ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಎನ್. ಎಮ್ ಸುರೇಶ್ ನಾಮಪತ್ರ
ಕನ್ನಡ ಚಿತ್ರರಂಗದಲ್ಲಿ ವಾಣಿಜ್ಯ ಮಂಡಳಿ ಚುನಾವಣೆ ಬಹಳ ಪೈಪೋಟಿಯಿಂದ ಕೂಡಿರುತ್ತದೆ. ಪ್ರತಿವರ್ಷ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಆದರೆ ಕೊರೊನಾ ಹಾವಳಿ ಸಮಯದಲ್ಲಿ 3 ವರ್ಷ ಚುನಾವಣೆ ನಡೆದಿರಲಿಲ್ಲ. ಕೊನೆಗೂ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಭಾ. ಮಾ ಹರೀಶ್ ಗೆದ್ದಿದ್ದರು. ಈ ಬಾರಿ ಮತ್ತೆ ಚುನಾವಣೆ ನಿಗದಿಯಾಗಿದೆ.
ಈ ವರ್ಷ ಮೇ ತಿಂಗಳಲ್ಲೇ ಭಾ. ಮಾ ಹರೀಶ್ ಅಧಿಕಾರವಧಿ ಮುಕ್ತಾಯವಾಗಿದೆ. ಆದರೆ ಕಾರಣಾಂತರಗಳಿಂದ ಇನ್ನು ಚುನಾವಣೆ ನಡೆದಿಲ್ಲ. ಅಂತೂ ಇಂತೂ ಇದೀಗ ಚುನಾವಣೆಗೆ ಮುಹೂರ್ತ ಕೂಡಿ ಬಂದಿದೆ. ಸೆಪ್ಟೆಂಬರ್ 23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯುತ್ತಿದೆ. ಈ ಬಾರಿಯೂ ಅಧ್ಯಕ್ಷ ಸ್ಥಾನಕ್ಕೆ ಪ್ರತಿ ಬಾರಿಯೂ ಪೈಪೋಟಿ ಜೋರಾಗಿ ಇರುತ್ತದೆ. ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ನಿರ್ಮಾಪಕ ಎನ್ ಎಮ್ ಸುರೇಶ್ ಕೂಡ ಇದ್ದಾರೆ.

ನಿರ್ಮಾಪಕ ಎನ್ ಎಮ್ ಸುರೇಶ್ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದು ನಿನ್ನೆ (ಸೆಪ್ಟೆಂಬರ್ 8ಕ್ಕೆ) ನಾಮಪತ್ರ ಸಲ್ಲಿಸಿದ್ದಾರೆ. ಫಿಲ್ಮ್ ಚೇಂಬರ್ ಕಚೇರಿಗೆ ಆಗಮಿಸಿದ ನಿರ್ಮಾಪಕರು ಡಾ. ರಾಜ್ ಕುಮಾರ್ ಪ್ರತಿಮೆಗೆ ಹಾರ ಹಾಕಿ ನಮಸ್ಕರಿಸಿ ನಂತರ ನಾಮಪತ್ರ ಸಲ್ಲಿಸಿದ್ದಾರೆ. ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಬಣ ಸೇರಿದಂತೆ ಆನೇಕ ವಿತರಕರು, ನಿರ್ಮಾಪರು ದೊಡ್ಡ ಮಟ್ಟದಲ್ಲಿ ಸೇರಿ ಎನ್ ಎಮ್ ಸುರೇಶ್‌ಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿ ಮಾತನಾಡಿದ ಎನ್ ಎಮ್ ಸುರೇಶ್, "ಸಾರಾ ಗೋವಿಂದ್ ನನ್ನ ಮೇಲಿನ ಪ್ರೀತಿಗಾಗಿ ಬಂದಿದ್ದಾರೆ. ನನಗೆ ಇವತ್ತು ಈ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ. ಈಗಲೇ ಅದು ಮಾಡುತ್ತೇನೆ ಇದು ಮಾಡ್ತಿನಿ ಅಂತ ಹೇಳಲ್ಲ. ಆದರೆ ದೊಡ್ಡ ಸಮಸ್ಯೆಗಳಿವೆ ಅವುಗಳನ್ನು ಸರಿಪಡಿಸುವ ಕೆಲಸ ಖಂಡಿತ ಮಾಡುತ್ತೇನೆ. ಅವಕಾಶ ಕೊಡಿ" ಎಂದು ಮನವಿ ಮಾಡಿದ್ದಾರೆ.

ಇನ್ನು ಸಾರಾ ಗೋವಿಂದ್ ಮಾತನಾಡಿ, "ಈ ಬಾರಿಯ ವಾಣಿಜ್ಯ ಮಂಡಳಿ ಚುನಾವಣೆ ಪ್ರಾಮುಖ್ಯತೆ ಪಡೆದು ಕೊಂಡಿದೆ. ಬಹಳ ಪೈಪೋಟಿ ನಡೆಯುತ್ತಿರುವುದು ಖುಷಿ ಆಗುತ್ತಿದೆ. ಎನ್ ಎಮ್ ಕುಮಾರ್ ಎಲ್ಲರ ಪ್ರೀತಿ, ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದಾರೆ. ಎನ್ ಎಮ್ ಸುರೇಶ್ ಅವರಿಗೆ ಬೆಂಬಲ ನೀಡುತ್ತಿದ್ದೀನಿ. ಅವರವರ ಯೋಗ್ಯತೆ ನೋಡಿಕೊಂಡು ಗೆಲ್ಲಿಸಿ" ಎಂದರು.
20 ವರ್ಷಗಳ ಹಿಂದೆ 'ಎಕ್ಸ್‌ಕ್ಯೂಸ್‌ಮಿ' ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡ ಎನ್ ಎಮ್ ಸುರೇಶ್ ಬಳಿಕ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕಳೆದ ಬಾರಿ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಆಗಿದ್ದ ಸುರೇಶ್ ಇದೀಗ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ವಾಣಿಜ್ಯ ಮಂಡಳಿ ಕಚೇರಿ ಪಕ್ಕದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 8ರಂದು ಚುನಾವಣೆ ನಡೆಯಲಿದ್ದು ಅಂದೇ ಫಲಿತಾಂಶ ಹೊರ ಬೀಳಲಿದೆ. ಇನ್ನು ಯಾರೆಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











