ಪುಷ್ಕರ್ ಮಲ್ಲಿಕಾರ್ಜುನಯ್ಯಗೆ ಸಾಲದ ಶೂಲ; ಬಡ್ಡಿ ದಂಧೆಕೋರರಿಂದ ಬೆದರಿಕೆ!
ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಪಕರು ಈಗ ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲ ಕೊಟ್ಟವರು ಬಡ್ಡಿ ಚಕ್ರಬಡ್ಡಿ ಹಾಕಿ ಕಿರುಕುಳ ನೀಡಲು ಆರಂಭಿಸಿದ್ದಾರೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕಿರಿಕ್ ಪಾರ್ಟಿ', 'ಅವನೇ ಶ್ರೀಮನ್ನಾರಾಯಣ' ಸೇರಿದಂತೆ ಹಲವು ಸಿನಿಮಾಗಳಿಗೆ ಪುಷ್ಕರ್ ಹಣ ಹೂಡಿದ್ದರು. ಆದರೆ ಇತ್ತೀಚೆಗೆ ಪುಷ್ಕರ್ ಫಿಲ್ಮ್ಸ್ ಸಂಸ್ಥೆಯ ಸಿನಿಮಾಗಳು ಸದ್ದು ಮಾಡುತ್ತಿಲ್ಲ. ಸಿನಿಮಾಗಳು ಸೋತು ನಷ್ಟ ಅನುಭವಿಸುವಂತಾಗಿದೆ. ಇದೇ ಸಮಯದಲ್ಲಿ ಸಾಲ ಕೊಟ್ಟವರು ಬಡ್ಡಿ ಆಸೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇದೀಗ ಪುಷ್ಕರ್ ಸಿಸಿಬಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಮಗೆ ಬಡ್ಡಿ ದಂಧೆಕೋರರು ಕಿರುಕುಳ ನೀಡುತ್ತಿದ್ದಾರೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಆರೋಪಿಸಿ ದೂರು ನೀಡಿದ್ದಾರೆ. ನಿರ್ಮಾಪಕರು ಉಪ ನಿಬಂಧಕರಾದ ಕಿಶೋರ್ ಕುಮಾರ್‌ಗೆ ದೂರು ನೀಡಿದ್ದಾರೆ ಎನ್ನಲಾಗ್ತಿದೆ. ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಗಳ ವಿರುದ್ಧ ಕರ್ನಾಟಕ ಮನಿ ಲೆಂಡರ್ಸ್ ಕಾಯಿದೆ, ಕರ್ನಾಟಕ ಪ್ರಹಿಬಿಷನ್ ಆಫ್ ಚಾರ್ಜಿಂಗ್ ಎಕ್ಸಾರ್ಬಿಟೇಶನ್ ಇಂಟರೆಸ್ಟ್ ಆ್ಯಕ್ಟ್, ವಂಚನೆ, ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ನಿರ್ಮಾಪಕ ಪುಷ್ಕರ್ ಖುದ್ದು ತಮ್ಮ ಸಂಬಂಧಿ ಆದರ್ಶ್ ಡಿ.ಬಿ ಬಳಿ ಸಾಲ ಪಡೆದು ಸಿನಿಮಾಗಳನ್ನು ನಿರ್ಮಿಸಿದ್ದರು. 4 ವರ್ಷಗಳಲ್ಲಿ ಹಂತ ಹಂತವಾಗಿ ಒಟ್ಟು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಅದಕ್ಕೆ ಪ್ರತಿ ತಿಂಗಳು 5%ರಂತೆ ಬಡ್ಡಿ ನೀಡುತ್ತಿದ್ದರಂತೆ. ಭದ್ರತೆಗಾಗಿ 10 ಖಾಲಿ ಚೆಕ್‌ಗಳನ್ನು ಕೊಟ್ಟಿದ್ದಾರಂತೆ. ಈಗಾಗಲೇ 5 ಕೋಟಿ ರೂಪಾಯಿ ಸಾಲಕ್ಕೆ ಪ್ರತಿಯಾಗಿ ಅಸಲು, ಬಡ್ಡಿ ಸೇರಿ ಒಟ್ಟು 11.50 ಕೋಟಿ ರೂ. ಪಾವತಿಸಿರುವುದಾಗಿ ಹೇಳುತ್ತಿದ್ದಾರೆ.
ಆದರ್ಶ್ ಮಾತ್ರ ನೀವು ಪಾವತಿಸಿರುವ ಹಣ ಬಡ್ಡಿ ಹಾಗೂ ಚಕ್ರಬಡ್ಡಿ ಅಷ್ಟೆ. ಇನ್ನೂ 13 ಕೋಟಿ ರೂಪಾತಿ ಬೇಡಿಕೆ ಇಟ್ಟಿದ್ದಾರಂತೆ. ಇಷ್ಟಕ್ಕೆ ಸುಮ್ಮನಾಗದ ಆದರ್ಶ್, ಹರ್ಷ ಸಿ, ಹರ್ಷ ಡಿ.ಬಿ. ಹಾಗೂ ಅವರ ಕೆಲವು ಸಹಚರರು ತಮ್ಮ ವಾಸದ ಮನೆ, ಕಚೇರಿಗಳಿಗೆ ಹುಡುಗರನ್ನು ಕಳುಹಿಸಿ ಗಲಾಟೆ ಮಾಡಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಪುಷ್ಕರ್ ಆರೋಪಿಸಿದ್ದಾರೆ.
ಕನ್ನಡ ಮಾತ್ರವಲ್ಲದೇ 'ತಿಂಕಲಜ್ಚ ನಿಶ್ಚಯಮ್' ಎನ್ನುವ ಮಲಯಾಳಂ ಚಿತ್ರಕ್ಕೂ ಪುಷ್ಕರ್ ಬಂಡವಾಳ ಹೂಡಿದ್ದರು. ಈ ಸಿನಿಮಾ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಪುಷ್ಕರ್ ಬ್ಯಾನರ್‌ನಿಂದ ಕೊನೆಯದಾಗಿ 'ಅವತಾರ ಪುರುಷ-2' ಸಿನಿಮಾ ತೆರೆಗೆ ಬಂದಿತ್ತು. ಸುನಿ ನಿರ್ದೇಶನದ ಶರಣ್ ನಟನೆಯ ಈ ಕಾಮಿಡಿ ಹಾರರ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಆದರೂ ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್‌ನಿಂದ ತಾವು ಸೇಫ್ ಆಗಿರುವುದಾಗಿ ನಿರ್ಮಾಪಕರು ಹೇಳಿದ್ದರು.
ಸಚಿನ್ ರವಿ ನಿರ್ದೇಶನದ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿ ಬಹಳ ನಷ್ಟ ಅನುಭವಿಸಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ನಟ ರಕ್ಷಿತ್ ಶೆಟ್ಟಿಯಿಂದ ದೂರಾಗಿದ್ದರು. ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾದರೂ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ.


Click it and Unblock the Notifications










