'45' ಸಿನಿಮಾ ಪೈರಸಿ ಮಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ನಿರ್ಮಾಪಕ
ಚಿತ್ರರಂಗಕ್ಕೆ ಪೈರಸಿ ಪದೇ ಪದೆ ಕಾಟ ಕೊಡುತ್ತಿದೆ. ಸಾವಿರಾರು ಜನ ನೂರಾರು ದಿನಗಳ ಕಾಲ ಶ್ರಮಪಟ್ಟು ಮಾಡಿದ ಸಿನಿಮಾವನ್ನು ಕಿಡಿಗೇಡಿಗಳು ಕೆಲವೇ ನಿಮಿಷಗಳಲ್ಲಿ ಪೈರಸಿ ಮಾಡುತ್ತಿದ್ದಾರೆ. ಕೋಟಿ ಕೋಟಿ ಹಣ ಸುರಿದ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸದ್ಯ '45' ಚಿತ್ರಕ್ಕೂ ಪೈರಸಿ ಕಾಟ ಶುರುವಾಗಿದೆ.
ಇತ್ತೀಚೆಗೆ ನಟ ಸುದೀಪ್ ಪೈರಸಿ ವಿರುದ್ಧ ನಮ್ಮ ಯುದ್ದ ಎಂದು ಹೇಳಿದ್ದರು. 'ಮಾರ್ಕ್' ಚಿತ್ರಕ್ಕೂ ಪೈರಸಿ ಭೀತಿ ಶುರುವಾಗಿದೆ. ಇತ್ತ '45' ಚಿತ್ರದ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿಸುವ ಕೆಲಸ ಶುರುವಾಗಿದೆ. ಈಗಾಗಲೇ ಕೋರ್ಟ್‌ನಿಂದ ಆರ್ಡರ್ ತಂದಿರುವ ನಿರ್ಮಾಪಕ ರಮೇಶ್ ರೆಡ್ಡಿ ಕಾನೂನು ಸಮರದ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ "ಒಳ್ಳೆ ಸಿನಿಮಾ ಮಾಡಿದ್ದೀವಿ. ಒಳ್ಳೆ ಸಂದೇಶ ಇರುವ ಸಿನಿಮಾ. ಪೈರಸಿ ಮಾಡಬೇಡಿ" ಎಂದು ಮನವಿ ಮಾಡಿದ್ದಾರೆ.

"ಸಮಾಜಕ್ಕೆ ಒಳ್ಳೆ ಸಂದೇಶ ಕೊಡಬೇಕು ಎಂದು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದೀವಿ. ಆದರೆ ಸಿನಿಮಾ ರಿಲೀಸ್ ಆಗಿ 24 ಗಂಟೆ ಕಳೆಯುವಷ್ಟರಲ್ಲಿ ಪೈರಸಿ ಮಾಡಿದ್ದಾರೆ. ನನಗೆ ಕೆಲವು ಲಿಂಕ್ಸ್ ಬಂತು. ನಾನು ಕೋರ್ಟ್‌ನಿಂದ ಆರ್ಡರ್ ತಂದಿದ್ದೀವಿ. ಇದು ಪೈರಸಿ ಮಾಡುವವರಿಗೆ ಅನ್ವಯಿಸುತ್ತದೆ. ಇದು ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಸಿನಿಮಾದಲ್ಲೇ ಪಾಪ-ಪುಣ್ಯದ ಬಗ್ಗೆ ಹೇಳಿದ್ದೀವಿ. ಸಮಾಜಕ್ಕೆ ಒಳ್ಳೆ ಸಂದೇಶ ಇದೆ. ಪೈರಸಿ ಮಾಡಬೇಡಿ" ಎಂದು ನಿರ್ಮಾಪಕ ರಮೇಶ್ ರೆಡ್ಡಿ ವಿನಂತಿಸಿದ್ದಾರೆ.
ಅರ್ಜುನ್ ಜನ್ಯಾ ನಿರ್ದೇಶನದ ಫ್ಯಾಂಟಸಿ ಸಿನಿಮಾ '45' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಕಂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪೇಯ್ಡ್ ಪ್ರೀಮಿಯರ್ ಶೋ ಹಾಗೂ ಮೊದಲ ದಿನ 5 ಕೋಟಿ ರೂ.ಗೂ ಅಧಿಕ ನೆಟ್ ಕಲೆಕ್ಷನ್ ಮಾಡಿದೆ. ಗ್ರಾಸ್ ಕಲೆಕ್ಷನ್ 8 ಕೋಟಿ ರೂ. ದಾಟಿರುವ ಅಂದಾಜಿದೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ '45' ಸಿನಿಮಾ ನಿರ್ಮಿಸಲಾಗಿದೆ. ಅರ್ಜುನ್ ಜನ್ಯಾ ಸ್ವತಃ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 'ಮಾರ್ಕ್' ಸಿನಿಮಾ ಆರ್ಭಟದ ನಡುವೆಯೂ '45' ಸಿನಿಮಾ ಕಲೆಕ್ಷನ್ ಜೋರಾಗಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗ್ತಿದೆ. ಹಾಗಾಗಿ ವೀಕೆಂಡ್‌ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ಶಿವಣ್ಣನ ನಟನೆ ಅಭಿಮಾನಿಗಳ ಮನಗೆದ್ದಿದೆ. ಕ್ಲೈಮ್ಯಾಕ್ಸ್ ಚಿತ್ರದಲ್ಲಿ ಹೈಲೆಟ್ ಎನಿಸಿಕೊಂಡಿದೆ.
ಸಿಂಪಲ್ ಕಥೆಯನ್ನು ಬಹಳ ವಿಭಿನ್ನವಾಗಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಗರುಡಪುರಾಣದ ಹಿನ್ನೆಲೆಯಲ್ಲಿ ಮನುಷ್ಯನ ಪಾಪ- ಪುಣ್ಯದ ಬಗ್ಗೆ ಚರ್ಚಿಸಲಾಗಿದೆ. ರಾಜೇಂದ್ರನ್, ಕೌಸ್ತುಭ ಮಣಿ, ಪ್ರಮೋದ್ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾಗಿವೆ. ಅದರ ನಡುವೆ '45' ದರ್ಬಾರ್ ಜೋರಾಗಿದೆ. ನಿರ್ಮಾಪನಾಗಿ ನಾನು ಸೇಫ್ ಆಗ್ತೀನಿ ಎಂದು ರಮೇಶ್ ರೆಡ್ಡಿ ತಿಳಿಸಿದ್ದಾರೆ.
ಸತ್ಯಾ ಹೆಗಡೆ ಛಾಯಾಗ್ರಹಣ, ಅನಿಲ್ ಕುಮಾರ್ ಸಂಭಾಷಣೆ, ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿದೆ. ಒಂದು ವಾರ ತಡವಾಗಿ ಅಂದರೆ ಜನವರಿ ಒಂದರಂದು ಸಿನಿಮಾ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿವೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕರ್ನಾಟಕದಲ್ಲಿ '45' ಸಿನಿಮಾ ವಿತರಣೆ ಮಾಡಿದೆ.


Click it and Unblock the Notifications











