ಒಂದೇ ವಾರಕ್ಕೆ ಕರಗಿ ನೀರಾಯಿತೇ?, 'ಐಸ್ ಕ್ರೀಮ್'..!
ಕೋಸ್ಟಲ್ ವುಡ್ ಕ್ಷೇತ್ರದ ಮೊದಲ ಹಾರರ್ ಚಿತ್ರ 'ಐಸ್ ಕ್ರೀಮ್' ಬಿಡುಗಡೆಯಾದ ಒಂದು ವಾರದೊಳಗೆ ಥಿಯೇಟರ್ ಮಾಲಕರು ಎತ್ತಂಗಡಿ ಮಾಡಿಸಿದ್ದಾರೆ. ಚಿತ್ರವು ಹೊಸಬರ ತಂಡದ ವಿನೂತನ ಪ್ರಯೋಗವಾಗಿದ್ದು, ಈ ಚಿತ್ರ ಬಿಡುಗಡೆಯ ಸಂದರ್ಭದಲ್ಲೂ ಹಲವಾರು ತೊಡಕುಗಳನ್ನು ಎದುರಿಸಿತ್ತು.
ಇದೀಗ ಬಿಡುಗಡೆಯ ನಂತರವೂ ಇದರ ಬೆನ್ನಿಗೆ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡಿರುವುದು 'ಐಸ್ ಕ್ರೀಮ್' ಚಿತ್ರದ ಎತ್ತಂಗಡಿಗೆ ಕಾರಣ ಎಂದು ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಪ್ರೀತಂ ಸಾಗರ್ ತಿಳಿಸಿದ್ದಾರೆ.[ಟಿವಿ ನಿರೂಪಕಿ ಇದೀಗ ಚಲನಚಿತ್ರ ನಿರ್ಮಾಪಕಿ]
ಬೆಳ್ತಂಗಡಿಯ ಭಾರತ್ ಚಿತ್ರಮಂದಿರದಲ್ಲಿ ಈ ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದರು ಕೂಡ ಕೂಡ್ಲು ರಾಮಕೃಷ್ಣ ಅವರ 'ಏರೆಗ್ಲಾ ಪನೊಡ್ಚಿ' ಚಿತ್ರ ತೆರೆ ಕಂಡ ಕಾರಣ ಹೊಸಬರ 'ಐಸ್ ಕ್ರೀಮ್' ಚಿತ್ರವನ್ನು ಎತ್ತಂಗಡಿ ಮಾಡಲಾಗಿತ್ತು. ಮುಂದೆ ಓದಿ..

ಚಿತ್ರ ಬಿಡುಗಡೆಗೆ ತಾಳ್ಮೆಯಿಂದ ಕಾಯಲಾಗಿತ್ತು
'ಐಸ್ ಕ್ರೀಮ್' ಸಿನಿಮಾ ಬಿಡುಗಡೆ ವೇಳೆ ಚಿತ್ರ ತಂಡ ತಾಳ್ಮೆಯಿಂದ ಕಾದಿತ್ತು. ಸೆ.18 ರಂದು ಈ ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ ಕಾಪಿಕಾಡ್ ಅವರ 'ಚಂಡಿಕೋರಿ' ಚಿತ್ರದ ಬಿಡುಗಡೆ ದಿನಾಂಕ ಆಗಷ್ಟೇ ಘೋಷಣೆಯಾಗಿತ್ತು. ಇದರಿಂದ 'ಚಂಡಿಕೋರಿ' ಚಿತ್ರಕ್ಕೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಅ.16ರಂದು ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು.[ಅದ್ಭುತ ದಾಖಲೆ ಬರೆದ ತುಳು ಸಿನೆಮಾ 'ಚಾಲಿಪೋಲಿಲು']

ಚಿತ್ರಮಂದಿರ ಖಾಲಿ ಇರಲಿಲ್ಲ
ಆದರೆ ಆ ಸಮಯದಲ್ಲಿ ಯಾವುದೇ ಚಿತ್ರಮಂದಿರಗಳು ಖಾಲಿ ಇರಲಿಲ್ಲ. ಆ ಬಳಿಕ 'ರೈಟ್ ಬೊಕ ಲೆಫ್ಟ್' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಅವರಿಗೂ ತೊಂದರೆ ಮಾಡಲು ಇಷ್ಟಪಡದ ಐಸ್ ಕ್ರೀಮ್' ಚಿತ್ರತಂಡ 'ರೈಟ್ ಬೊಕ ಲೆಫ್ಟ್' ಸಿನಿಮಾ ಬಂದು ಹೋಗುವವರೆಗೆ ಕಾದರು. ಆ ಬಳಿಕ ಸಿನಿಮಾವನ್ನು ಬಿಡುಗಡೆ ಮಾಡಲಾಯಿತಾದರೂ, ವಾರದಲ್ಲೇ ಸಿನಿಮಾವನ್ನು ಎತ್ತಂಗಡಿ ಮಾಡಲಾಗಿದೆ ಎಂದು ಚಿತ್ರ ತಂಡ ಆಕ್ರೋಶ ವ್ಯಕ್ತಪಡಿಸಿದೆ.

ತುಳು ಚಿತ್ರರಂಗದ 'ರಂಗಿತರಂಗ'
'ಐಸ್ ಕ್ರೀಮ್' ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ತುಳು ಚಿತ್ರರಂಗದ 'ರಂಗಿತರಂಗ' ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಅಲ್ಲದೇ ಸಿನಿಮಾ ಥಿಯೇಟರ್ ಗಳ ಮಾಲಕರೂ ಉತ್ತಮ ಸಿನಿಮಾ ಎಂದು ಬೆನ್ನು ತಟ್ಟಿದ್ದಾರೆ. ನಮ್ಮ ಹೊಸ ಪ್ರಯತ್ನಕ್ಕೆ ಮಾಧ್ಯಮಗಳೂ ಬೆನ್ನು ತಟ್ಟಿದೆ.

ಕೆಟ್ಟ ಸ್ಪರ್ಧೆಗೆ ಬಲಿಯಾಗಿದ್ದೇವೆ
ಇದೀಗ ನಾವು ಕೆಟ್ಟ ಸ್ಪರ್ಧೆಗೆ ಬಲಿಯಾಗಿದ್ದೇವೆ. ಮುಂಬರುವ 'ಏರೆಗ್ಲಾ ಪನೋಡ್ಚಿ' ಎಂಬ ಚಿತ್ರಕ್ಕಾಗಿ 'ಐಸ್ ಕ್ರೀಮ್' ಅನ್ನು ಎತ್ತಂಗಡಿ ಮಾಡಲಾಗಿದೆ. ಮಂಗಳೂರಿನ ಜ್ಯೋತಿ ಸಿನಿಮಾ ಮಂದಿರದಲ್ಲಿ 'ಐಸ್ ಕ್ರೀಮ್' ಮುಂದುವರಿಯುತ್ತದೆ. ಉಳಿದ ಚಿತ್ರ ಮಂದಿರಗಳಲ್ಲಿ ಕಲೆಕ್ಷನ್ ಇಲ್ಲ ಎಂಬ ಕಾರಣಕ್ಕೆ ಖಂಡಿತವಾಗಿಯೂ ಚಿತ್ರವನ್ನು ತೆಗೆದು ಹಾಕಲಾಗಿಲ್ಲ. ಇದಕ್ಕೆ ಕಾರಣ ಕೆಟ್ಟ ಸ್ಪರ್ಧೆ. ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ.

ಕುತಂತ್ರ ಮಾಡಲಾಗಿದೆ
'ಐಸ್ ಕ್ರೀಮ್' ಸಿನಿಮಾವನ್ನು ಎತ್ತಂಗಡಿ ಮಾಡಿರುವುದು ನೋಡಿದರೆ, ಹೊಸಬರ ಸಿನಿಮಾ ಪ್ಲಾಪ್ ಎಂಬ ಭಾವನೆಯನ್ನು ಗಟ್ಟಿಗೊಳಿಸುವುದಕ್ಕಾಗಿ ಮಾಡಿರುವ ಕುತಂತ್ರವಾಗಿದೆ. ಹೀಗೇ ಮುಂದುವರಿದರೆ ತುಳು ಚಿತ್ರರಂಗದಲ್ಲಿ ಹೊಸಬರಿಗೆ ಬೆಳೆಯಲು ಅವಕಾಶವೇ ಇಲ್ಲದಂತಾಗುತ್ತದೆ ಎಂದು ಚಿತ್ರ ತಂಡ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಹೊಸಬರ ಸಿನಿಮಾಕ್ಕೆ ಅನ್ಯಾಯವಾಗುತ್ತಿದೆ
ತುಳು ಚಿತ್ರರಂಗದಲ್ಲಿ ಹೊಸಬರ ಚಿತ್ರಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಇದೀಗ ಕೇಳಿ ಬರುತ್ತಿದೆ. ಇದು ಕೇವಲ 'ಐಸ್ ಕ್ರೀಮ್' ಚಿತ್ರ ಮಾತ್ರವಲ್ಲದೇ, 'ರೈಟ್ ಬೊಕ ಲೆಫ್ಟ್' ಸಿನಿಮಾಕ್ಕೂ ಇದೇ ರೀತಿಯ ಅನ್ಯಾಯವಾಗಿತ್ತು. ಈ ಹಿಂದೆಯೂ ಇಂತಹ ಕೂಗು ಕೇಳಿ ಬಂದಿತ್ತು. ಚಿತ್ರಗಳು ಒಂದರ ಹಿಂದೊಂದರಂತೆ, ಬಿಡುಗಡೆ ಆಗುತ್ತಿರುವುದು ಇದಕ್ಕೆ ಮೂಲಕಾರಣ ಎಂದು ಹೇಳಲಾಗುತ್ತಿದೆ.

ಇದ್ಯಾವ ಹೊಸ ನ್ಯಾಯ
ಹೊಸಬರ ಸಿನಿಮಾ ಒಂದೇ ದಿನಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದಿಲ್ಲ, ಬದಲಾಗಿ ದಿನ ಕಳೆದಂತೆ ಅದು ವೀಕ್ಷಕರ ಮನ ಗೆಲ್ಲುತ್ತದೆ. ಹೀಗಿರುವಾಗ ಬಿಡುಗಡೆಯಾದ ಒಂದೇ ವಾರದೊಳಗೆ ಸಿನಿಮಾವನ್ನು ಎತ್ತಂಗಡಿ ಮಾಡುವುದು ಯಾವ ನ್ಯಾಯ ಎನ್ನುವುದು 'ಐಸ್ ಕ್ರೀಮ್' ಚಿತ್ರ ತಂಡದ ಪ್ರಶ್ನೆಯಾಗಿದೆ.


Click it and Unblock the Notifications











