3 ದಿನಕ್ಕೆ 'ಕಾಟೇರ' ಕಲೆಕ್ಷನ್ ಎಷ್ಟು ಕೋಟಿ?: ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸ್ಪಷ್ಟನೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ವಾರದ ದಿನಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಸಂಭ್ರಮಾಚರಣೆ ಮಾಡಿದೆ. ಸೋಮವಾರ, ಮಂಗಳವಾರ ಕೂಡ ಸಿನಿಮಾ ಗಳಿಕೆ ಚೆನ್ನಾಗಿದೆ. ಶುಕ್ರವಾರ ರಾತ್ರಿಯೇ ಶುರುವಾದ 'ಕಾಟೇರ'ನ ಆರ್ಭಟ ಇನ್ನು ಕಮ್ಮಿ ಆಗಿಲ್ಲ. ಸಿನಿಮಾ ಹೊರ ದೇಶಗಳಿಗೂ ಹೊರಟು ನಿಂತಿದೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೋಡಿಯಾಗಿ ಆರಾಧನಾ ರಾಮ್ ನಟಿಸಿದ್ದಾರೆ. 70ರ ದಶಕದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು ಎಲ್ಲೆಡೆ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಸಹಜವಾಗಿಯೇ ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ.

ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ತಮಿಳುನಾಡಿದ ಹೊಸೂರಿನ ಒಂದು ಥಿಯೇಟರ್ ಹಾಗೂ ಗೋವಾದಲ್ಲೂ ಕೆಲ ಚಿತ್ರಮಂದಿರಗಳಲ್ಲಿ 'ಕಾಟೇರ' ಸಿನಿಮಾ ಪ್ರದರ್ಶನವಾಗುತ್ತಿದೆ. ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ತಿದೆ. ಇನ್ನು ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ 58 ಕೋಟಿ 8 ಲಕ್ಷ ರೂ. ಗಳಿಕೆ ಕಂಡಿದೆ ಎನ್ನುವ ಚರ್ಚೆ ನಡೀತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಾದೊಂದು ಪೋಸ್ಟರ್‌ಗಳು ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅದೆಲ್ಲಾ ಸುಳ್ಳು ಎಂದಿದ್ದಾರೆ.
'ಕಾಟೇರ' ಸಕ್ಸಸ್ ಮೀಟ್ ಸಮಾರಂಭದಲ್ಲಿ ಆಗಮಿಸಿದ್ದ ನಿರ್ಮಾಪಕರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ರಾಕ್‌ಲೈನ್ ವೆಂಕಟೇಶ್, "ಫಸ್ಟ್ ಇದೆಲ್ಲಾ ಸುಳ್ಳು ಎಂದು ಹೇಳ್ತೀನಿ. ಫ್ರಾಂಕ್ ಆಗಿ ಹೇಳ್ತೀನಿ, ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ. ಈಗ 30 ಕೋಟಿ, 15 ಕೋಟಿ, 20 ಕೋಟಿ ಆಗಿದ್ಯಾ ಅನ್ನೋದು ನನಗೂ ಗೊತ್ತಿಲ್ಲ"

"ನಾನು ಯಾವಾಗಲೂ ನನ್ನ ಬ್ಯಾನರ್‌ನಲ್ಲಿ ಇಷ್ಟು ಬಜೆಟ್ ಆಯ್ತು, ಇಷ್ಟು ಕಲೆಕ್ಷನ್ ಆಯ್ತು ಅಂತ ನಾನು ಯಾವತ್ತೂ ಹೇಳ್ಕೊಂಡಿಲ್ಲ. ಎಲ್ಲಾ ಸಿನಿಮಾಗಳಿಗಿಂತ ಕಲೆಕ್ಷನ್ ಚೆನ್ನಾಗಿದೆ. ಪರಭಾಷಾ ಸಿನಿಮಾಗಳು ಬಿಡುಗಡೆ ಆಗಿದ್ದರೂ ಕೂಡ ಎಲ್ಲದ್ದಕ್ಕಿಂತ ಅದ್ಭುತ ಕಲೆಕ್ಷನ್ ಆಗ್ತಿದೆ. ಈ ಬಗ್ಗೆ ನಾನು ಪ್ರೇಕ್ಷಕರಿಗೆ, ಡಿ ಬಾಸ್ ಸೆಲೆಬ್ರೆಟಿಗಳಿಗೆ ಹಾಗೂ ಸಿನಿಮಾ ನೋಡುತ್ತಿರುವ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇನ್ನು ನೋಡಬೇಕು. ಯಾಕಂದರೆ ಇಂತಹ ಸಿನಿಮಾಗಳು ಬಂದಾಗ ನೋಡಿಬಿಡಬೇಕು. ಅದರಲ್ಲೂ ಚಿತ್ರಮಂದಿರದಲ್ಲೇ ನೋಡಬೇಕು ಎಂದು ಮನವಿ ಮಾಡ್ತೀನಿ. ಪೈರಸಿ ನೋಡುವುದರಿಂದ ಚಿತ್ರಕ್ಕೂ ಎಫೆಕ್ಟ್ ಆಗುತ್ತದೆ, ನಿಮಗೂ ಒಳ್ಳೆ ಅನುಭವ ಸಿಗಲ್ಲ" ಎಂದಿದ್ದಾರೆ.
ವರ್ಷದ ಕೊನೆಗೆ ಬಂದ 'ಕಾಟೇರ' ಸಿನಿಮಾ ಗೆಲುವಿನ ಓಟ ಹೊಸ ವರ್ಷದಲ್ಲೂ ಮುಂದುವರೆದಿದೆ. ರಿಷಬ್ ಶೆಟ್ಟಿ, ಡಾಲಿ ಧನಂಜಯ ಸೇರಿದಂತೆ ತಾರೆಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಶುಕ್ರವಾರದಿಂದಲೇ ದೂರದ ಅಮೆರಿಕಾದಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿಕಾಗೋ, ದಲ್ಲಾಸ್, ಲಾಸ್ ಎಂಜಲೀಸ್, ಹೂಸ್ಟನ್, ವಾಷಿಂಗ್ಟನ್ ಡಿಸಿ ಸೇರಿದಂತೆ ಹಲವೆಡೆ ಸಿನಿಮಾ ಪ್ರದರ್ಶನಕ್ಕೆ ಸಿದ್ಧವಾಗಿದೆ.
ಸೋಮವಾರ ಕೂಡ ಬುಕ್‌ಮೈ ಶೋನಲ್ಲಿ 'ಕಾಟೇರ' ಚಿತ್ರದ ಒಂದು ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿರೋದು ವಿಶೇಷ. ಎರಡ್ಮೂರು ವಾರಗಳಲ್ಲಿ ಚಿತ್ರವನ್ನು ತೆಲುಗು, ತಮಿಳಿಗೂ ಡಬ್ ಮಾಡಿ ರಿಲೀಸ್ ಮಾಡುವುದಾಗಿ ನಿರ್ಮಾಪಕ ರಾಲ್‌ಲೈನ್ ವೆಂಕಟೇಶ್ ಹೇಳಿದ್ದಾರೆ. 'ಕಾಟೇರ' ಸಕ್ಸಸ್ ಬೆನ್ನಲ್ಲೇ ದರ್ಶನ್, ತರುಣ್ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ದರ್ಶನ್ 'ಡೆವಿಲ್' ಸಿನಿಮಾ ಒಪ್ಪಿಕೊಂಡಿದ್ದಾರೆ. ತರುಣ್ ಮುಂದೇನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











