'ಉರಿಗೌಡ–ನಂಜೇಗೌಡ' ಟೈಟಲ್ ರಿಜಿಸ್ಟರ್ ಮಾಡಿಸಿದ ಮುನಿರತ್ನ: ಕೆಂಪಾಯ್ತು ಎಚ್‌ಡಿಕೆ ಕಣ್ಣು!
ಕಳೆದ ಕೆಲವು ದಿನಗಳಿಂದ 'ಉರಿಗೌಡ-ನಂಜೇಗೌಡ' ಈ ಎರಡು ಹೆಸರುಗಳು ಸಂಚಲನ ಸೃಷ್ಟಿಸುತ್ತಿವೆ. ಮಂಡ್ಯ, ಮೈಸೂರು ಭಾಗಗಳಲ್ಲಿ ಈ ಎರಡು ಹೆಸರುಗಳು ಹಲ್‌ಚಲ್ ಎಬ್ಬಿಸುತ್ತಿವೆ. ಇದಕ್ಕೆ ಬಲವಾದ ಕಾರಣವೂ ಇದೆ. ಒಕ್ಕಲಿಗರ ಸಮುದಾಯಕ್ಕೆ ಈ ಇಬ್ಬರು ವೀರರು ಟಿಪ್ಪು ಸುಲ್ತಾನ್ ಹತ್ಯೆಗೈದಿದ್ದರು ಎಂದು ಬಿಜೆಪಿ ಹೇಳುತ್ತಿದೆ. ಅದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಕಲ್ಪಿತ ಪಾತ್ರಗಳು ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ನಿರ್ಮಾಪಕ ಹಾಗೂ ಎಂಎಲ್‌ಎ ಮುನಿರತ್ನ ಇದೇ ಉರಿಗೌಡ ಹಾಗೂ ನಂಜೇಗೌಡ ಅವರ ಮೇಲೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಟೈಟಲ್ ಅನ್ನು ರಿಜಿಸ್ಟರ್ ಮಾಡಿದ್ದಾರೆ ಎಂದು ಸುದ್ದಿಯಾಗಿದೆ. ಇದು ರಾಜಕೀಯ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಮುನಿರತ್ನ ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ಎರಡು ಟೈಟಲ್‌ಗಳನ್ನು ರಿಜಿಸ್ಟರ್ ಮಾಡಿಸಲು ಅರ್ಜಿಯನ್ನು ಸಲ್ಲಿಸಿದ್ದಾರೆಂದು ವರದಿಯಾಗಿದೆ. 'ಉರಿಗೌಡ -ನಂಜೇಗೌಡ' ಇಲ್ಲವೇ ಅಥವಾ 'ನಂಜೇಗೌಡ-ಉರಿಗೌಡ' ಈ ಎರಡೂ ಟೈಟಲ್ ಅನ್ನು ನೋಂದಣಿ ಮಾಡಿಸಲು ಮುಂದಾಗಿದ್ದು, ಒಂದು ಟೈಟಲ್ ಇಟ್ಟು ಸಿನಿಮಾ ಮಾಡುತ್ತಾರೆಂಬ ಸುದ್ದಿ ಹಬ್ಬಿದೆ.
ಈ ಇಬ್ಬರು ವಿವಾದಿತ ವ್ಯಕ್ತಿಗಳ ಚರಿತ್ರೆಯನ್ನು ತೆರೆಮೇಲೆ ತರಲು ಮುನಿರತ್ನ ಮುಂದಾಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಉರಿಗೌಡ ಹಾಗೂ ನಂಜೇಗೌಡ ಮಂಡ್ಯದ ವೀರರು. ಟಿಪ್ಪು ಸುಲ್ತಾನ್‌ನನ್ನು ಇವರಿಬ್ಬರೇ ಕೊಂದವರು ಎಂದು ಒಂದು ಗುಂಪು ಹೇಳುತ್ತಿದೆ. ಅದೇ ಇನ್ನೊಂದು ಗುಂಪು ಇವರು ಇತಿಹಾಸದಲ್ಲೇ ಇಲ್ಲ. ಇಬ್ಬರು ಕಾಲ್ಪನಿಕ ಪಾತ್ರಗಳು ಎಂದು ಕೇಳುತ್ತಿದ್ದಾರೆ. ಹಾಗೇ ಮಾಜಿ ಮುಖ್ಯ ಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 11 ಟ್ವೀಟ್‌ಗಳನ್ನು ಮಾಡಿದ್ದಾರೆ. ಪ್ರಮುಖ ಟ್ವೀಟ್‌ಗಳು ಇಲ್ಲಿವೆ.
"ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ.ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ"
"ಈ ಮಹಾ ಷಡ್ಯಂತ್ರದ ಭಾಗವೇ ಉರಿಗೌಡ, ನಂಜೇಗೌಡ ಎಂಬ ಸುಳ್ಳುಪಾತ್ರಗಳ ಸೃಷ್ಟಿ. ಟಿಪ್ಪುವನ್ನು ಕೊಂದವರೆಂದು ಸೃಷ್ಟಿಸಲಾದ ಕಲ್ಪಿತ ಒಕ್ಕಲಿಗ ಹೆಸರುಗಳ ಮೂಲಕ ಒಕ್ಕಲಿಗ ಸಮುದಾಯವನ್ನು ಕಳಂಕದ ದಳ್ಳುರಿಗೆ ತಳ್ಳುವ, ಐತಿಹಾಸಿಕ ನಂಜಿನ ವಿಷವರ್ತುಲಕ್ಕೆ ನೂಕುವ ಹೇಯ ಕೃತ್ಯವನ್ನು ಬಿಜೆಪಿ ಮಾಡುತ್ತಿದೆ."
"ಕುಲಕ್ಕೆ, ಕುಲ ಗುರುವಿಗಾದ ಈ ಘೋರ ಅಪಮಾನದಿಂದ ಕುದಿಯುತ್ತಿರುವ ಒಕ್ಕಲಿಗ ಸಮಾಜವನ್ನು ಇನ್ನಷ್ಟು ಹೀನಾಯವಾಗಿ ಕಳಂಕದ ಕೂಪಕ್ಕೆ ತಳ್ಳಲು ಇದೇ ಬಿಜೆಪಿ ಸರಕಾರದ ಸಚಿವರೊಬ್ಬರು ಧೂರ್ತ ಪ್ರಯತ್ನ ನಡೆಸಿದ್ದಾರೆ."
"ಸಚಿವರು, ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಶ್ರೀ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್ ಮೂಲಕ ' ಉರಿಗೌಡ ನಂಜೇಗೌಡ ' ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ."
"ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ. ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳನ್ನೇ ಸಿನಿಮಾ ಮಾಡಿ ಒಕ್ಕಲಿಗರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಖಳನಾಯಕರನ್ನಾಗಿ ಚಿತ್ರಿಸುವುದೇ ಅವರ ದುರುದ್ದೇಶವಾಗಿದೆ. ಈ ದ್ರೋಹವನ್ನು ಒಕ್ಕಲಿಗರು ಸಹಿಸುವ ಪ್ರಶ್ನೆಯೇ ಇಲ್ಲ."
ಹೀಗೆ ಎಚ್‌ಡಿ ಕುಮಾರಸ್ವಾಮಿ ಒಂದಾದ ಮೇಲೊಂದರಂತೆ ಬರೋಬ್ಬರಿ ಹನ್ನೊಂದು ಟ್ವೀಟ್‌ಗಳನ್ನು ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆ ಸಮಿಸುತ್ತಿರುವಾಗಲೇ 'ಉರಿಗೌಡ-ನಂಜೇಗೌಡ' ವಿವಾದ ತಾರಕ್ಕೇರಿದೆ. ಇದು ಇನ್ನು ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದುಕೊಳ್ಳುತ್ತೆ ಅನ್ನೋದು ಕುತೂಹಲ ಸೃಷ್ಟಿಸಿದೆ.


Click it and Unblock the Notifications











