»   » ಸುದೀಪ್, ರಮೇಶ್, ಗಣೇಶ್ ಗೆ ನಿರ್ಬಂಧ ಸರಿಯೇ?

ಸುದೀಪ್, ರಮೇಶ್, ಗಣೇಶ್ ಗೆ ನಿರ್ಬಂಧ ಸರಿಯೇ?

By: ಉದಯರವಿ
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಹೊಸದೊಂದು ವಿವಾದ ತಲೆಯೆತ್ತಿದೆ. ಇಷ್ಟು ದಿನ ಡಬ್ಬಿಂಗ್ ಚಿತ್ರಗಳು ಬೇಕೆ ಬೇಡವೆ ಎಂಬ ಬಗ್ಗೆ ಸಾಕಷ್ಟು ಚರ್ಚೆ, ವಾದ ವಿವಾದಗಳು ನಡೆದಿವೆ. ಆದರೆ ಫಲಿತಾಂಶ ಮಾತ್ರ ತೌಡು ಕುಟ್ಟಿದಂತಾಯಿತು.

ಇದೀಗ ಅಂತಹದ್ದೇ ಒಂದು ಚರ್ಚಾಸ್ಪದ ವಿಷಯ ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿದೆ. ಕಿರುತೆರೆಯಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿರುವ ಸುದೀಪ್ (ಬಿಗ್ ಬಾಸ್ 2), ರಮೇಶ್ ಅರವಿಂದ್ (ವೀಕೆಂಡ್ ವಿತ್ ರಮೇಶ್) ಹಾಗೂ ಗಣೇಶ್ (ಸೂಪರ್ ಮಿನಿಟ್) ಚಿತ್ರಗಳಿಗೆ ನಿಷೇಧ ಹೇರಬೇಕೆಂಬ ನಿರ್ಧಾರ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ ಈ ಬಗ್ಗೆ ನಿರ್ಮಾಪಕರು ಚರ್ಚಿಸಿದ್ದಾರೆ. ಸುದೀಪ್, ರಮೇಶ್ ಅರವಿಂದ್ ಹಾಗೂ ಗಣೇಶ್ ಚಿತ್ರಗಳನ್ನು ನಿರ್ಬಂಧಿಸುವ ಮಾತುಗಳನ್ನು ಆಡಿದ್ದಾರೆ. ಇದರಿಂದ ನಿರ್ಮಾಪಕರು ಮತ್ತು ಕಲಾವಿದರ ನಡುವೆ ಅಂತರ ಮತ್ತಷ್ಟು ಹೆಚ್ಚಾಗುವ ಅಪಾಯದ ವಾತಾವರಣ ಸೃಷ್ಟಿಯಾಗಿದೆ.

ನಿರ್ಮಾಪಕರ ವಾದ ಏನೆಂದರೆ?

ಈ ಹೀರೋಗಳು ಕಿರುತೆರೆಯಲ್ಲಿ ಸಖತ್ ಬಿಜಿಯಾಗಿರುವ ಕಾರಣ ಸಿನಿಮಾಗಳಿಂದ ದೂರ ಉಳಿಯುವಂತಾಗಿದೆ. ಇದರಿಂದ ನಿರ್ಮಾಪಕರು ಅವರ ಕಾಲ್ ಶೀಟ್ ಗಾಗಿ ಕಾಯುತ್ತಾ ಕೂರಲು ಆಗುವುದಿಲ್ಲ. ಚಿತ್ರೋದ್ಯಮದ ಏಳಿಗೆಗೂ ಇದರಿಂದ ಹೊಡೆತ ಬೀಳುತ್ತಿದೆ ಎಂಬ ವಾದಗಳನ್ನು ಮುಂದಿಟ್ಟಿದ್ದಾರೆ.

ನಿರ್ಬಂಧ ಒಂದೇ ದಾರಿಯೇ?

ಇದಕ್ಕೆಲ್ಲಾ ಒಂದೇ ಒಂದು ಪರಿಹಾರ ಎಂದರೆ ಕಿರುತೆರೆಯಲ್ಲಿ ಬಿಜಿಯಾಗಿರುವ ಹೀರೋಗಳ ಚಿತ್ರಗಳನ್ನು ನಿರ್ಬಂಧಿಸಬೇಕು ಎಂಬುದು. ಏಕಾಏಕಿ ಅವರ ಚಿತ್ರಗಳನ್ನು ನಿರ್ಬಂಧಿಸದೆ ಸುದೀಪ್, ಗಣೇಶ್ ಹಾಗೂ ರಮೇಶ್ ಅರವಿಂದ್ ಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರುವುದಾಗಿ ನಿರ್ಮಾಪಕರು ಹೇಳಿದ್ದಾರೆ.

ಕಲಾವಿದರಿಗೆ ಅಷ್ಟೂ ಸ್ವಾತಂತ್ರ್ಯ ಇಲ್ಲವೇ?

ಕಡೆಗೂ ಉಳಿಯುವ ಪ್ರಶ್ನೆ ಎಂದರೆ ಕಲಾವಿದರಿಗೆ ಅಷ್ಟೂ ಸ್ವಾತಂತ್ರ್ಯ ಇಲ್ಲವೇ? ಅವರ ಚಿತ್ರಗಳನ್ನು ನಿರ್ಬಂಧಿಸುವುದರಿಂದ ಯಾರಿಗೆ ನಷ್ಟ? ಇಷ್ಟಕ್ಕೂ ಸುದೀಪ್ ಹಾಗೂ ರಮೇಶ್ ಅರವಿಂದ್ ಅವರ ಮಾರುಕಟ್ಟೆ ಕೇವಲ ಸ್ಯಾಂಡಲ್ ವುಡ್ ಗಷ್ಟೇ ಸೀಮಿತವಾಗಿಲ್ಲ ಅಲ್ಲವೇ?

ಕಲಾವಿದರಿಗೆ ಇನ್ನಷ್ಟು ಲಾಭವಾಗಲೂ ಬಹುದು?

ಹಾಗಿದ್ದಾಗ ಬೇರೆ ಚಿತ್ರೋದ್ಯಮಗಳೂ ಅವರ ಮೇಲೆ ನಿರ್ಬಂಧ ಹೇರಬೇಕಲ್ಲವೇ? ಒಂದು ವೇಳೆ ನಿರ್ಬಂಧವೂ ಓಕೆ ಆಯ್ತು ಎಂದುಕೊಳ್ಳೋಣ ಆಗ ಇವರೆಲ್ಲಾ ಕಿರುತೆರೆಯಲ್ಲಿ ಇನ್ನಷ್ಟು ಬಿಜಿಯಾಗಿ, ಒಂದೆರಡು ಗಂಟೆಗಳ ಕಾಲ ಯಾವುದೋ ಒಂದು ಕಾರ್ಯಕ್ರಮ ನಿರೂಪಿಸುತ್ತಾ ಹಾಯಾಗಿ ಇರಬಹುದಲ್ಲವೇ?

ಇನ್ನು ನಿರ್ಮಾಪಕರು ಯಾರಿಗೆ ಮಣೆ ಹಾಕುತ್ತಾರೆ?

ರೀಮೇಕ್ ಸಮಸ್ಯೆ ಇರಲ್ಲ, ಚಿತ್ರಮಂದಿರಗಳ ಪ್ರಾಬ್ಲಂ ಇರಲ್ಲ, ಚಿತ್ರ ಸೋಲುತ್ತೋ ಗೆಲ್ಲುತ್ತೋ ಎಂಬ ತಾಪತ್ರಯ ಇರಲ್ಲ. ಇನ್ನು ನಿರ್ಮಾಪಕರು ಹೊಸಬರಿಗೆ ಮಣೆ ಹಾಕಿ ಅವರನ್ನು ಮೇಲಕ್ಕೆ ತರುವಷ್ಟರಲ್ಲಿ ಅವರ ಜೇಬು ಖಾಲಿಯಾದರೂ ಆಗಿರಬಹುದು.

ಇದೊಂದು ಅರ್ಥವಿಲ್ಲದ ವಾದ ಅನ್ನಿಸುವುದಿಲ್ಲವೇ?

ಹೊಸಬರು ಕಿರುತೆರೆ ಕಾರ್ಯಕ್ರಮಗಳನ್ನು ನಡೆಸಿಕೊಡುವುದಿಲ್ಲ ಎಂಬುದು ಏನು ಗ್ಯಾರಂಟಿ. ಆಗ ಅವರ ಮೇಲೆಯೂ ನಿಷೇಧ ಹೇರಬೇಕಾಗುತ್ತದೆ. ಕಡೆಗೆ ಇದೊಂದು ಅರ್ಥವಿಲ್ಲದ ಸಂಪ್ರದಾಯಕ್ಕೆ ನಾಂದಿಹಾಡುತ್ತದೆ ಅಲ್ಲವೇ?

ನಿರ್ಮಾಪಕರ ವಾದಕ್ಕೆ ಅರ್ಥ ಇದೆ ಅಂತೀರಾ?

ಇಷ್ಟಕ್ಕೂ ಕಿರುತೆರೆ ಕಾರ್ಯಕ್ರಮಗಳನ್ನು ಒಂದು ಸಿನಿಮಾಗೆ ಹೋಲಿಸುವುದಾದರೂ ಹೇಗೆ? ಅದೇ ಬೇರೆ ಇದೇ ಬೇರೆ ಅಲ್ಲವೇ? ನಿರ್ಮಾಪಕರ ವಾದಕ್ಕೆ ಅರ್ಥ ಇದೆ ಅಂತೀರಾ? ಅಥವಾ ಇದೊಂದು ವಿತಂಡ ವಾದ ಅಂತೀರಾ?

English summary
Sandalwood producers seem to be crying foul. Many producers have said that films of stars (Sudeep, Ramesh Aravind and Ganesh) who participate in TV shows should not be supported for release in theatres and distribution. The debate continues. 
Please Wait while comments are loading...