Upendra-Protest: ಉಪೇಂದ್ರ ವಿರುದ್ಧ ನಿಲ್ಲದ ಪ್ರತಿಭಟನೆ.. ಉಪ್ಪಿ ಭಾವಚಿತ್ರಕ್ಕೆ ಉಗಿದು ಆಕ್ರೋಶ
ಉಪೇಂದ್ರ ಫೇಸ್‌ಬುಕ್ ಲೈವ್‌ನಲ್ಲಿ ಜಾತಿ ನಿಂದನೆ ಮಾಡಿದ್ದಾರೆಂಬ ಆರೋಪ ಎದುರಿಸಿದ್ದರು. ಇದೇ ವಿಚಾರವಾಗಿ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದವು. ಅಲ್ಲದೆ ವಿವಿಧ ಸಂಘಟನೆಗಳು ರಾಜ್ಯದ ಹಲವೆಡೆ ಪ್ರತಿಭಟನೆಯನ್ನು ನಡೆಸಿದ್ದರು. ಚಾಮರಾಜ ನಗರದ ಕೊಳ್ಳೆಗಾಲದಲ್ಲಿ ಇನ್ನೂ ಉಪ್ಪಿ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇದೆ.
ಇದರೊಂದಿಗೆ ಬೆಂಗಳೂರಿನಲ್ಲಿಯೇ ಎರಡು ಕಡೆಗಳಲ್ಲಿ FIR ದಾಖಲಾಗಿತ್ತು. ಈ ಸಂಬಂಧ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿ ಎಫ್‌ಐಆರ್ ಅನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದರು. ಉಪ್ಪಿ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿತ್ತು. ಈ ಸಂಬಂಧ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದೆ ನ್ಯಾಯಾಲಯ ಮೊದಲ FIRಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಬಳಿಕ ಅದೇ ಆಧಾರದ ಮೇಲೆ ಉಪ್ಪಿ ಎರಡನೇ FIR ಅನ್ನೂ ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿ ಮನವಿ ಮಾಡಿದ್ದರು. ಆಗಸ್ಟ್ 17 ರಂದು ಉಪೇಂದ್ರ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ 2ನೇ ಎಫ್‌ಐಆರ್‌ಗೂ ತಡೆಯಾಜ್ಞೆ ನೀಡಿತ್ತು.
ಬಂಧನದ ಭೀತಿಯಿಂದ ಉಪೇಂದ್ರ ಪಾರಾಗಿದ್ದರೂ, ಜನರ ಆಕ್ರೋಶ ಮಾತ್ರ ನಿಂತಿಲ್ಲ. ದಲಿತ ಸಮುದಾಯದ ಬಗ್ಗೆ ಉಪ್ಪಿ ಅವಹೇನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕೊಳ್ಳೇಗಾಲ ತಾಲೂಕು ಕಚೇರಿ ಮುಂಭಾಗ ಕಳೆದ 3 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಆದಿ ದ್ರಾವಿಡ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದ್ದು ಇಂದು (ಆಗಸ್ಟ್ 24) ಭಾವಚಿತ್ರಕ್ಕೆ ಉಗಿಯುವ ಮೂಲಕ ಉಪೇಂದ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.ನಟ ಉಪೇಂದ್ರ ಭಾವಚಿತ್ರಕ್ಕೆ ಎಲೆ ಅಡಿಕೆ ಹಾಕಿ ಉಗಿಯುವ ಮೂಲಕ ದಲಿತ ಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ದಲಿತ ಸಮುದಾಯದ ಬಗ್ಗೆ ಉಪೇಂದ್ರ ಅವಹೇಳನಕಾರಿಯಾಗಿ ಮಾತಾಡಿದ್ದು, ನಟನನ್ನು ಬಂಧಿಸಲೇಬೇಕು. ಉಪೇಂದ್ರ ಅವರ ಬಂಧನವಾಗದೇ ಇದ್ದಲ್ಲಿ ಬಂಧನವಾಗುವವರೆಗೂ ನಿರಂತರವಾಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಉಪೇಂದ್ರ ಉದ್ದೇಶ ಪೂರ್ವಕವಾಗಿ ಜಾತಿ ನಿಂದನೆ ಮಾಡುವಂತಹ ಪದ ಬಳಸಿಲ್ಲವೆಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು. ಹಾಗೇ ಉಪೇಂದ್ರ ಕೂಡ "ಆಕಸ್ಮಿಕವಾಗಿ ಈ ಗಾದೆಯನ್ನು ಬಳಕೆ ಮಾಡಲಾಗಿದೆ. ಗಾದೆ ಬಳಕೆ ಮಾಡುವುದು ಪರಿಶಿಷ್ಟ ಜಾತಿ, ಪಂಗಡಗಳ ಕಾಯಿದೆಯಡಿ ಅಪರಾಧವಲ್ಲ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು" ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು.
ಸದ್ಯ ಹೈಕೋರ್ಟ್‌ನಿಂದ ಉಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದ್ದರೂ ಪ್ರತಿಭಟನೆಯ ಕಾವು ಮಾತ್ರ ಕಮ್ಮಿಯಾಗಿಲ್ಲ. ದಲಿತ ಸಮುದಾಯದ ಆಕ್ರೋಶ ತುತ್ತಾಗಿರೋ ಉಪೇಂದ್ರ ಮುಂದಿನ ದಿನಗಳಲ್ಲಿ ಯಾವ ರೀತಿ ಈ ಸಂಕಷ್ಟದಿಂದ ಹೊರ ಬರುತ್ತಾರೋ ನೋಡಬೇಕಿದೆ.


Click it and Unblock the Notifications











