತು. ಮರುದಿನ ನಟಿಯ ಜನ್ಮದಿನವಿತ್ತು. ಹೀಗಾಗಿ ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿ ಹುಟ್ಟುಹಬ್ಬ ಆಚರಿಸಿದ್ದ. ಇಬ್ಬರೂ ಜತೆಯಾಗಿ ಊಟ ಮಾಡಿದ್ದರು. ಈ ವೇಳೆ ಜ್ಯೂಸ್‌ನಲ್ಲಿ ಮತ್ತು ಬರಿಸುವ ಔಷಧ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ಬ್ಲ್ಯಾಕ್ ಮೇಲ್ ಮಾಡಿ 20 ಲಕ್ಷ ಸುಲಿಗೆ
ಅರೆ ಪ್ರಜ್ಞಾವಸ್ಥೆಗೆ ಜಾರಿದ್ದ ನಟಿಯ ಮೇಲೆ ಮೋಹಿತ್ ಅತ್ಯಾಚಾರ ಎಸಗಿದ್ದ. ಅದನ್ನು ವಿಡಿಯೋ ಕೂಡ ಮಾಡಿದ್ದ. ಬಳಿಕ ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ನಾನು ಕೇಳಿದಾಗ ಹಣ ನೀಡದೆ ಹೋದರೆ ವಿಡಿಯೋವನ್ನು ಇಂಟರ್‌ನೆಟ್‌ನಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡತೊಡಗಿದ್ದ. ಹೀಗೆ ಒಂದು ವರ್ಷದಿಂದ ಆಕೆಯ ಬಳಿ ಸುಮಾರು 20 ಲಕ್ಷ ರೂ. ಕಿತ್ತಿದ್ದಾನೆ. ಅಷ್ಟೇ ಅಲ್ಲದೆ, ಮತ್ತೊಮ್ಮೆ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿವಿಧ ಪ್ರಕರಣ ದಾಖಲು
ಆತನ ಕಾಟ ತಡೆಯಲಾಗದೆ ಕೊನೆಗೆ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿರುವ ಸಂಗತಿ ತಿಳಿಯುತ್ತಿದ್ದಂತೆಯೇ ಮೋಹಿತ್ ಮತ್ತು ಆತನ ಪೋಷಕರು ಪರಾರಿಯಾಗಿದ್ದಾರೆ. ಆತನ ವಿರುದ್ಧ ಅತ್ಯಾಚಾರ, ಬೆದರಿಕೆ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.


Click it and Unblock the Notifications











