'ಪೈಲ್ವಾನ್' ಟೀಸರ್ ನೋಡಿ ಪ್ರಿಯಾ ಸುದೀಪ್ ಏನಂದ್ರು?
ನಿನ್ನೆ ಸಂಕ್ರಾಂತಿ ಹಬ್ಬದ ದಿನ ಅಖಾಡಕ್ಕೆ 'ಪೈಲ್ವಾನ್' ಧುಮುಕ್ಕಿದ್ದಾನೆ. ಅರ್ಥಾತ್ 'ಪೈಲ್ವಾನ್' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಈ ಟೀಸರ್ ದೊಡ್ಡ ಮಟ್ಟದ ಪ್ರಶಂಸೆ ಪಡೆಯುತ್ತಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ರಿಂದ ಹಿಡಿದು ಟಾಲಿವುಡ್ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮ, ಪೂರಿ ಜಗನ್ನಾಥ್, ಕಾಲಿವುಡ್ ನಟ ಪ್ರಭು ದೇವ ಹಾಗೂ ಕನ್ನಡದ ನಟರಾದ ಗಣೇಶ್, ಶ್ರೀ ಮುರಳಿ ಹೀಗೆ ಸಾಕಷ್ಟು ಜನ ಸಿನಿಮಾದ ಟೀಸರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರ ಜೊತೆಗೆ ಸಿನಿಮಾದ ಟೀಸರ್ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಬಹಳ ಉತ್ಸುಕರಾಗಿದ್ದರು. ಟೀಸರ್ ರಿಲೀಸ್ ಆದ ತಕ್ಷಣ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಂದಹಾಗೆ, 'ಪೈಲ್ವಾನ್' ಟೀಸರ್ ಬಗ್ಗೆ ಪ್ರಿಯಾ ಸುದೀಪ್ ಮಾಡಿರುವ ಟ್ವೀಟ್ ಮುಂದಿದೆ ಓದಿ..
ಹೆಮ್ಮೆ ಆಗುತ್ತಿದೆ ಎಂದ ಪ್ರಿಯಾ
'ಪೈಲ್ವಾನ್' ಸಿನಿಮಾದ ಟೀಸರ್ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾ ಸುದೀಪ್ ''ನಿಮ್ಮ ಬಗ್ಗೆ ತುಂಬ ಹೆಮ್ಮೆ ಆಗುತ್ತಿದೆ. ಒಂದು ಒಳ್ಳೆಯ ರೀತಿ ಸಿದ್ಧವಾಗಿರುವ ಸಿನಿಮಾವನ್ನು ನಾನು ನೋಡುತ್ತಿದ್ದೇನೆ''. ಎಂದಿರುವ ಅವರು ಸುದೀಪ್ ಜೊತೆಗೆ ನಿರ್ದೇಶಕ ಕೃಷ್ಣ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರಿಗೆ ಶುಭ ಕೋರಿದ್ದಾರೆ.

1 ಮಿಲಿಯನ್ ಹಿಟ್ಸ್
'ಪೈಲ್ವಾನ್' ಸಿನಿಮಾದ ಟೀಸರ್ ಸದ್ಯ ಒಂದುವರೆ ಮಿಲಿಯನ್ ಹಿಟ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ಕೇವಲ 3 ಗಂಟೆ 58 ನಿಮಿಷಕ್ಕೆ ಟೀಸರ್ 1 ಮಿಲಿಯನ್ ದಾಟಿದೆಯಂತೆ. ಸದ್ಯ, ಈ ಟೀಸರ್ 92 ಸಾವಿರ ಲೈಕ್ ಹಾಗೂ 6 ಸಾವಿರ ಡಿಸ್ ಲೈಕ್ ಪಡೆದುಕೊಂಡಿದೆ.
ತಾಂತ್ರಿಕ ತೊಂದರೆ ಆಗಿತಂತೆ
ಸಿನಿಮಾದ ಟೀಸರ್ ಕೇವಲ 3 ಗಂಟೆ 58 ನಿಮಿಷದ ಅವಧಿಯಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದ್ದು, ತಾಂತ್ರಿಕ ತೊಂದರೆಯಿಂದ ಯೂ ಟ್ಯೂಬ್ ನಲ್ಲಿ ಅದು ತೋರಿಸುತ್ತಿರಲಿಲ್ಲ ಎಂದು ನಿರ್ದೇಶಕ ಕೃಷ್ಣ ಟ್ವೀಟ್ ಮಾಡಿ ಸ್ವಷ್ಟನೆ ನೀಡಿದ್ದಾರೆ.
ಆಲ್ ದಿ ಬೆಸ್ಟ್ ಎಂದ ಸುಲ್ತಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ 'ಪೈಲ್ವಾನ್' ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದು, ಅಚ್ಚರಿ ಮೂಡಿಸಿತ್ತು. ''ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್. 'ಪೈಲ್ವಾನ್'ಗೆ ಅಭಿನಂದನೆಗಳು.'' ಎಂದು ಸಲ್ಮಾನ್ ಟ್ವೀಟ್ ಮಾಡಿದ್ದರು. ಕುಸ್ತಿಯ ಬಗ್ಗೆ ಹಿಂದಿಯಲ್ಲಿ ಸಲ್ಮಾನ್ 'ಸುಲ್ತಾನ್' ಸಿನಿಮಾ ಮಾಡಿದ್ದರು.


Click it and Unblock the Notifications











