ಡಾ.ರಾಜ್ ಸ್ನೇಹಿತ ಜಿ.ಕೆ ರೆಡ್ಡಿ ಪುನೀತ್ ಬಗ್ಗೆ ಹೇಳಿದ್ದೇನು?
ನಟ ಪುನೀತ್ ಅಂತಿಮ ದರ್ಶನವನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಅಬಿಮಾನಿಗಳು ಬರುತ್ತಿದ್ದಾರೆ. ಜೊತೆಗೆ ಸಾಕಷ್ಟು ಕಲಾವಿದರ ದಂಡೇ ಪುನೀತ್ ಅಂತಿಮ ದರ್ಶನಕ್ಕೆ ಬಂದು ಕಂಬನಿ ಮಿಡಿಯುತ್ತಿದೆ. ತಮಿಳು, ತೆಲುಗು, ಸೇರಿದಂತೆ ಬೇರೆ ಬೇರೆ ಭಾಷೆಯ ಕಲಾವಿದರು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಈಗಾಗಲೇ ಹಲವು ಗಣ್ಯರು ಆಗಮಿಸಿದ್ದು, ಇನ್ನು ಬರುತ್ತಲೇ ಇದ್ದಾರೆ. ಹೀಗೆ ರಾಜ್‌ಕುಮಾರ್ ಕುಟುಂಬದ ಜೊತೆ ಹಾಗೂ ಅಪ್ಪು ಬಳಿ ಉತ್ತಮ ಸಂಬಂಧ ಹೊಂದಿದ್ದ ಜಿ.ಕೆ ರೆಡ್ಡಿ ಕೂಡ ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಹಾಗೆ ಅವರ ಬಗ್ಗೆ ಮಾತನ್ನು ಹಂಚಿಕೊಂಡಿದ್ದಾರೆ.
ತಮಿಳು ನಟ ವಿಶಾಲ್ ತಂದೆ ಜಿ.ಕೆ ರೆಡ್ಡಿ ಹಿಂದಿನಿಂದಲೂ ರಾಜ್ ಕುಟುಂಬದ ಜೊತೆ ತುಂಬ ಆತ್ಮೀಯರು. ರಾಜ್‌ಕುಮಾರ್ ಜೊತೆ ಉತ್ತಮ ನಂಟು ಹೊಂದಿದ್ದ ಇವರು ಆತ್ಮೀಯ ಸ್ನೇಹಿತರು ಕೂಡ ಹೌದು. ಪುನೀತ್ ಸಾವಿನ ಸುದ್ದಿ ಕೇಳಿ ಚೈನೈನಲ್ಲಿದ್ದ ಜಿ.ಕೆ ರೆಡ್ಡಿ ಇಂದು ಬೆಳಗ್ಗೆಯೇ ಪುನೀತ್ ಅಂತಿಮ ದರ್ಶನಕ್ಕೆ ಬಂದ ಅವರು ಕಂಬನಿ ಮಿಡಿದ್ದಿದ್ದಾರೆ. "ನಾನು ಚಿಕ್ಕ ವಯಸ್ಸಿನಿಂದಲೂ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರನ್ನು ನೋಡಿದ್ದೇನೆ. ರಾಜ್ ಕುಮಾರ್ ಅವರಿಗೆ ಪುನೀತ್ ಕಿರಿಯವನು ಅಂತ ತುಂಬಾ ಪ್ರೀತಿ ಇತ್ತು. ಸಿನಿಮಾ ಶೂಟಿಂಗ್‌ಗೆ ಅಪ್ಪುನ ಕರೆದುಕೊಂಡು ಬರುತ್ತಿದ್ದರು. ತುಂಬ ಚೂಟಿ ಇದ್ದ ಅವನು. ಅವನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅಂತ ಅಂದುಕೊಂಡಿರಲಿಲ್ಲ ಎಂದಿದ್ದಾರೆ.
ಅಪ್ಪು ತುಂಬಾ ಒಳ್ಳೆಯ ಹುಡುಗ, ಬುದ್ಧಿವಂತ ಕೂಡ ಹೌದು, ವೆರಿ ಸ್ಮಾರ್ಟ್, ಉತ್ತಮ ನಟನಾಗಿದ್ದ. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಲಾಸ್, ನನ್ನ ಮಗ ವಿಶಾಲ್‌ನ್ನು ಎಷ್ಟು ಇಷ್ಟ ಪಡುತ್ತಿದ್ದೆನೊ ಅದಕ್ಕಿಂತ ದೊಡ್ಡ ಸ್ಥಾನವನ್ನು ನಾನು ಅಪ್ಪುಗೆ ನೀಡಿದ್ದೆ. ನನಗೆ ಆರೋಗ್ಯ ಸರಿ ಇಲ್ಲದೇ ಇದ್ದಾಗಲೂ ಅಪ್ಪು ಕರೆ ಮಾಡಿ ವಿಚಾರಿಸುತ್ತಿದ್ದರು. ಯಾವತ್ತೂ ಯಾರನ್ನು ಮರಿಯುತ್ತಿರಲಿಲ್ಲ. ಒಮ್ಮೆ ಭೇಟಿ ಆದರೂ ಅವರನ್ನು ನೆನಪಿಟ್ಟುಕೊಳ್ಳುವಂತ ಸ್ವಭಾವ. ಡಾ ರಾಜ್‌ರಲ್ಲಿ ನಾನು ಏನು ನೋಡಿದ್ದೆ ಅದು ಅವರ ಮಕ್ಕಳಲ್ಲೂ ಇದೆ. ಎಲ್ಲಾರು ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳೊ ಮೂಲಕ ಪುನೀತ್ ಮತ್ತು ಡಾ ರಾಜ್ ಕುಟುಂಬದ ನಂಟನ್ನು ಜಿ.ಕೆ ರೆಡ್ಡಿ ನೆನಪಿಸಿಕೊಂಡಿದ್ದಾರೆ.

ಸಾಕಷ್ಟು ಗಣ್ಯಾತಿ ಗಣ್ಯರು ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇಂದು ಸಂಜೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇದ್ದು, ಮಗಳು ಧೃತಿ ಬಂದ ನಂತರದಲ್ಲಿ ಕಂಠೀರವ ಸ್ಟುಡಿಯೋನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇದಕ್ಕೆ ಈಗಾಗಲೇ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಸ್ಥಳ ಪರಿಶೀಲನೆಯನ್ನು ಸಚಿವರಾದ ಮುನಿರತ್ನ ಮತ್ತು ಕೆ.ಗೋಪಾಲಯ್ಯ ಮಾಡಿದ್ದಾರೆ. ಡಾ ರಾಜ್ ಮತ್ತು ಪಾರ್ವತಮ್ಮ ಸಮಾಧಿಯ ಪಕ್ಕದಲ್ಲೇ ಪುನೀತ್ ಅಂತ್ಯಕ್ರಿಯೆ ನೆರವೇರಲಿದೆ.


Click it and Unblock the Notifications











