"ಜೈಲಿಗೆ ಹೋಗಿ ಬಂದವರು, ಎಚ್ಚರಿಕೆ ಕೊಡುವವರಿಗೆ ನಾನು ಹೆದರುವುದಿಲ್ಲ"; ಉಮಾಪತಿ
ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ಭಿನ್ನಾಭಿಪ್ರಾಯಗಳು ಗೊತ್ತೇಯಿದೆ. ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದವರು ಬಳಿಕ ದೂರಾಗಿದ್ದರು. ಬಳಿಕ ಒಬ್ಬರ ವಿರುದ್ಧ ಮತ್ತೊಬ್ಬರು ವಾಗ್ದಾಳಿ ನಡೆಸುತ್ತಾ ಬಂದಿದ್ದರು. ಇದೀಗ ಮತ್ತೊಮ್ಮೆ ಪರೋಕ್ಷವಾಗಿ ದರ್ಶನ್‌ಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವೇದಿಕೆಯಲ್ಲಿ ಮಾತನಾಡಿದ್ದಾರೆ. "ನಾನು ಸಾಕಷ್ಟು ತಂಟೆ ತಕರಾರು, ಕಷ್ಟ ಎದುರಿಸಿ ಇವತ್ತು ಈ ವೇದಿಕೆ ಮೇಲೆ ನಿಂತಿದ್ದೀನಿ. ದೊಡ್ಡವರನ್ನು ಎದುರಾಕಿಕೊಳ್ತಿದ್ದೀಯಾ ಎಂದು ಕೆಲವರು ನಂಗೆ ಹೇಳುತ್ತಾರೆ. ನಾನು ಎದುರಾಕಿಕೊಳ್ಳಲ್ಲ, ಅವರೇ ನನ್ನನ್ನು ಎದುರಾಕಿಕೊಳ್ಳುತ್ತಿದ್ದಾರೆ" ಎಂದು ಉಮಾಪತಿ ಮಾತು ಆರಂಭಿಸಿದ್ದಾರೆ.

ಬಳಿಕ ಮಾತನಾಡಿ "ನಾವು ಗುರು ಹಿರಿಯರು, ತಂದೆ-ತಾಯಿ, ಬಂಧು-ಮಿತ್ರರು, ಒಳ್ಳೆ ಕೆಲಸ ಮಾಡುವವರಿಗೆ ನಾವು ಭಯ ಬೀಳಬೇಕು, ಅದು ಬಿಟ್ಟು ನಾನು ಯಾರಿಗೂ ಭಯ ಬೀಳಲ್ಲ. ಆ ಶಕ್ತಿ ಯಾರಿಗೂ ಇಲ್ಲ. ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡುತ್ತಿದ್ದೀನಿ, ಸಾಯುವರೆಗೂ ಇನ್ನೊಬ್ಬರಿಗೆ ಮಾದರಿ ಆಗಿ ಇರ್ತೀನಿ. ಇನ್ನೊಬ್ಬರಿಗೆ ಎಚ್ಚರಿಕೆ ಆಗುವಂತೆ ಇರಲ್ಲ. ಜೀವನದಲ್ಲಿ ಎರಡು ತರಹದ ಜನ ಇರ್ತಾರೆ. ಒಬ್ಬರು ಎಲ್ಲರಿಗೂ ಮಾದರಿ ಆಗುವವರು. ಇನ್ನೊಬ್ಬರು ಜೈಲಿಗೆ ಹೋಗಿ ಬಂದವರು, ತೊಂದರೆ ಕೊಟ್ಟು ನಶಿಸಿ ಹೋಗುವವರು, ಎಚ್ಚರಿಕೆ ಕೊಡುವಂತಹವರು. ನಾನು ಯಾರಿಗೂ ಭಯ ಪಡಲ್ಲ" ಎಂದು ಉಮಪತಿ ಪರೋಕ್ಷವಾಗಿ ದರ್ಶನ್‌ಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಯಾರೂ ಅಪ್ಲಿಕೇಶನ್ ಹಾಕಿಕೊಂಡು ಹುಟ್ಟಿಲ್ಲ, ಕಷ್ಟಗಳು ಬರುತ್ತವೆ. ಮನೆ ಎಂದಮೇಲೆ ಕಸ, ಜೀವನ ಎಂದಮೇಲೆ ಕಷ್ಟ ಇರುತ್ತದೆ. ಕಸ ಇದ್ದರೆ ಗುಡಿಸಿ ಹೊರ ಹಾಕಬೇಕು, ಕಷ್ಟ ಇದ್ದರೆ ಜಯಿಸಿ ಬದುಕಬೇಕು ಎಂದು ಉಮಾಪತಿ ಹೇಳಿದ್ದಾರೆ. ಫೇಕ್ ಲೋನ್ ಪ್ರಕರಣದ ವೇಳೆ ದರ್ಶನ್ ಹಾಗೂ ಉಮಾಪತಿ ನಡುವೆ ಬಿರುಕು ಮೂಡಿತ್ತು. ಬಳಿಕ ಇಬ್ಬರೂ ದೂರಾಗಿದ್ದರು.
'ಅಯ್ಯೋ ತಗಡು, ಗುಮ್ಮಿಸ್ಕೊತ್ತೀಯ' ಎಂದು ದರ್ಶನ್ ಪರೋಕ್ಷವಾಗಿ ಉಮಾಪತಿಗೆ ಟಾಂಗ್ ಕೊಟ್ಟಿದ್ದರು. ಈ ವಿವಾರ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ದರ್ಶನ್ ಹೇಳಿಕೆಗೆ ಉಮಾಪತಿ ಕೂಡ ಗುದ್ದು ಕೊಟ್ಟಿದ್ದರು. ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರುವಂತಾಯಿತು. ಆಗ ಕೂಡ ಸಾಕಷ್ಟು ಸಂದರ್ಶನಗಳಲ್ಲಿ ಉಮಾಪತಿ ಮಾತನಾಡಿ ದರ್ಶನ್‌ಗೆ ತಿರುಗೇಟು ನೀಡಿದ್ದರು.
ದರ್ಶನ್ ನಟನೆಯ 'ರಾಬರ್ಟ್' ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಮತ್ತೆ ಸಿನಿಮಾಗಳನ್ನು ಮಾಡಲು ಮುಂದಾಗಿದ್ದರು. ಇಬ್ಬರೂ ಆತ್ಮೀಯ ಸ್ನೇಹಿತರಾಗಿಬಿಟ್ಟಿದ್ದರು. ಅದೇ ಕಾಂಬಿನೇಷನ್‌ನಲ್ಲಿ 'ವೀರಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಲು ಸ್ಕ್ರಿಪ್ಟ್ ಪೂಜೆ ಸಹ ನಡೆದಿತ್ತು. ಅಷ್ಟರಲ್ಲೇ ಇಬ್ಬರೂ ದೂರಾಗುವಂತಾಗಿತ್ತು.
ಫೇಕ್ ಲೋನ್ ಪ್ರಕರಣದ ಬಳಿಕ ದರ್ಶನ್ ಹಾಗೂ ಉಮಾಪತಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಉಮಾಪತಿ ಶ್ರೀನಿವಾಸ್ ಬೇರೆ ಬೇರೆ ಸಿನಿಮಾಗಳನ್ನು ಮಾಡಲು ಮುಂದಾಗಿದ್ದರು. ದರ್ಶನ್ ಕೂಡ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. 'ಕಾಟೇರ' ಸಿನಿಮಾ ಸಕ್ಸಸ್ ಸಂಭ್ರಮಾಚರಣೆಯಲ್ಲಿ ಚಿತ್ರದ ಕಥೆ ಹಾಗೂ ಟೈಟಲ್ ಬಗ್ಗೆ ಪ್ರಸ್ತಾಪಿಸಿ ದರ್ಶನ್ ಪರೋಕ್ಷವಾಗಿ ಉಮಾಪತಿಗೆ ಟಾಂಗ್ ಕೊಟ್ಟಿದ್ದರು. ಇದಕ್ಕೆ ಉಮಾಪತಿ ಕೂಡ ತಕ್ಕ ಉತ್ತರ ಕೊಟ್ಟಿದ್ದರು. ಯಾರೇ ಆಗಲಿ ಬಂದ ದಾರಿ ಮರೆಯಬಾರದು ಎಂದು ಕಿವಿ ಹಿಂಡಿದ್ದರು.


Click it and Unblock the Notifications











