ಮತ್ತೊಂದು ವಿವಾದದಲ್ಲಿ ನಯನತಾರ; ಈ ಬಾರಿ ಆಕೆಯ ಮಕ್ಕಳ ವಿಚಾರಕ್ಕೆ ನಿರ್ಮಾಪಕ ಗರಂ
ಬಹುಭಾಷಾ ನಟಿ ನಯನತಾರ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸದ್ಯ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮದುವೆಯ ಬಳಿಕರೂ ನಯನ್ ಸಖತ್ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಾರೋಗಸಿ ಪದ್ಧತಿಯಲ್ಲಿ ವಿಘ್ನೇಶ್ ಶಿವನ್- ನಯನತಾರ ದಂಪತಿ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ನಯನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಮಾತ್ರವಲ್ಲದೇ ನಯನತಾರ ವಿವಾದಗಳಿಂದಲೂ ಆಗಾಗ್ಗೆ ಲೇಡಿ ಸೂಪರ್ ಸ್ಟಾರ್ ಸುದ್ದಿ ಆಗುತ್ತಿರುತ್ತಾರೆ. ಸಿನಿಮಾಗಳಲ್ಲಿ ನಟಿಸಿದರೂ ನಯನತಾರ ಪ್ರಚಾರಕ್ಕೆ ಬರಲ್ಲ ಎನ್ನುವ ಗಂಭೀರ ಆರೋಪವೂ ಆಕೆಯ ಮೇಲಿದೆ.

ಇತ್ತೀಚೆಗೆ ನಯನತಾರ ನಟನೆಯ 'ಅನ್ನಪೂರ್ಣಿ' ಸಿನಿಮಾ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದೆ ನಯನತಾರ ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶಿಸಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದು ಕೂಡ ವಿವಾದಕ್ಕೆ ಕಾರಣವಾಗಿ ಭಾರೀ ಚರ್ಚೆ ನಡೆಯಿತು. ಇದೀಗ ನಯನತಾರ ವಿರುದ್ಧ ಹೊಸದಾಗಿ ಮತ್ತೊಂದು ಆರೋಪ ಕೇಳಿಬರ್ತಿದೆ.
ತಮಿಳು ಸಿನಿಮಾ ನಿರ್ಮಾಪಕ ಹಾಗೂ ಯೂಟ್ಯೂಬರ್ ಅಂತನನ್ ಇದೀಗ ನಯನತಾರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಯನತಾರ ತಮ್ಮೊಟ್ಟಿಗೆ ಸೆಟ್‌ಗೆ ಏಳೆಂಟು ಜನ ಸಹಾಯಕರನ್ನು ಕರೆದುಕೊಂಡು ಬರ್ತಾರೆ ಅವರಿಗೆಲ್ಲಾ ನಿರ್ಮಾಪಕರು ಸಂಭಾವನೆ ಕೊಡಬೇಕು ಎಂದು ಹಿಂದೆ ಹೇಳಿದ್ದರು. ಈಗ ಆಕೆಯ ಮಕ್ಕಳನ್ನು ನೋಡಿಕೊಳ್ಳಲು ಬರುವ ಇಬ್ಬರು ದಾದಿಯರಿಗೂ ನಿರ್ಮಾಪಕರೇ ಸಂಬಳ ಕೊಡುವಂತಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ಮಾಪಕ ಅಂತನನ್ "ನಯನತಾರ ಸಿನಿಮಾ ಚಿತ್ರೀಕರಣದ ಸೆಟ್‌ಗೆ ತಮ್ಮ ಮಕ್ಕಳ ಜೊತೆ ಇಬ್ಬರು ದಾದಿಯರನ್ನು ಕರೆತರುತ್ತಾರೆ, ಅವರಿಬ್ಬರಿಗೆ ನಿರ್ಮಾಪಕರೇ ಸಂಬಳ ಕೊಡಬೇಕು ಎಂದು ಒತ್ತಾಯಿಸುತ್ತಾರೆ. ಇದರಲ್ಲಿ ನ್ಯಾಯ ಇದ್ಯಾ? ಆಕೆ ತನ್ನ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು ಕರೆತಂದರೆ ಆಕೆ ಸಂಬಳ ಕೊಡಬೇಕು ಅಲ್ಲವೇ? ನಿರ್ಮಾಪಕರು ಯಾಕೆ ಕೊಡಬೇಕು?" ಎಂದು ಪ್ರಶ್ನಿಸಿದ್ದಾರೆ.

ನಯನತಾರ ತನ್ನ ಮದುವೆಯ ಫುಟೇಜ್ ಅನ್ನು ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್‌ಗೆ ಮಾರಿಕೊಂಡಿದ್ದರು. ಆಕೆ ಎಲ್ಲವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ನಯನ್ ಚಿತ್ರರಂಗದಲ್ಲಿ ಸಾಧನೆ ಮಾಡಿರಬಹುದು. ಆದರೆ ಈಗ ಎಲ್ಲಾ ಉಲ್ಟಾ ಆಗುತ್ತಿದೆ. ಸದ್ಯಕ್ಕೆ ಆಕೆ ನಟಿಸಿದ ಸಿನಿಮಾಗಳು ಸದ್ದು ಮಾಡುತ್ತಿಲ್ಲ ಎಂದು ಅಂತನನ್ ವಿವರಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರ ಮದುವೆ ನಡೆದಿತ್ತು. ಮಹಾಬಲಿಪುರಂ ಬಳಿಕ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಜೋಡಿ ಹಸೆಮಣೆ ಏರಿದ್ದರು. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಕೆಲವೇ ಆಪ್ತರು ಈ ಮದುವೆ ಸಮಾರಂಭದಲ್ಲಿ ಭಾಗಿ ಆಗಿತ್ತು. ಕಲರ್‌ಫುಲ್ ಕಾರ್ಯಕ್ರಮದ ಒಂದೆರಡು ಫೋಟೊಗಳು ಬಿಟ್ಟರೆ ಮದುವೆಯ ವೀಡಿಯೋ ಹೊರಬರಲಿಲ್ಲ.
ವಿಘ್ನೇಶ್- ನಯನ್ ಮದುವೆ ಸುಂದರ ಕ್ಷಣಗಳನ್ನು ಸೆರೆ ಹಿಡಿದು ಪ್ರಸಾರ ಮಾಡುವ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿತ್ತು. ನಯನತಾರ: ಬಿಯಾಂಡ್ ದಿ ಫೇರಿ ಟೇಲ್ (Nayanthara: Beyond The Fairy Tale) ಹೆಸರಿನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಟೀಸರ್ ಸಹ ಬಂದಿತ್ತು. ಜೋಡಿ ತಮ್ಮ ಪ್ರೀತಿ, ಮದುವೆಯ ವಿಚಾರಗಳನ್ನು ಹಂಚಿಕೊಂಡಿದ್ದರು. ಅದರ ಝಲಕ್ ಮಾತ್ರ ನೋಡಿದ್ದೆವು. ಆದರೆ ಕಂಪ್ಲೀಟ್ ವೀಡಿಯೋ ಬಂದಿರಲಿಲ್ಲ. ಇದೀಗ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಮಾಡಲು ಸಜ್ಜಾಗುತ್ತಿದೆ.
ಒಂದು ಗಂಟೆ 21 ನಿಮಿಷದ 'ನಯನತಾರ: ಬಿಯಾಂಡ್ ದಿ ಫೇರಿ ಟೇಲ್' ಡಾಕ್ಯುಮೆಂಟರಿ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ನಯನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಮದುವೆ ಸಂಭ್ರಮ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











