ರಥಾವರ ನಿರ್ದೇಶಕನ 'ಚೌಕಿದಾರ್'; ಪೃಥ್ವಿ-ಧನ್ಯಾ ಹೊಸ ಸಿನಿಮಾದ ಕಥೆಯೇನು?
ಕನ್ನಡದ ಚಿತ್ರರಂಗದಲ್ಲಿ ಕೆಲವು ದಿನಗಳಿಂದ ಬೇಡದ ಸುದ್ದಿಗಳನ್ನೇ ಕೇಳಿ ಸಿನಿಪ್ರಿಯರು ಸುಸ್ತಾಗಿದ್ದರು. ಅದೇ ಸಮಯಕ್ಕೆ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಅದುವೇ 'ಚೌಕಿದಾರ್'. 'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ಕುಮಾರ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿದ್ದ 'ರಥಾವರ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಚಂದ್ರಶೇಖರ್ ಬಂಡಿಯಪ್ಪ 'ಚೌಕಿದಾರ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹಳ ದಿನಗಳ ಬಳಿಕ ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಧನ್ಯಾ ರಾಮ್‌ಕುಮಾರ್ ಹಾಗೂ ಪೃಥ್ವಿ ಅಂಬಾರ್ ಜೋಡಿಯಾಗಿ ನಟಿಸುತ್ತಿದ್ದಾರೆ.

'ರಥಾವರ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ 'ಚೌಕಿದಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, 'ಡೈಲಾಗ್ ಕಿಂಗ್' ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಸಿನಿಪ್ರಿಯರಿಗೆ ಗಮನವನ್ನಂತೂ ಸೆಳೆದಿದೆ.
ಸಿನಿಮಾ ಸೆಟ್ಟೇರಿದ ಖುಷಿಯಲ್ಲಿ "ಇದು ನನ್ನ ಆರನೇ ಸಿನಿಮಾ. ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾದ ನಿರ್ಮಾಪಕರು. ರಥಾವರ ಹಿಟ್ ಆದಮೇಲೆ ನನಗೆ ಒಂದು ಸಿನಿಮಾ ಮಾಡಿ ಎಂದು ಕೇಳುತ್ತಿದ್ದರು. ಪೃಥ್ವಿ ಅವರನ್ನು ಲವರ್ ಬಾಯ್ ರೀತಿ ತೋರಿಸಿದ್ದಾರೆ. ಬೇರೆ ರೀತಿ ಟ್ರೈ ಮಾಡಬೇಕು ಎಂಬ ಆಸೆಯಿಂದ ಕಥೆ ಹೇಳಿದೆ. ಅವರು ಒಕೆ ಎಂದರು. ಅವರು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಜೋಶ್ ನೋಡಿ ಖುಷಿಯಾಯ್ತು. ಧನ್ಯ ಮೇಡಂ, ಸಾಯಿಕುಮಾರ್ ಸರ್, ಧರ್ಮ ಸರ್ ಎಲ್ಲರೂ ಇದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ" ಎಂದು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ನಟ ಪೃಥ್ವಿ ಅಂಬಾರ್ ಸಿನಿಮಾ ಸೆಟ್ಟೇರಿದ ಖುಷಿಯಲ್ಲಿದ್ದಾರೆ. "ಚೌಕಿದಾರ್ ಸಿನಿಮಾಗೆ ಚಾಲನೆ ಸಿಕ್ಕಿದೆ. ಖುಷಿ ದಿನ ಇವತ್ತು. ಕಥೆ ಕೇಳಿದಾಗ ನನಗೆ ಆಯ್ತು. ನಾನು ಈ ಪಾತ್ರ ಮಾಡಲು ಸಾಕಷ್ಟು ಎಫರ್ಟ್ ಹಾಕಬೇಕು ಎಂದು ನನಗೆ ಗೊತ್ತಾಗಿದೆ. ಪ್ರಿಪೇರ್ ಆಗಲು ಟೈಮ್ ಬೇಕು ಎಂದೆ. ಅದರಂತೆ ಅವರು ನನಗೆ ಟೈಮ್ ಕೊಟ್ಟರು. ಒಂದು ದಿನ ಟೀಸರ್ ಶೂಟ್ ಮಾಡಿದ್ದೇವೆ. ಚೌಕಿದಾರ್ ಟೈಟಲ್ ಕೊಡುವ ವೈಬ್ಸ್ ಕಥೆಯಲ್ಲಿರುತ್ತದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಪೃಥ್ವಿ ಅಂಬಾರ್.
ಹಾಗೇ "ಮುಂದಿನ ವರ್ಷ ನಟನಾಗಿ 50 ವರ್ಷ ಕಂಪ್ಲೀಟ್ ಆಗುತ್ತಿದೆ. ಕಾರಣ ಇದಕ್ಕೆಲ್ಲಾ ಅಪ್ಪ ಅಮ್ಮ. ನೀವು ಕನ್ನಡ ಸಿನಿಮಾ ಮಾಡಬೇಕು ಎಂದು ಅಮ್ಮ ಹೇಳುತ್ತಿದ್ದರು. ಕನ್ನಡ ಜರ್ನಿಗೂ 30 ವರ್ಷವಾಯ್ತು. ಪ್ರತಿ ದಿನ, ಪ್ರತಿ ಸಿನಿಮಾದ ಪಾತ್ರ ಚಾಲೆಂಜ್. ಈಗ ಹದಿನೈದು ಸಿನಿಮಾ ನಡೆಯುತ್ತಿದೆ. ಚಂದ್ರಶೇಖರ್ ಸಿನಿಮಾ ಗ್ಲಿಂಪ್ಸ್ ಚೆನ್ನಾಗಿದೆ. ನನ್ನ ತಮ್ಮ ಕೂಡ ಅದ್ಭುತ ಡೈರೆಕ್ಟರ್ ಎಂದರು. ಚೌಕಿದಾರ್ ಕಥೆ ಕೇಳಿದೆ ಎಮೋಷನ್ ಡ್ರಾಮಾ. ನಾನು ತುಳು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಪೃಥ್ವಿ ಹೀರೋ. ನಾನು ಅದರಲ್ಲಿ ಪೊಲೀಸ್. ಸಬ್ಜೆಕ್ಟ್ ಚೆನ್ನಾಗಿದೆ. ಪೃಥ್ವಿಗೆ ನಾನು ಚೌಕಿದಾರ್. ನನಗೆ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್" ಎನ್ನುತ್ತಾರೆ ಸಾಯಿಕುಮಾರ್.
'ಚೌಕಿದಾರ್' ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಬರೆಯುತ್ತಿದ್ದಾರೆ. 'ಚೌಕಿದಾರ್' ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್ ಬಾಯ್ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ.


Click it and Unblock the Notifications











