"ಯಾರೋ ತಗಡು ಅಂದವನಿಗೆ ಈಗ ಗೊತ್ತಾಗಿದೆ ಚಿನ್ನದ ತಗಡಿನ ಬಗ್ಗೆ" : ಉಮಾಪತಿ ಪೋಸ್ಟ್ ವೈರಲ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದೊಂದು ವಾರದಿಂದ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದು ಕ್ಷಣಕ್ಕೊಂದು ಸುದ್ದಿ ಹೊರಬರುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಜನರು ದರ್ಶನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇತ್ತ ನಟನ ವಿರೋಧಿಗಳು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೀಗ ಉಮಾಪತಿ ಶ್ರೀನಿವಾಸ್ ಗೌಡ ಕೂಡ ಒಬ್ಬರು.
ದರ್ಶನ್‌ಗಾಗಿ 'ರಾಬರ್ಟ್' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ . ಒಂದು ಕಾಲದಲ್ಲಿ ಅಣ್ಣ ತಮ್ಮಂದಿರಿಗಿಂತ ಹೆಚ್ಚಾಗಿದ್ದ ಇವರು ಕಿತ್ತಾಡಿಕೊಂಡಿದ್ದರು. ಪರಸ್ಪರ ಕಚ್ಚಾಡಿಕೊಂಡು ದರ್ಶನ್ ಹಾಗೂ ಉಮಾಪತಿ ಬೇರೆ ಬೇರೆಯಾಗಿದ್ದರು. ಇತ್ತೀಚೆಗೆ 'ಕಾಟೇರ' ಸಿನಿಮಾ ವೇಳೆನೂ ಉಮಾಪತಿ ವಿರುದ್ಧ ದರ್ಶನ್ ತಿರುಗಿಬಿದ್ದಿದ್ದರು.

'ಕಾಟೇರ' ಸಕ್ಸಸ್ ವೇಳೆ ಉಮಾಪತಿ ಶ್ರೀನಿವಾಸ್ ಗೌಡಗೆ "ಲೇ ತಗಡೇ" ಎಂಬ ಪದವನ್ನು ಬಳಸಿದ್ದರು. ಆ ಬಳಿಕ ಆಗ ಉಮಾಪತಿ ಕೂಡ ದರ್ಶನ್ ವಿರುದ್ಧ ತಿರುಗಿಬಿದ್ದಿದ್ದರು. ತಮ್ಮ ಮಾತುಗಳಿಂದಲೇ ದರ್ಶನ್‌ಗೆ ತಿವಿದಿದ್ದರು. ಅದೇ ಮಾತುಗಳು ದರ್ಶನ್ ಬಂಧನದ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಆ ಎಲ್ಲಾ ಪೋಸ್ಟ್‌ಗಳನ್ನು ಉಮಾಪತಿ ಶ್ರೀನಿವಾಸ್ ಗೌಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಿರ್ಮಾಪಕ ಉಮಾಪತಿ ಗೌಡ ಡೈಲಾಗ್ ಕಿಂಗ್ ಅನ್ನೋದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ದರ್ಶನ್ "ತಗಡು" ಅನ್ನೋ ಪದವನ್ನು ಬಳಸಿದ್ದರೂ, ಅಷ್ಟೇ ತಾಳ್ಮೆಯಿಂದ ನಗು ನಗುತ್ತಲೇ ದರ್ಶನ್ ತಿರುಗೇಟು ಕೊಟ್ಟಿದ್ದರು. ಆ ವೇಳೆನೂ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಹೀಗಾಗಿ ತಾವೇ ಹೇಳಿದ್ದ ಮಾತೊಂದನ್ನು ನೆಟ್ಟಿಗರು ಇಂದು ಟ್ರೋಲ್ ಮಾಡುತ್ತಿದ್ದಾರೆ.
ದರ್ಶನ್ ನಿರ್ಮಾಪಕ ಉಮಾಪತಿಗೆ ತಡಗು ಅನ್ನೋ ಪದ ಬಳಸಿದಾಗ, ಮುಂದೊಂದು ದಿನ ಚಿನ್ನದ ತಗಡಾಗುತ್ತೀನಿ ಎಂದು ಹೇಳಿದ್ದರು. ಅದನ್ನೇ ಈಗ ಟ್ರೋಲಿಗರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇದೇ "ಯಾರೋ ತಗಡು ಅಂದವನಿಗೆ ಈಗ ಗೊತ್ತಾಗಿದೆ ಚಿನ್ನದ ತಗಡಿನ ಬಗ್ಗೆ" ಅನ್ನೋ ಪೋಸ್ಟ್ ಅನ್ನು ನಿರ್ಮಾಪಕ ಉಮಾಪತಿ ಶೇರ್ ಮಾಡಿದ್ದಾರೆ.

ಹಾಗೇ "ವಿಷ್ಣುವಿನ ತಾಳೆ ಇರಲಿ.. ಆದರೆ, ನರಸಿಂಹನ ಕೋಪವನ್ನು ಯಾವತ್ತೂ ಮರೆಯಬೇಡ", " "ನಾನು ಅವತ್ತು ಯಾಕೆ ರಿಯಾಕ್ಟ್ ಆಗಲಿಲ್ಲ ಅಂತ ಈಗ ಅರ್ಥ ಆಯ್ತಾ? ಉಮ್ಮಿ ಅಣ್ಣ ಮಹಾನ್ ಕಲಾವಿದ", "ಫಿಲ್ಮ್ ಹೀರೊಗೋಸ್ಕರ ತನ್ನ ರಿಯಲ್ ಲೈಫ್ ಹೀರೊನನ್ನೇ ಕಳೆದುಕೊಂಡು ಬಿಟ್ಟಲ್ಲೋ ತಮ್ಮ.." ಅಂತ ತಂದೆ ಕಳೆದುಕೊಂಡ ಆರೋಪಿಗೆ ಹೇಳಿರುವ ಪೋಸ್ಟ್ ಅನ್ನು ನಿರ್ಮಾಪಕ ಉಮಾಪತಿ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೇ ವೇಳೆ ಉಮಾಪತಿ ಈ ಹಿಂದೆ ನೀಡಿದ್ದ ಪ್ರತಿಕ್ರಿಯೆಯ ತುಣುಕನ್ನು ಶೇರ್ ಮಾಡಿಕೊಂಡಿದ್ದಾರೆ. "ನಾನು ಒಬ್ಬನೇ ಇದ್ದೀನಿ ಅನ್ನೋ ಮಾತ್ರಕ್ಕೆ ನನಗೆ ಯಾರು ಬಲ ಇಲ್ಲ ಅಂತಲ್ಲ. ನಾನೊಂದಿಷ್ಟು ಜನರನ್ನು ಸಂಪಾದನೆ ಮಾಡಿಟ್ಟುಕೊಂಡಿದ್ದೀನಿ. ಅವರು ಅಲ್ಲಿ ಇಲ್ಲಾ ಅಂದರೂ ಫೋನ್ ಕಾಲ್‌ನಲ್ಲಿ ಕೆಲಸ ಮಾಡುತ್ತಾರೆ." ಎಂದು ತಾವೇ ಹೇಳಿದ್ದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.
ಇದರೊಂದಿಗೆ "ತಂದೆ ಅನ್ನೋನು ಸ್ಟ್ರಾಂಗೋ ವೀಕೋ ಬದುಕಿರಬೇಕು. ಹಾಗಿದ್ದಾಗಲೇ ಜನ ನಮಗೆ ಗೌರವಕೊಡುತ್ತಾರೆ. ಇಲ್ಲಾ ಅಂದರೆ, ಆಳಿಗೊಂದೊಂದು ಕಲ್ಲು ಅಂದಂಗೆ, ಆಳಿಗೆ ಒಂದೊಂದು ಮಾತು. ಇವನು ಹೇಂಗೋ ಬದುಕುತ್ತಾನೆ. ಅಪ್ಪ ಮಾಡಿದ ಆಸ್ತಿಯನ್ನೆಲ್ಲಾ ಉಡಾಯಿಸಿ ಬಿಡುತ್ತಾನೆ. " ಅಂದಿದ್ದನ್ನೂ ಶೇರ್ ಮಾಡಿದ್ದಾರೆ. ಹಾಗೇ "ಸಮಯ ಸಂದರ್ಭ ಎಲ್ಲದಕ್ಕೂ ಉತ್ತರ ಕೊಡುತ್ತೆ. ಹಿಂಗೇ ಜೀವನ ಇರುವುದಿಲ್ಲ" ಎಂದಿದ್ದು, "ನೀವು ಹೇಳಿದ್ರಲ್ಲ ನನ್ನ ದುಡ್ಡಿನಲ್ಲಿ ಮಾಡಿದ್ದು ಸ್ವಾಮಿ. ಏನು ಕಾನೂನು ಇದೆಯಾ? ನನಗೆ ಗುಂಡು ಇಟ್ಟುಬಿಡುತ್ತಾರಾ? ಇಡಲಿ ತಾಕತ್ತಿದ್ದರೆ ನೋಡೋಣ. ಅವತ್ತು ಉಮಾಪತಿ ಏನು ಅಂತ ಗೊತ್ತಾಗುತ್ತೆ. ಉಮಾಪತಿ ಸಾಮಾನ್ಯ ವ್ಯಕ್ತಿಯಲ್ಲ. ಒಂದು ಸಮುದಾಯದ ಲೀಡರ್." ಎಂದು ಖಡಕ್ ಉತ್ತರ ಕೊಟ್ಟಿದ್ದರು. ಅದೆಲ್ಲವನ್ನೂ ಇನ್‌ಸ್ಟಾಗ್ರಾಂ ಸ್ಟೋರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.


Click it and Unblock the Notifications











