ಸುದೀಪ್ ಏಟಿಗೆ ಥಂಡಾ ಹೊಡೆದ ಎಂ. ಎನ್ ಕುಮಾರ್: ಸಂಧಾನ ಮಾಡಿಕೊಳ್ಳುವಂತೆ ಪ್ರತಿಭಟನೆ
ಸ್ಯಾಂಡಲ್‌ವುಡ್‌ನಲ್ಲಿ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಇತ್ತೀಚೆಗೆ ನಟ ಸುದೀಪ್ ಖುದ್ದಾಗಿ ಜೆಎಂಎಫ್‌ಸಿ ಕೋರ್ಟ್‌ಗೆ ಹೋಗಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ದಂಡದ ಭೀತಿ ಹಿನ್ನೆಲೆಯಲ್ಲಿ ಇದೀಗ ಎಂಎನ್ ಕುಮಾರ್ ಥಂಡಾ ಹೊಡೆದು ಸಂಧಾನದ ಮಾತನಾಡುತ್ತಿದ್ದಾರೆ.
ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಇದೀಗ ನಿರ್ಮಾಪಕ ಎಂ. ಎನ್ ಕುಮಾರ್ ಚಿತ್ರರಂಗದ ಮೇಲೆ ಒತ್ತಡ ಹಾಕೋಕೆ ಹೊರಟಿದ್ದಾರೆ. ಸುದೀಪ್‌ಗೆ ಸಿನಿಮಾ ಮಾಡಲು ಅಡ್ವಾನ್ಸ್ ಕೊಟ್ಟಿದ್ದೇನೆ, ಆದರೆ ಸುದೀಪ್ ಕಾಲ್‌ಶೀಟ್ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಮೊದಲಿಗೆ ನಿರ್ಮಾಪಕ ಎಂ. ಎನ್ ಕುಮಾರ್ ಆರೋಪಿಸಿದ್ದರು. ಅಸಲಿಗೆ ಸುದೀಪ್‌ಗೆ ಹಣ ಕೊಟ್ಟಿರುವುದಕ್ಕೆ ಕುಮಾರ್ ಬಳಿ ಯಾವುದೇ ದಾಖಲೆ ಇಲ್ಲ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ರಾಜಿ ಸಂಧಾನಕ್ಕೆ ಸಿದ್ಧ ಕೋರ್ಟ್ ಕಛೇರಿ ಎಲ್ಲಾ ಬೇಡ ಎನ್ನುತ್ತಿದ್ದಾರೆ.

ಇದೀಗ ವಾಣಿಜ್ಯ ಮಂಡಳಿಯಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳೋಣ ಎಂದು ಸುದೀಪ್ ವಿರುದ್ಧ ಎಂ. ಎನ್ ಕುಮಾರ್ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅವರಿಗೆ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಸಾಥ್ ನೀಡಿದ್ದಾರೆ ಪ್ರತಿಭಟನೆ ಮಾಡಿ ಕೋರ್ಟಿನ ಹೊರಗಡೆ ಈ ಪ್ರಕರಣ ಇತ್ಯರ್ಥ ಮಾಡಿಸುವಂತೆ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.
ಸಮಸ್ಯೆ ಬಗೆಹರಿಯುವರೆಗೂ ಧರಣಿ
ಶನಿವಾರಷ್ಟೇ(ಜುಲೈ 15) ತಮ್ಮ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕ ಎಂ. ಎನ್ ಕುಮಾರ್ ವಿರುದ್ಧ ಸುದೀಪ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಕಾರಣಕ್ಕೆ ವಾಣಿಜ್ಯ ಮಂಡಳಿ ಮುಂದೆ ನಿರ್ಮಾಪಕರಿಂದ ಪ್ರತಿಭಟನೆ ನಡೆಸಿದ್ದಾರೆ. ನಿರ್ಮಾಪಕ ಎಂ. ಎನ್ ಕುಮಾರ್ ಮಾತನಾಡಿ "ಎಲ್ಲರಿಗೂ ಗೊತ್ತು ನಂಗೆ ಆಗಿರುವ ಸಮಸ್ಯೆ. ವಾಣಿಜ್ಯ ಮಂಡಳಿ ಚಿತ್ರರಂಗದ ಮನೆ ಇದ್ದಂತೆ . ಹೀಗಾಗಿ ಇಲ್ಲಿಯೇ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಬಂದಿದ್ದೇನೆ. ಇಲ್ಲೇ ಧರಣಿ ಕೂರುತ್ತೇನೆ. ನನ್ನ ಸಮಸ್ಯೆ ಬಗೆಹರಿಯುವವರೆಗೂ ಧರಣಿ ಮುಂದುವರೆಸುತ್ತೇನೆ" ಎಂದಿದ್ದಾರೆ.
ಎಲ್ಲದಕ್ಕೂ ದಾಖಲೆ ನೀಡುತ್ತೇನೆ
"ಸುದೀಪ್ ಅವರ ಬಗ್ಗೆ ನಾನು ಎಲ್ಲಿಯೂ ಕೆಟ್ಟದಾಗಿ ಮಾತನಾಡಿಲ್ಲ. ನಮಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬುದಷ್ಟೇ ಹೇಳಿದ್ದೀನಿ. ಈ ಸಮಸ್ಯೆಯನ್ನು ವಾಣಿಜ್ಯ ಮಂಡಳಿಯಲ್ಲಿ ಬಗೆ ಹರಿಸಿಕೊಳ್ಳಬೇಕು ಎಂಬುದೇ ನನ್ನ ಉದ್ದೇಶ. ನಾನು ಯಾರ ಸಹಾಯವನ್ನು ಕೇಳಿಲ್ಲ. ನಮದು ಏನಿದೆ ಅದನ್ನ ಕ್ಲಿಯರ್ ಮಾಡಿದರೆ ಸಾಕು. ನಾವೂ ನಿರ್ಮಾಪಕರು, ಸಾಕಷ್ಟು ಜನರನ್ನು ಬೆಳೆಸಿದ್ದೀವಿ. ಎಲ್ಲರೂ ಸಭೆಗೆ ಬರಲಿ, ಸಭೆಯ ಮುಂದೆ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. ಯಾರಿಗೂ ಇಲ್ಲಿ ಅಗೌರವ ಆಗಬಾರದು. ಗೌರವ ಉಳಿಯಬೇಕು. ನನಗೆ ತೊಂದರೆಯಾದಾಗ ನಾನು ಯಾರ ಮುಖಾಂತರ ಕೇಳಬೇಕು. ಎಲ್ಲದಕ್ಕೂ ನನ್ನ ಬಳಿ ದಾಖಲೆಗಳು ಖಂಡಿತ ಇದೆ. ರಾಜಿ ಸಂಧಾನಕ್ಕೂ ವೂ ತಯಾರಿದ್ದೀವಿ. ವರು ಕರೆಯಬೇಕು, ಆದರೆ ನಾವೇ ಕರೆಯುತ್ತೀದ್ದೀವಿ"
ಇದಕ್ಕೂ ಸೂರಪ್ಪ ಬಾಬುಗೂ ಸಂಬಂಧ ಇಲ್ಲ
"ಇಲ್ಲಿ ಪ್ರೀತಿಯಿಂದ ನಡೆದರೆ ಮಾತ್ರ ವ್ಯವಹಾರ. ಯಾರನ್ನು, ಯಾವುದಕ್ಕೂ ಬಲವಂತ ಮಾಡುವುದಕ್ಕೆ ಆಗಲ್ಲ. ನಮ್ಮಲ್ಲಿರುವ ಹಿರಿಯರು ಎಲ್ಲರಿಗೂ ಮಾರ್ಗದರ್ಶನ ನೀಡಬೇಕು. ನಟ ಶಿವಣ್ಣನ ಭೇಟಿಗೆ ನಮ್ಮ ಅಧ್ಯಕ್ಷರು ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ಇದನ್ನೆಲ್ಲಾ ನಿರ್ಮಾಪಕ ಸೂರಪ್ಪ ಬಾಬು ಹಿಂದೆ ನಿಂತು ಮಾಡಿಸುತ್ತಿದ್ದಾರೆ ಅನ್ನೋದೆಲ್ಲಾ ಸುಳ್ಳು. ಬಡ್ಡಿ ಕಟ್ಟೋದು ಯಾರು ನಿರ್ಮಾಪಕರೇ ಅಲ್ಲವೇ? ನಮ್ಮ ಹಣಕ್ಕೆ ನಾವೇ ಬಡ್ಡಿ ಕಟ್ಟೋಕೆ ಇಷ್ಟ ಪಡುತ್ತೀವಾ? ಕಾರಣಾಂತರದಿಂದ ತಡ ಆಗಿರುತ್ತೆ. ಈ ರೀತಿ ತಡ ಮಾಡುವುದಕ್ಕೆ ಯಾವ ನಿರ್ಮಾಪಕನು ಸಿದ್ಧವಿರುವುದಿಲ್ಲ" ಎಂದು ಎಂ. ಎನ್ ಕುಮಾರ್ ಹೇಳಿದ್ದಾರೆ.
ಧರಣಿಗೆ ಟೇಶಿ ವೆಂಕಟೇಶ್ ಬೆಂಬಲ
ಇನ್ನು ಎಂ. ಎನ್ ಕುಮಾರ್ ಧರಣಿಗೆ ಕನ್ನಡ ಚಿತ್ರರಂಗದ ಎಡಿಟರ್ ಅಸೋಸಿಯೇಷನ್, ಕ್ಯಾಮರಾ ಅಸೋಸಿಯೇಷನ್, ಔಟ್ ಡೋರ್ ಅಸೋಸಿಯೇಷನ್ ಕಡೆಯಿಂದ ಬೆಂಬಲ ನೀಡಿದೆ. ನಿರ್ಮಾಪಕ ಟೆಶಿ ವೆಂಕಟೇಶ್ ಮಾತನಾಡಿ ಮೊಟ್ಟ ಮೊದಲ ಬಾರಿಗೆ ಕಲಾವಿದರೊಬ್ಬರು ನಿರ್ಮಾಪಕ ವಿರುದ್ಧ ಈ ರೀತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇಲ್ಲಿ ನಡೆಯುವ ವ್ಯವಹಾರಗಳು ಎಲ್ಲವೂ ವಿಭಿನ್ನ. ಇಲ್ಲಿ ನಿರ್ಮಾಪಕನ ವಿರುದ್ಧ ಆಗಿರುವ ಅನ್ಯಾಯವನ್ನು ಖಂಡಿಸುತ್ತೇವೆ" ಎಂದಿದ್ದಾರೆ.


Click it and Unblock the Notifications











