ಸಯಾಮಿ ಅವಳಿ ಪಾತ್ರದಲ್ಲಿ ಪ್ರಿಯಾಮಣಿ
ಪ್ರಿಯಾಮಣಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಾಕೆ. ಅಭಿನಯದಲ್ಲಿ ಆಕೆ ಎಂಥ ಪ್ರತಿಭಾವಂತೆ ಅನ್ನೋದು ಈಗಾಗಲೇ ಸಾಬೀತಾಗಿಯಾಗಿದೆ. ಈಗ ಇನ್ನೊಮ್ಮೆ ಅದರ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ.
ಅದೇ 'ಚಾರುಲತಾ'. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಪ್ರಿಯಾಮಣಿಯದ್ದು ಸಯಾಮಿ ಅವಳಿಯ ಪಾತ್ರ. ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲ ಬಾರಿಗೆ ನಟಿಯೊಬ್ಬಳು ಈ ಬಗೆಯ ಪಾತ್ರ ಮಾಡಿದ್ದಾರೆ. ಆ ಕೀರ್ತಿ ಈಗ ಪ್ರಿಯಾಮಣಿ ಪಾಲು. ಅದು ಎಷ್ಟರ ಮಟ್ಟಿಗೆ ಪ್ರೇಕ್ಷಕನ ಮನಸ್ಸನ್ನ ಮುಟ್ಟಲಿದೆ ಎಂಬುದು ಇನ್ನು ಗೊತ್ತಾಗಬೇಕಷ್ಟೆ.
'ಪಾತ್ರ ನಿರ್ವಹಣೆ ಕಷ್ಟದ್ದು ಅಂತ ಮೊದಲೇ ಗೊತ್ತಿತ್ತು. ಆದರೆ ಬರೀ ಕಷ್ಟವಲ್ಲ, ಅದು ತುಂಬಾ ಪರಿಶ್ರಮ ಬೇಡುತ್ತದೆ ಎನ್ನೋದು ಚಿತ್ರೀಕರಣ ನಡೆಯುತ್ತಿದ್ದಂತೇ ಅರ್ಥವಾಗುತ್ತಾಹೋಯ್ತು. ನಿರ್ಮಾಪಕ ಯೋಗಿ ಮತ್ತು ನಿರ್ದೇಶಕ ಕುಮಾರ್ ತುಂಬಾ ಸಹಕಾರ ಕೊಟ್ಟರು. ಒಂದು ಶಾಟ್‍ಗಿಂತ ಮತ್ತೊಂದು ಭಿನ್ನ. ಅಷ್ಟು ಸೊಗಸಾಗಿ ಈ ಚಿತ್ರ ಮೂಡಿ ಬಂದಿದೆ. ದೀಪಿಕಾ ನನ್ನ ಡ್ಯೂಪ್ ಆಗಿ 'ಚಾರುಲತಾ'ದಲ್ಲಿ ಬಳಕೆಯಾಗಿದ್ದಾರೆ. ಹಾಗೆಯೇ ನನ್ನ ಪಾತ್ರದ ಬಾಲ್ಯದ ಪೋರ್ಷನ್‍ನಲ್ಲಿ ಗಗನ ಮತ್ತು ಗಂಧನ ಅಭಿನಯಿಸಿದ್ದಾರೆ' ಎನ್ನುತ್ತಾರೆ ಪ್ರಿಯಾ.
ಚಿತ್ರೀಕರಣದ ಅನುಭವ ಹೇಳಿ ಎಂದರೆ ಪ್ರಿಯಾಮಣಿಗೆ ನೆನಪಾಗುವುದು ರಾತ್ರಿ ಚಿತ್ರೀಕರಣ. 'ರಾತ್ರಿ ಎಂಟರಿಂದ ಮುಜಾನೆ ಎರಡು-ಮೂರು ಗಂಟೆ ತನಕ ಶೂಟ್ ಮಾಡಲಾಗುತ್ತಿತ್ತು. ನನ್ನ ಕೆರಿಯರ್‍ನಲ್ಲೇ ರಾತ್ರಿ ಅಷ್ಟು ಸಮಯದ ತನಕ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಪ್ರಥಮ. ಆಗ ಕಷ್ಟವಾಯ್ತು. ಆದರೆ ಫಲಿತಾಂಶ ನೋಡಿಯಾದ ಮೇಲೆ ಮನಸ್ಸಿಗೆ ಸಂತೋಷವಾಗಿದೆ' ಎಂದು ಪ್ರಿಯಾ ಹೇಳಿದರು.
'ಚಾರುಲತಾಕ್ಕಾಗಿ ಪೂರ್ವ ತಯಾರಿ ಏನು ಮಾಡಿಕೊಂಡಿರಲಿಲ್ಲ. ಆದರೆ ಚಿತ್ರದ ಕಥೆ, ಅದರ ಆಳ ನನಗೆ ಅರಿವಿತ್ತಾದ್ದರಿಂದ, ಅದನ್ನ ಆವಾಹಿಸಿಕೊಳ್ಳಲು ಕಷ್ಟವೇನಾಗಲಿಲ್ಲ. ಸ್ಪಾಟ್‍ಗೆ ಹೋಗಿ ಅಲ್ಲಿ ಆ ಪಾತ್ರಕ್ಕೆ ಏನು ಬೇಕೋ ಅದನ್ನ ತಯಾರಿ ಮಾಡಿಕೊಳ್ಳುತ್ತಿದ್ದೆ' ಎನ್ನುತ್ತಾರೆ ಪ್ರಿಯಾಮಣಿ. ಅಂದ ಹಾಗೆ, ಚಾರುಲತಾ ದ್ವಾರಕೀಶ್ ಅವರಿಗೆ ಇನ್ನೊಂದು ಹೊಸ ಬ್ರೇಕ್ ಕೊಡುವ ನಿರೀಕ್ಷೆಯಿದೆ. ಈ ವಿಶ್ವಾಸವನ್ನು ಚಾರುಲತಾ ಆಡಿಯೋ ರಿಲೀಸ್ ಸಮಾರಂಭದಲ್ಲಿ ಅವರು ವ್ಯಕ್ತಪಡಿಸಿದರು.


Click it and Unblock the Notifications











