ಸಂಕಷ್ಟದಲ್ಲಿರುವ 'ಪೈಲ್ವಾನ್' ಸುದೀಪ್ಗೆ ಬಲ ತುಂಬಿದ ಪತ್ನಿ
Recommended Video
ನಟ ಸುದೀಪ್ ಮತ್ತು ತಂಡ ಪೈರಸಿ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದೆ. ನಿನ್ನೆ (ಸಪ್ಟೆಂಬರ್ 20) ಈ ಘಟನೆಗೆ ಸಂಬಂಧ ಪಟ್ಟಂತೆ ಒಬ್ಬ ಆರೋಪಿಯನ್ನು ಬಂಧನ ಮಾಡಲಾಗಿದೆ. ಅದರ ನಂತರ ಚಿತ್ರದ ಪೈರಸಿಗೆ ಸಂಬಂಧ ಪಟ್ಟಂತೆ, ಇಂದು ಸುದೀಪ್ ಪತ್ನಿ ಪ್ರಿಯಾ ಟ್ವೀಟ್ ಮಾಡಿದ್ದಾರೆ.
ಪೈರಸಿ 'ಪೈಲ್ವಾನ್' ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎನ್ನುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ಇದು ಚಿತ್ರದ ಕಲೆಕ್ಷನ್ ಮೇಲೆ ದೊಡ್ಡ ಪರಿಣಾಮ ಬೀಳುತ್ತಿದೆ. ಪೈರಸಿ ಸಿನಿಮಾ ನೋಡಬೇಡಿ, ಪೈರಸಿಗೆ ಬೆಂಬಲ ನೀಡಬೇಡಿ ಎಂದು ಸುದೀಪ್ ಟ್ವೀಟ್ ಮನವಿ ಮಾಡಿದ್ದಾರೆ.
ಇದೀಗ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಪತಿಗೆ ಸಾಥ್ ನೀಡಿದ್ದು, ತಾವೂ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪೈರಸಿ ವಿರುದ್ಧ ಹೋರಾಟ ಮಾಡಲು ಕರೆ ನೀಡಿದ್ದಾರೆ. ಸುದೀಪ್ ಪತ್ನಿ ಪ್ರಿಯಾ ಮಾಡಿರುವ ಟ್ವೀಟ್ ಹೀಗಿದೆ.

ಪೈರಸಿ ವಿರುದ್ಧ ಕಹಳೆ ಊದಿದ ಪ್ರಿಯಾ ಸುದೀಪ್
''ಪೈರಸಿ ಚಿತ್ರರಂಗದಲ್ಲಿ ಯಾರಿಗೆ ಬೇಕಾದರೂ ಆಗಬಹುದು. ಅದರ ವಿರುದ್ಧ ದಿಟ್ಟವಾಗಿ ಹೋರಾಟ ಮಾಡುವ ಸಮಯ ಇದು. ಪೈಲ್ವಾನ್ ನನ್ನು ಜಯಶಾಲಿ ಮಾಡಲು, ಇಂದು ಪೈರಸಿಯನ್ನು ಭಾವನಾತ್ಮಕವಾಗಿ ನಾಶ ಮಾಡಲು, ನೀವೆಲ್ಲರೂ ಒಟ್ಟಾಗಿ ಜವಾಬ್ದಾರರಾಗಿರುತ್ತೀರಿ. ಇದು ನಿಮ್ಮ ಗೆಲುವು. ಕೃತಜ್ಞತೆಗಳು.'' ಎಂದು ಪ್ರಿಯಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಪತಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಬೆಂಬಲ
''ಪೈರಸಿ ಸಿನಿಮಾವನ್ನು ನೋಡದೆ, ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ನಮಗೆ ಬೆಂಬಲ ನೀಡಿದ, ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಧನ್ಯವಾದಗಳು. ಇದು ಶ್ರಮ ಮತ್ತು ಸತ್ಯದ ಬಗ್ಗೆ ನಮ್ಮ ವ್ಯಕ್ತಿತ್ವವನ್ನು ತೋರುತ್ತದೆ. ಪ್ರತಿಯೊಬ್ಬರಿಗೂ ಧನ್ಯವಾದಗಳು'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪತ್ನಿ ಪ್ರಿಯಾ ತಮ್ಮ ಬೆಂಬಲ ನೀಡಿ, ಪೈರಸಿ ವಿರುದ್ಧ ಧ್ವನಿ ಎತ್ತಿದ್ದಾರೆ.

ಪೈರಸಿ ವಿರುದ್ಧ ಸಮರ ಸಾರಿದ ಸುದೀಪ್
ಪೈರಸಿ ಬಗ್ಗೆ ನಿನ್ನೆ (ಸಪ್ಟೆಂಬರ್ 20) ರಾತ್ರಿ ಸುದೀಪ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ''ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನು ಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ'' ಎಂದು ಬರೆದುಕೊಂಡಿದ್ದಾರೆ.

ಪೈರಸಿ ಜೊತೆಗೆ ಹೊಸ ವಿವಾದ ಶುರುವಾಗಿದೆ
ಸುದೀಪ್ ''ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ.'' ಎಂದು ಬರೆದುಕೊಂಡಿದ್ದರು. ಆದರೆ, ಈಗ ಇದು ಹೊಸ ವಿವಾದಕ್ಕೆ ಕಾರಣ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಹಿಳೆಯರು ಅಸಮಾದಾನ ಹೊರ ಹಾಕಿದ್ದಾರೆ. ''ಬಳೆ ಹಾಕ್ಕೊಂಡಿದಾರೆ ಅಂದ್ರೆ ಏನಂತೆ ಪ್ರಾಬ್ಲಮ್ಮು?, ಬಳೆ ತೊಡೋರು ಹೆಣ್ಮಕ್ಳು, ಹೆಣ್ಮಕ್ಳು ವೀಕು ಅಂತಾನಾ?'' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











