'ಕರಾವಳಿ' ಹಿನ್ನೆಲೆಯಲ್ಲಿ ಇನ್ನೊಂದು ಕಥೆ ; ಪೃಥ್ವಿ ಅಂಬಾರ್ 'ಮಾಸ್ 'ಅವತಾರ
ದಿಯಾ ಸಿನಿಮಾ ಮೂಲಕ ಚಂದನವನದಲ್ಲಿ ಛಾಪು ಮೂಡಿಸಿದ ನಟ ಪೃಥ್ವಿ ಅಂಬಾರ್ ಸದ್ಯಕ್ಕೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ನಟಿಸಿದ ಬಹುತೇಕ ಸಿನಿಮಾ ಬ್ಯಾಕ್ ಟು ಬ್ಯಾಕ್ ಬಿಡುಗಡೆಯೂ ಆಗುತ್ತಿವೆ. ಆ ಪೈಕಿ ಮತ್ಸ್ಯಗಂಧ ಕೂಡ ಒಂದು
ಪೃಥ್ವಿ ಅಂಬಾರ್ ಪಾಲಿಗೆ ಮತ್ಸ್ಯಗಂಧ ತುಂಬಾನೇ ವಿಶೇಷ. ಅದಕ್ಕೆ ಅನೇಕ ಕಾರಣಗಳೂ ಇವೆ. ಕೋಸ್ಟಲ್ ವುಡ್ ನಲ್ಲಿ ಮಿಂಚಿ ಚಂದನವನಕ್ಕೆ ಕಾಲಿಟ್ಟ ಪೃಥ್ವಿ ಅಂಬಾರ್ ಈ ಚಿತ್ರದ ಮೂಲಕ ಮತ್ತೆ ಕರಾವಳಿ ಮಣ್ಣಿಗೆ ಮರಳಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ಹಿನ್ನೆಲೆಯಲ್ಲಿ ನಡೆಯುವ ಕಥೆಯೊಂದನ್ನ ಹೊತ್ತ ಮತ್ಸ್ಯಗಂಧದಲ್ಲಿ ಪೊಲೀಸ್ ಅಧಿಕಾರಿಯಾಗಿ ಪೃಥ್ವಿ ಅಂಬಾರ್ ಮಿಂಚಿದ್ದಾರೆ.

ಮತ್ಸ್ಯಗಂಧದಲ್ಲಿ ಪ್ರತಿಭಾವಂತರ ಅಪೂರ್ವ ಸಂಗಮವೂ ಆಗಿದೆ. ಪೃಥ್ವಿ ಅಂಬಾರ್ ಜೊತೆ ಇಲ್ಲಿ ಭಜರಂಗಿ ಲೋಕಿ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಮೈಮ್ ರಾಮದಾಸ್ , ಪಿ.ಡಿ. ಸತೀಶ್ ಚಂದ್ರ, ದಿಶಾ ಶೆಟ್ಟಿ, ಅಂಜಲಿ ಪಾಂಡೆ, ದಿವ್ಯಾ ಶೆಟ್ಟಿ, ಕಾಂತ್ ರಾಜ್ ಕಡ್ಡಿಪುಡಿ ಹೀಗೆ ಅನೇಕರು ಚಿತ್ರದಲ್ಲಿದ್ದಾರೆ. ಇನ್ನೂ ಅನುಭವಿ ಹಾಗೂ ಹಿರಿಯ ನಟ ಶರತ್ ಲೋಹಿತಾಶ್ವ ಅವರನ್ನೂ ಕೂಡ ನೀವೂ ಈ ಸಿನಿಮಾದಲ್ಲಿ ನೋಡಬಹುದು.
ದೇವರಾಜ್ ಪೂಜಾರಿ ನಿರ್ದೇಶನ ಈ ಚಿತ್ರಕ್ಕಿದೆ. ಹಿಂದೆ 2018ರಲ್ಲಿ ಮುಗ್ದ ಪ್ರೀತಿ ಹಾಗೂ ಕಣ್ಣಿಗೆ ಕಾಣದ ಕಪಟದ ಕಥೆಯನ್ನ ಕಿನಾರೆ ಚಿತ್ರದ ಮೂಲಕ ಹೇಳಿದ್ದ ದೇವರಾಜ್ ಪೂಜಾರಿ ಈ ಬಾರಿ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಚಿತ್ರದ ಕಥೆಯನ್ನ ಹೆಣೆದು ನಿರ್ದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರ ಬಾಷೆ,ಬದುಕು, ಸಂಪ್ರದಾಯ ,ಹೋರಾಟ, ,ಮೀನುಗಾರರ ಸ್ವಾಭಿಮಾನ , ಬವಣೆಗಳಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನ ಪಟ್ಟಿದ್ದಾರೆ. ಕನ್ನಡ ಪಿಚ್ಚರ್ ಅರ್ಪಿಸುವ ಚಿತ್ರವನ್ನ ಬಿ.ಎಸ್. ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಚಿತ್ರದ ಮೂಲಕ ಪ್ರಶಾಂತ್ ಸಿದ್ದಿ ಸಂಗೀತ ನಿರ್ದೇಶಕರಾಘಿ ಬಡ್ತಿ ಪಡೆದಿರುವುದು ಇನ್ನೊಂದು ವಿಶೇಷ.

ಸದ್ಯಕ್ಕೆ ಮತ್ಸ್ಯಗಂಧ ಚಿತ್ರದ ಭಾಗಿರಥಿ, ಕುವಾ ಕುವಾ ಹಾಡಿನ ಜೊತೆ ಟೀಸರ್ ಸಿನಿ ಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಚಿತ್ರದ ಮೇಲೀನ ನಿರೀಕ್ಷೆಯನ್ನೂ ಇಮ್ಮಡಿಗೊಳಿಸಿವೆ. ಇನ್ನೇನು ಕೆಲವೇ ದಿನ ಮತ್ಸ್ಯಗಂಧ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ದಿನಾಂಕ ನೆನಪಿರಲಿ ಫೆಬ್ರವರಿ 23-2024.


Click it and Unblock the Notifications











