twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ರಾಮು ವಿಷಾದ

    By Staff
    |

    ಕನ್ನಡ ಚಿತ್ರರಂಗ ಹಿಂದುಳಿಯಲು ಕಾರಣವೇನು? ಎಂಬ ಪ್ರಶ್ನೆಯನ್ನು ಕೋಟಿ ನಿರ್ಮಾಪಕ ಎಂದೇ ಹೆಸರಾದ ರಾಮು ಅವರ ಮುಂದಿಟ್ಟರೆ ಅವರು ಹೇಳಿದ್ದಿಷ್ಟು. ಕನ್ನಡ ಚಿತ್ರೋದ್ಯಮದಲ್ಲಿ ಉತ್ತಮ ಕಲಾವಿದರು ಇದ್ದಾರೆ. ಹೆಕ್ಕಿ ತೆಗೆದರೆ ಬಾಲಿವುಡ್ ಕಲಾವಿರನ್ನು ಮೀರಿಸುವಂತ ಕಲೆ ನಮ್ಮ ಕಲಾವಿದರಲ್ಲಿ ಅಡಗಿದೆ. ಅದಕ್ಕೆ ಉದಾಹರಣೆಯಾಗಿ ಅನೇಕ ಕಲಾವಿದರನ್ನು ಹೆಸರಿಸಬಹುದು. ಆ ಸಾಲಿನಲ್ಲಿ ಪ್ರಕಾಶ್ ರೈ, ಅರ್ಜುನ್ ಸರ್ಜಾ, ರಜನಿಕಾಂತ್ ಇತ್ತೀಚೆಗೆ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕಿಚ್ಚ ಸುದೀಪ್ ರನ್ನು ಹೆಸರಿಸಬಹುದು ಎನ್ನುತ್ತಾರೆ.

    ಅನ್ಯ ಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡದ ಕಲಾವಿದರ ಪಟ್ಟಿಯನ್ನು ತಯಾರಿಸಿದರೆ ಹನುಮಂತನ ಬಾಲಕ್ಕಿಂತಲೂ ಉದ್ದವಾಗಲಿದೆ. ಇಷ್ಟೊಂದು ಶ್ರೀಮಂತ ಕಲೆಯನ್ನು ಹೊಂದಿರುವ ಕನ್ನಡ ಚಿತ್ರರಂಗ ಈ ಹೊತ್ತಿನವರೆಗೊ ಅಲ್ಲೊಂದು ಇಲ್ಲೊಂದು ಬಿಟ್ಟರೆ ಹೇಳಿಕೊಳ್ಳುವಂತ ಚಿತ್ರ ನಿರ್ಮಿಸುವಲ್ಲಿ ವಿಫಲವಾಗಿದೆ ಎನ್ನುತ್ತಾರೆ ರಾಮು.

    ಕನ್ನಡ ಚಿತ್ರರಂಗದ ಮಂದಿಗೆ ಸಿನಿಮಾ ನಿರ್ದೇಶಿಸುವುದು, ನಿರ್ಮಾಣ ಮಾಡುವುದು, ಅಭಿನಯಿಸುವುದು ಎಂದರೆ ಶೋಕಿಯಾಗಿ ಬಿಟ್ಟಿದೆ. ಇದು ಹೀಗೆ ಮುಂದುವರೆದರೆ ಕನ್ನಡ ಚಿತ್ರರಂಗದ ಗತಿ ಏನು ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರಗಳ ಇವತ್ತಿನ ಸೋಲಿಗೆ ಕಾರಣವೇನು ಎನ್ನುವುದು ಕೋಟಿ ನಿರ್ಮಾಪಕನಾದ ನನಗೂ ಹಲವಾರು ಬಾರಿ ಕಾಡತೊಡಗಿದೆ ಎನ್ನುತ್ತಾರೆ ರಾಮು.

    ಅವರ ಪ್ರಕಾರ 'ಮುಂಗಾರು ಮಳೆ' ಹಾಗೂ 'ದುನಿಯಾ' ಚಿತ್ರಗಳ ನಂತರ ಬಂದ ಎಲ್ಲ ಚಿತ್ರಗಳಿಗೆ ಸರಿಯಾದ ಹೋಮ್ ವರ್ಕ್, ಪ್ಲಾನಿಂಗ್ ಇರಲಿಲ್ಲ. ಚಿತ್ರವೊಂದು ಯಶಸ್ವಿಯಾಗಿ ಮೂಡಿಬರಲು ಯಾವುದೇ ಪ್ರಾಥಮಿಕ ಸಿದ್ಧತೆಗಳು ಇರಲಿಲ್ಲ. ಆದರೂ ಸಿನಿಮಾ ನಿರ್ಮಾಣವಾದವು. ಸ್ಯಾಂಡಲ್ ವುಡ್ ನ ಇಂದಿನ ಪರಿಸ್ಥಿತಿಗೆ ಅದೇ ಕಾರಣ ಎಂದು ಅವರು ವಿವರಿಸುತ್ತಾರೆ.

    ಹಾಗಂತ ಚಿತ್ರರಂಗಕ್ಕೆ ಹೊಸಬರು ಬರಬಾರದೆಂದು ರಾಮು ವಾದಿಸುವುದಿಲ್ಲ. ನಮ್ಮಲ್ಲಿ ನಿಜಕ್ಕೂ ಒಳ್ಳೊಳ್ಳೆಯ ಪ್ರತಿಭಾವಂತರಿದ್ದಾರೆ. ಆ ಪ್ರತಿಭೆ ಕ್ರಮಬದ್ಧವಾಗಿ ಬಳಕೆಯಾಗುತ್ತಿಲ್ಲ. ರಿಯಲ್ ಎಸ್ಟೇಟ್ ಜತೆಗೆ ಬಿಸಿನೆಸ್ ಇರಲಿ ಎಂದು ಸಿನಿಮಾ ರಂಗಕ್ಕೆ ಬಂದರೆ ಹೀಗೆ ಆಗುವುದು ಎಂದು ಅವರು ವ್ಯಂಗ್ಯವಾಗಿ ವಿಶ್ಲೇಷಿಸುತ್ತಾರೆ. ದುನಿಯಾದಂತ ಸೂಪರ್ ಹಿಟ್ ಚಿತ್ರ ಕೊಟ್ಟ ಸೂರಿ ಅವರ 'ಇಂತಿ ನಿನ್ನ ಪ್ರೀತಿಯ' ಚಿತ್ರ ಗೆಲ್ಲಿಸಲು ಸಾಧ್ಯವಾಗಲಿಲ್ಲ. ತುಂಬ ನಿರೀಕ್ಷೆಯೊಂದಿಗೆ ನಾವು ಆ ಚಿತ್ರವನ್ನು ತೆಗೆದುಕೊಂಡೆವು. ಆದರೆ ಬಾಕ್ಸಾಫೀಸ್ ನಲ್ಲಿ ಚಿತ್ರ ಇನ್ನಿಲ್ಲದಂತೆ ಸೋಲನುಭವಿಸಿತು. ಸಿನಿಮಾಗಳು ಸಾಲುಸಾಲಾಗಿ ಬರುತ್ತಿವೆ ಗೆಲುವು ಮಾತ್ರ ಶೂನ್ಯ ಎಂದು ಬೇಸರ ವ್ಯಕ್ತಪಡಿಸಿದರು.

    ಚಿತ್ರಮಂದಿರಗಳ ಸಮಸ್ಯೆ ಕುರಿತು ಮಾತನಾಡಿದ ರಾಮು, 20-30 ಚಿತ್ರಗಳು ತಯಾರಾಗುತ್ತಿರುವ ಜಾಗದಲ್ಲಿ 100 ರಿಂದ 150 ಚಿತ್ರಗಳು ಬರುತ್ತಿವೆ. ಆದರೆ ಚಿತ್ರಮಂದಿರಗಳ ಸಂಖ್ಯೆ ಮಾತ್ರ ಹೆಚ್ಚುತ್ತಿಲ್ಲ. ಬದಲಿಗೆ ಚಿತ್ರಮಂದಿರಗಳು ಶಾಪಿಂಗ್ ಮಾಲ್ ಹಾಗೂ ಮದುವೆ ಛತ್ರಗಳಾಗುವ ಹಾದಿಯಲ್ಲಿವೆ. ಸದ್ಯ ರಾಜ್ಯದಲ್ಲಿ 600 ಚಿತ್ರಮಂದಿರಗಳಿವೆ. ಇರುವ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳಿದ್ದೆ ದರ್ಬಾರು. ಕನ್ನಡ ಚಿತ್ರಗಳಿಗೆ ಕನ್ನಡ ನೆಲದಲ್ಲಿ ಮೂರನೇ ಸ್ಥಾನ ಇದ್ದರೇ ಕನ್ನಡ ಚಿತ್ರರಂಗ ಬೆಳೆಯುವುದಾದರೂ ಹೇಗೆ ? ಅದೇ ನೆರೆಯ ಆಂಧ್ರಪ್ರದೇಶದಲ್ಲಿ 4000 ಚಿತ್ರಮಂದಿರಗಳಲ್ಲಿ ಸ್ಥಳೀಯ ಚಿತ್ರಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

    ಆದರೆ ನಮ್ಮಲ್ಲಿ ಹಾಗಲ್ಲ, ಇರುವ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ನಾಲ್ಕೈದು ಭಾಷೆ ಚಿತ್ರಗಳನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಪರಿಸ್ಥಿತಿ ಇದೆ. ಹೊಸದಾಗಿ ಚಿತ್ರಮಂದಿರ ಕಟ್ಟಲು ಸರ್ಕಾರದಿಂದ ಸಿಗುತ್ತಿದ್ದ ಧನಸಹಾಯ ರದ್ದಾಗಿದೆ. ಅಲ್ಲದೆ ಚಿತ್ರಮಂದಿರಗಳ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಬಿಗಿ ನಿಯಮಗಳನ್ನು ರೂಪಿಸಲಾಗಿದೆ. ಈ ವಿಷಯದಲ್ಲಿ ಸರ್ಕಾರ ತುಸು ಮನಸ್ಸು ಮಾಡಬೇಕಿದೆ ಎನ್ನುತ್ತಾರೆ ಕೋಟಿ ನಿರ್ಮಾಪಕ ರಾಮು.

    (ದಟ್ಸ್‍ಕನ್ನಡ ಸಿನಿ ವಾರ್ತೆ)

    Thursday, April 25, 2024, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X