10 ವರ್ಷಗಳಿಂದ ತೆರಿಗೆ ಕಟ್ಟಿಲ್ಲ; ಜಾಲಹಳ್ಳಿ ರಾಕ್‌ಲೈನ್ ಮಾಲ್‌ಗೆ ಬಿತ್ತು ಬೀಗ
ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ರಾಕ್‌ಲೈನ್ ವೆಂಕಟೇಶ್ ಒಡೆತನದ ಲಾಕ್‌ಲೈನ್ ಮಾಲ್‌ಗೆ ಬೀಗ ಬಿದ್ದಿದೆ. ಇಂದು(ಫೆಬ್ರವರಿ 14) ಮುಂಜಾನೆಯೇ ಬಿಬಿಎಂಪಿ ಅಧಿಕಾರಿಗಳಿಂದ ದಾಳಿ ನಡೆಸಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಮಾಲ್ ಸೀಜ್ ಮಾಡಲಾಗಿದೆ.
ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್ ಸಮ್ಮಖದಲ್ಲಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ. 2011 ರಿಂದ 2022-23 ರವರೆಗೆ ಮಾಲ್ ಆಡಳಿತ ಮಂಡಳಿ ತೆರಿಗೆ ಬಾಕಿ ಉಳಿಸಿಕೊಂಡಿದೆ. 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. ತೆರಿಗೆ ಪಾವತಿ ಮಾಡುವಂತೆ ಡಿಮಾಂಡ್ ನೋಟೀಸ್ ನೀಡಿದ್ದರೂ ತೆರಿಗೆ ಪಾವತಿಸದ ಕಾರಣ ಕ್ರಮ ಕೈಗೊಳ್ಳಲಾಗಿದೆ.

ದಾಸರಹಳ್ಳಿ ಜಂಟಿ ಆಯುಕ್ತ ಬಾಲಶೇಖರ್ ಮಾತನಾಡಿ "ಅರ್ಧ ತೆರಿಗೆಯಾದ್ರೂ ಮಾಲ್ ಆಡಳಿತ ಮಂಡಳಿ ಪಾವತಿಸಬೇಕು. ಅಲ್ಲಿಯವರೆಗೂ ಮಾಲ್ ತೆರೆಯುವಂತಿಲ್ಲ. ಈ ಹಿಂದೆ ಈ ಕೇಸ್ ಕೋರ್ಟ್‌ನಲ್ಲಿತ್ತು. ಒಂದು ವರ್ಷದ ಹಿಂದೆ ಕೇಸ್ ಇತ್ಯರ್ಥವಾಗಿದೆ. ಆದರೂ ಸಹ ಇನ್ನು ತೆರಿಗೆ ಪಾವತಿ ಮಾಡಿಲ್ಲ. ಇದೇ ಕಾರಣಕ್ಕೆ ಇವತ್ತು ನಾವು ಮಾಲ್‌ಗೆ ಬೀಗ ಹಾಕಿದ್ದೇವೆ. ಬೀಗ ಹಾಕಲು ಅನೇಕರು ವಿರೋಧ ಮಾಡಿದ್ರು. ಆದರೂ ನಮ್ಮ ಕರ್ತವ್ಯ ನಾವು ನಿರ್ವಹಿಸಿದ್ದೇವೆ" ಎಂದಿದ್ದಾರೆ.
ಇನ್ನು ರಾಕ್‌ಲೈನ್ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿರುವ ಬಗ್ಗೆ ಮಾಲ್ ಮ್ಯಾನೇಜರ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ. "ನಮಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ನಿನ್ನೆ ರಾತ್ರಿ ನೋಟಿಸ್ ಕೊಡಲು ಬಂದ್ರು. ನಾವು ರಾಕ್‌ಲೈನ್ ಸರ್ ಬರ್ತಾರೆ ಇರಿ. ಅವರೇ ನೋಟಿಸ್ ಕಾಪಿ ತೆಗೆದುಕೊಳ್ತಾರೆ ಎಂದು ಹೇಳಿದ್ದೆವು. ಆದರೂ ಕಾಯಲಿಲ್ಲ, ಇವತ್ತು ಬೆಳಗ್ಗೆ ಬಂದು ಮಾಲ್‌ಗೆ ಏಕಾಏಕಿ ಬೀಗ ಹಾಕಿದ್ದಾರೆ. ನಮಗೆ ಕೋರ್ಟ್‌ನಿಂದ ಹಣ ಡಿಪಾಸಿಟ್ ಮಾಡಲು ಹೇಳಿದ್ರು ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.
3 ವರ್ಷಗಳ ಹಿಂದೆ ರಾಕ್‌ಲೈನ್ ವೆಂಕಟೇಶ್ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಆರ್ ರಮೇಶ್ ತೆರಿಗೆ ವಂಚನೆ ಆರೋಪ ಮಾಡಿದ್ದರು. ಇದಕ್ಕೆ ಒಂದಷ್ಟು ದಾಖಲೆಗಳನ್ನು ನೀಡಿದ್ದರು. ಬಿಬಿಎಂಪಿಗೆ ರಾಕ್‌ಲೈನ್ ವೆಂಕಟೇಶ್ ಅಂದಾಜು 8.50 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ ಎನ್ನುವ ಗುರುತರ ಆರೋಪ ಮಾಡಿದ್ದರು.
ಎಸ್‌ಇಎಸ್ ಪದ್ಧತಿ ಜಾರಿಗೆ ಬಂದ ಬಳಿಕ 2013ರವರೆಗೆ 2.75 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಕೋಟಿವರೆಗೆ ಇತ್ತು. ಬಿಬಿಎಂಪಿ ಇದಕ್ಕೆ ನೋಟಿಸ್ ನೀಡಿತ್ತು. ಬಾಕಿ ಉಳಿಸಿದ್ದ ಹಾಗೂ ದಂಡ, ಬಡ್ಡಿ ಸೇರಿ 5 ಕೋಟಿ ರೂ. ಕಟ್ಟಬೇಕಿತ್ತು. ಆದರೆ 2013ರಲ್ಲಿ ಧಿಡೀರನೆ ರಾಕ್‌ಲೈನ್ ಮಾಲ್‌ನ ಪಿಐಡಿ ಸಂಖ್ಯೆಯೇ ಬದಲಿಸಿದ್ದರು. ಎಸ್‌ಇಎಸ್ ಪದ್ಧತಿಯಲ್ಲಿ ತಮ್ಮ ಆಸ್ತಿಯನ್ನು ಕೇವಲ 48,500 ಚದರ ವಿಸ್ತೀರ್ಣ ಇರುವುದಾಗಿ ಘೋಷಿಸಿಕೊಂಡಿದ್ದರು.
ನಾವು ನೀಡಿದ ದೂರಿನ ಆಧಾರದ ಮೇಲೆ ಬಿಬಿಎಂಪಿ ಅಧಿಕಾರಿಗಳು ಅಳತೆ ಮಾಡಿದ ಸಂದರ್ಭದಲ್ಲಿ ರಾಕ್‌ಲೈನ್ ಮಾಲ್ ಆಸ್ತಿ ಬರೋಬ್ಬರಿ 1,22,743 ಚದರ ಅಡಿ ಇದೆಯೆಂದು ಗೊತ್ತಾಗಿತ್ತು. ಅಂದರೆ ಸುಮಾರು 73000 ಚದರ ಅಡಿಯ ಕಟ್ಟಡವನ್ನು ದಾಖಲೆಗೆ ತರದೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ರಮೇಶ್ ದೂರಿದ್ದರು.
ಪಾಲಿಕೆ ನೀಡಿದ್ದ ನೋಟಿಸ್ ಪ್ರಶ್ನಿಸಿ ರಾಕ್‌ಲೈನ್ ವೆಂಕಟೇಶ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಆದರೆ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಹಾಗಾಗಿ ಈಗ ತೆರಿಗೆ ಬಾಕಿ ಇಟ್ಟುಕೊಂಡಿರುವ ಕಾರಣಕ್ಕೆ ಮಾಲ್‌ಗೆ ಬೀಗ ಬಿದ್ದಿದೆ.


Click it and Unblock the Notifications











