ವಿಜಯ ರಾಘವೇಂದ್ರ, ಶ್ರೀಮುರಳಿ ಸಹೋದರರ ತಾಯಿ ನಿರ್ಮಾಪಕಿ ಜಯಮ್ಮ ಇನ್ನಿಲ್ಲ
ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡರ ಪತ್ನಿ, ನಟ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ತಾಯಿ, ನಿರ್ಮಾಪಕಿ ಜಯಮ್ಮ ಇಂದು(ಜೂನ್ 16) ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಜಯಮ್ಮ ಅವರ ಅಗಲಿಕೆಗೆ ಆಪ್ತರು, ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ. ಡಾ. ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಸಹೋದರ ಚಿನ್ನೇಗೌಡರು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕನ ಜೊತೆ ಸದಾ ನಿಲ್ಲುತ್ತಿದ್ದರು. ಇನ್ನು ಇಡೀ ಕುಟುಂಬದ ಜವಾಬ್ದಾರಿಯನ್ನು ಜಯಮ್ಮ ಹೊತ್ತಿದ್ದರು. ಮಕ್ಕಳು ಚಿತ್ರರಂಗದಲ್ಲಿ ನಟರಾಗಿ ಗುರ್ತಿಸಿಕೊಳ್ಳಲು, ಪತಿ ಸಿನಿಮಾಗಳನ್ನು ನಿರ್ಮಾಣ ಮಾಡಲು ಜಯಮ್ಮ ಪ್ರೋತ್ಸಾಹ ಮರೆಯುವಂತಿಲ್ಲ. 3 ವರ್ಷಗಳ ಬ್ಯಾಂಕಾಕ್ ಪ್ರವಾಸದಲ್ಲಿದ್ದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದರು. ಇದೀಗ ತಾಯಿ ಅಗಲಿಕೆ ಅವರಿಗೆ ಮತ್ತಷ್ಟು ನೋವು ತಂದಿದೆ.

ಮೌಂಟ್ ಕಾರ್ಮಲ್ ಕಾಲೇಜ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಜಯಮ್ಮ ನೆಲೆಸಿದ್ದರು. ಮಧ್ಯಾಹ್ನ 3 ಗಂಟೆವರೆಗೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಂತ್ಯಕ್ರಿಯೆಗೆ ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಿರ್ಮಾಪಕಿಯಾಗಿಯೂ ಜಯಮ್ಮ ಗುರ್ತಿಸಿಕೊಂಡಿದ್ದರು. ಸೌಭಾಗ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ರಾಘವೇಂದ್ರ ನಟನೆಯ 'ಸೇವಂತಿ ಸೇವಂತಿ' ಹಾಗೂ 'ಗಣೇಶ ಮತ್ತೆ ಬಂದ' ಸಿನಿಮಾಗಳನ್ನು ಅವರು ನಿರ್ಮಿಸಿದ್ದರು.
ಜಯಮ್ಮ ಅವರಿಗೆ ಶ್ರೀಮುರಳಿ ಮುದ್ದಿನ ಮಗ. ಶ್ರೀಮುರಳಿಗೂ ಅಮ್ಮ ಅಂದ್ರೆ ಅಚ್ಚುಮೆಚ್ಚು. ತಾಯಿಯನ್ನು ಮಗು ರೀತಿ ಅವರು ಹಾರೈಕೆ ಮಾಡುತ್ತಿದ್ದರು. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಈ ಬಗ್ಗೆ ಸಾಕಷ್ಟು ವಿಚಾರಗಳನ್ನು ಜಯಮ್ಮ ಹಂಚಿಕೊಂಡಿದ್ದರು. ಇದೀಗ ತಾಯಿಯನ್ನು ಕಳೆದುಕೊಂಡು ಶ್ರೀಮುರಳಿ ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಜಯಮ್ಮ ಅಗಲಿಕೆಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರ ಸಂತಾಪ ಸೂಚಿಸುತಿದ್ದು ತಾಯಿಯನ್ನು ಕಳೆದುಕೊಂಡ ಶ್ರೀಮುರಳಿ ಹಾಗೂ ವಿಜಯ್ ರಾಘವೇಂದ್ರಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಅಮ್ಮಂದಿರ ದಿನಕ್ಕೆ ಶ್ರೀಮುರಳಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಮಾಡಿದ್ದರು. "ನಾನು ಚಿಕ್ಕವನಾಗಿದ್ದಾಗ ನಮ್ ಅಮ್ಮ ನನಗೆ ಉದ್ದ ಜುಟ್ ಕಟ್ತಿದ್ರಂತೆ.. ನಮ್ ಅಮ್ಮಂಗೆ ಗೊತ್ತಂತೆ, ನನಗೆ ಗೊತ್ತಿಲ್ವಂತೆ ಅಮ್ಮ... ನೀನು ನನಗೆ ಜನ್ಮ ಕೊಟ್ಟು ದೇವರಾಗಿದ್ದೀಯ. ನಾನೀಗಲೂ ಒಳ್ಳೆಯ ಮಗನಾಗವ ಪ್ರಯತ್ನದಲ್ಲಿ ಇದ್ದೀನೊ ಏನೊ.. ಅರ್ಥವಾಗ್ತಿಲ್ಲ. ಈ ನಿನ್ನ ನಿಷ್ಕಳಂಕ ಪ್ರೀತಿಗೆ ಹೇಗೆ ತಕ್ಕ ಪ್ರತಿಫಲ ಕೊಡಲಿ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ.. ಬಹುಶಃ ಅದು ಅಸಾಧ್ಯವಾ ?" ಎಂದು ಬರೆದುಕೊಂಡಿದ್ದರು. ಆ ಪೋಸ್ಟ್ ವೈರಲ್ ಆಗ್ತಿದೆ.
ಜಯಮ್ಮ ಅವರು ದೇವರ ಹಾಡು ಹಾಡುತ್ತಾ ಮನೆಯಲ್ಲಿ ಪೂಜೆ ಮಾಡುತ್ತಿರುವುದನ್ನು ಶ್ರೀಮುರಳಿ ವೀಡಿಯೋ ಮಾಡಿ ಒಮ್ಮೆ ಹಂಚಿಕೊಂಡಿದ್ದರು. ಆ ವೀಡಿಯೋ ಈಗ ಗಮನ ಸೆಳೆಯುತ್ತಿದೆ. ಯಾಕೋ ವೀಡಿಯೋ ಮಾಡ್ದೆ ಎಂದು ಅಮ್ಮ ಪ್ರೀತಿಯಿಂದ ಗದರಿಸಿರುವುದನ್ನು ನೋಡಬಹುದು. "ನಮ್ ಅಮ್ಮ ನಂಗೆ ಬೈದ್ರೆ.. ಏನೋ ಮಜಾ.. ಸಿಂಗಿಂಗ್ ಆದ್ಮೇಲೆ ಶೌಟಿಂಗ್" ಎಂದು ಕ್ಯಾಪ್ಷನ್ ಕೊಟ್ಟು 6 ವರ್ಷಗಳ ಹಿಂದೆ ವಿಡಿಯೋ ಪೋಸ್ಟ್ ಮಾಡಿದ್ದರು.


Click it and Unblock the Notifications