ಮಕ್ಕಳಿಲ್ಲವೆಂದು ಪ್ರಿಯಾಮಣಿ ವಿಚ್ಛೇದನ: ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ!
ಸಿನಿಮಾರಂಗವೇ ಹಾಗೆ, ಏನು ಇಲ್ಲವೆಂದರೂ ತಾರೆಯರ ಬಗ್ಗೆ ಹತ್ತಾರು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಬೂದಿ ಮುಚ್ಚಿದ ಕೆಂಡವಾದರೆ ಇನ್ನು ಹಲವು ಗಾಸಿಪ್‌ಗಳಲ್ಲಿ ಯಾವುದೇ ತಿರುಳು ಇರುವುದದಿಲ್ಲ. ನಟಿ ಪ್ರಿಯಾಮಣಿ ವಿಚಾರದಲ್ಲೂ ಕೂಡ ಹೊಸ ಗಾಸಿಪ್ ಹಬ್ಬಿದೆ.
ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಮಣಿ, ಒಟಿಟಿ ಕ್ಷೇತ್ರಕ್ಕೆ ಕಾಲಿಟ್ಟು ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಸದಾ ದೂರ ಉಳಿಯುವ ಪ್ರಿಯಾಮಣಿ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.
ಪ್ರಿಯಾಮಣಿ, ತಮ್ಮ ಪತಿಯಿಂದ ದೂರಾಗುತ್ತಿದ್ದಾರೆ. ವಿಚ್ಛೇದನ ಪಡೆಯುತ್ತಿದ್ದಾರೆ. ಡಿವೋರ್ಸ್ ಕೊಡ್ತಿದ್ದಾರೆ, ಮಕ್ಕಳಾಗಿಲ್ಲ ಅಂತ ದತ್ತು ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ವಿಚಾರ ದೊಡ್ಡದಾಡುತ್ತಿದೆ. ಇದಕ್ಕೆ ನಟಿ ಪ್ರಿಯಾಮಣಿ ಸ್ಪಷ್ಟನೆ ಕೊಟ್ಟಿದ್ದಾರೆ.

ಮೌನ ಮುರಿದ ಪ್ರಿಯಾಮಣಿ!
ನಟಿ ಪ್ರಿಯಾಮಣಿ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿ ಇರುವುದಿಲ್ಲ. ಆಗಾಗ್ಗೆ ಕೆಲವು ಫೊಟೋಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ. ಆದರೆ ಕೆಲವು ದಿನಗಳಿಂದ ಪ್ರಿಯಾಮಣಿ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಡಿವೋರ್ಸ್ ಪಡೆದು ತಮ್ಮ ಪತಿ ಮುಸ್ತಫಾರಿಂದ ದೂರ ಆಗುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಹಲವು ದಿನಗಳಿಂದ ಈ ಡಿವೋರ್ಸ್ ಸುದ್ದಿ ಹರಿದಾಡುತ್ತಿದ್ದರೂ ಕೂಡ ಪ್ರಿಯಾಮಣಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಈಗ ಈ ಬಗ್ಗೆ ಮಾಧ್ಯಮ ಒಂದಕ್ಕೆ ಹೇಳಿಕೆ ಕೊಟ್ಟು, ಸ್ಪಷ್ಟನೆ ನೀಡಿದ್ದಾರೆ.

ವಿಚ್ಛೇದನ ಸುದ್ದಿ ಸುಳ್ಳು: ಪ್ರಿಯಾಮಣಿ!
ವಿಚ್ಛೇದನದ ಬಗ್ಗೆ ಮತ್ತು ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ಪ್ರಿಯಾಮಣಿ, ಮುಸ್ತಫಾ ರಾಜ್ ಸುದ್ದಿಗಳು ಹರಿದಾಡುತ್ತಿದ್ದರೂ, ಈ ಬಗ್ಗೆ ದಂಪತಿಗಳಿಬ್ಬರು ಪ್ರತಿಕ್ರಿಯೆ ನೀಡಿಲ್ಲ. ಈಗ ಈ ಬಗ್ಗೆ ಮಾತನಾಡಿರುವ ನಟಿ ಪ್ರಿಯಾಮಣಿ, ಎಲ್ಲೆಡೆ ಹರಿದಾಡುತ್ತಿರುವ ಈ ವಿಚಾರ ಸುಳ್ಳು, ನಾವು ವಿಚ್ಛೇದನ ಪಡೆಯುತ್ತಿಲ್ಲ. ದಾಂಪತ್ಯ ಜೀವನದಲ್ಲಿ ಸುಖವಾಗಿದ್ದೀವಿ ಎಂದು ಪ್ರಿಯಾಮಣಿ ಹೇಳಿದ್ದಾರೆ.

2017ರಲ್ಲಿ ಮದುವೆಯಾದ ಜೋಡಿ!
2017ರಲ್ಲಿ ಆಗಸ್ಟ್ 23ರಂದು ಖ್ಯಾತ ಉದ್ಯಮಿ ಮುಸ್ತಫಾರನ್ನು ಅದ್ದೂರಿಯಾಗಿ ಮದುವೆಯಾದರು. ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ಈ ಜೋಡಿ ರಿಜಿಸ್ಟರ್ ಮದುವೆಯ ಜೊತೆಗೆ, ಮದುವೆ ರಿಸೆಪ್ಷನ್ ಕೂಡ ಮಾಡಿಕೊಂಡಿದ್ದರು. ಈ ಜೋಡಿ ಮದುವೆ ಆಗಿ 5 ವರ್ಷ ಆಗಿದೆ. ಈಗ ಈ ರೀತಿಯ ಗಾಸಿಪ್‌ಗಳು ಹಬ್ಬಿದ್ದು, ಇದಕ್ಕೆಲ್ಲ ಬ್ರೇಕ್ ಹಾಕಿದ್ದಾರೆ ಪ್ರಿಯಾಮಣಿ.

ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟನೆ!
2009ರಲ್ಲಿ 'ರಾಮ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾಮಣಿ 'ಏನೋ ಒಂಥರಾ', 'ವಿಷ್ಣುವರ್ಧನ', 'ಕೋ ಕೋ', 'ಅಣ್ಣ ಬಾಂಡ್', 'ಚಾರುಲತಾ', 'ಅಂಬರೀಶಾ', 'ಕಲ್ಪನಾ 2', 'ದನ ಕಾಯೋನು', 'ಚೌಕಾ', 'ನನ್ನ ಪ್ರಕಾರ' ಸೇರಿಂದತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿರುವ ಪ್ರಿಯಾಮಣಿ, ಸದ್ಯ ಒಟಿಟಿಯಲ್ಲೂ ಕೂಡ ಹೆಸರು ಮಾಡಿದ್ದಾರೆ.


Click it and Unblock the Notifications











