»   » ಜಗ್ಗೇಶ್‌ ಮಾತನ್ನು ಯಾಕೆ ಸೀರಿಯೆಸ್ಸಾಗಿ ತಗೋತೀರಿ.

ಜಗ್ಗೇಶ್‌ ಮಾತನ್ನು ಯಾಕೆ ಸೀರಿಯೆಸ್ಸಾಗಿ ತಗೋತೀರಿ.

By: *ಜಾನಕಿ ಜಿ
Subscribe to Filmibeat Kannada

ಕೆಲವು ಮಾತುಗಳಿಗೆ ಉದಾಸೀನವೇ ಮದ್ದು. ದಿವ್ಯ ನಿರ್ಲಕ್ಷ್ಯವೇ ಉತ್ತರ. ವಾಕ್‌ ಸ್ವಾತಂತ್ರ್ಯ ಪ್ರತಿಯಾಬ್ಬರಿಗೂ ಇದೆ. ಹಾಗಂತ ಆಡೋದೆಲ್ಲ ವೇದವಾಕ್ಯವಲ್ಲ.

ಹೊಸದಾಗಿ ಹುಟ್ಟಿಕೊಂಡಿರುವ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷ ಪಿ.ಶೇಷಾದ್ರಿ, ಉಪಾಧ್ಯಕ್ಷ ರವಿಕಿರಣ್‌ ಹಾಗೂ ಕಾರ್ಯದರ್ಶಿ ಬಿ.ಸುರೇಶ್‌ ಶನಿವಾರ ಸುದ್ದಿಗೋಷ್ಠಿ ನಡೆಸಿ, ಆಡಿದ ಮಾತಿದು. ಕಲಾವಿದರು ಒಂದೋ ಸಿನಿಮಾದಲ್ಲಿ ನಟಿಸಬೇಕು. ಇಲ್ಲವೇ ಕಿರುತೆರೆಗೇ ಅಂಟಿಕೊಂಡಿರಬೇಕು ಎಂದು ನಟ ಜಗ್ಗೇಶ್‌ ಫರ್ಮಾನು ಹೊರಡಿಸಿರುವುದರ ಬಗೆಗೆ ಪಿ.ಶೇಷಾದ್ರಿ ಅಂಡ್‌ ಕಂಪನಿ ಪ್ರತಿಕ್ರಿಯಿಸುತ್ತಿತ್ತು.

ಪ್ರತಿಯಾಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಒಬ್ಬ ಕಲಾವಿದ ಇಂಥಾ ಮಾತುಗಳನ್ನಾಡಿದರೆ, ಅದಕ್ಕೆ ದಿವ್ಯ ನಿರ್ಲಕ್ಷ್ಯವೇ ಉತ್ತರ. ಸಿನಿಮಾಗೆ ಸಂಬಂಧಿಸಿದ ಯಾವುದಾದರೂ ಸಂಘ ಈ ರೀತಿ ಮಾತಾಡಿದ್ದರೆ ಅದಕ್ಕೆ ನಾವು ಹೋರಾಡುವ ಅಗತ್ಯವಿತ್ತು. ವಾಸ್ತವದಲ್ಲಿ ಜಗ್ಗೇಶ್‌ ಆಡಿರುವ ಮಾತೇ ದ್ವಂದ್ವಕ್ಕೆ ಎಡೆಮಾಡಿಕೊಡುತ್ತದೆ. ಸಿನಿಮಾದಲ್ಲಿರುವವರು ಕಿರುತೆರೆಗೆ ಬರಬಾರದೋ, ಕಿರುತೆರೆಯಲ್ಲಿ ನಟಿಸುವವರು ಹಿರಿತೆರೆಗೆ ಬರಬಾರದೋ ಅನ್ನುವ ಪ್ರಶ್ನೆ ಉಳಿಯುತ್ತದೆ ಎನ್ನುತ್ತದೆ ಟೆಲಿವಿಷನ್‌ ಅಸೋಸಿಯೇಷನ್‌.

ಎಷ್ಟೋ ಒಳ್ಳೆಯ ಕಲಾವಿದರು, ನಿರ್ದೇಶಕರು ಕಿರುತೆರೆಯಿಂದ ಹಿರಿತೆರೆಗೆ ಹಾರಿ ಹೆಸರು ಮಾಡಿದ್ದಾರೆ. ಕಲಾವಿದರು ಕಲಾವಿದರಷ್ಟೆ. ಹಿರಿತೆರೆಯವ ಕಿರಿತೆರೆಯವ ಎಂದು ಬಗೆಯುವುದು ತರವಲ್ಲ ಎಂದರು ಶೇಷಾದ್ರಿ. ಶೇಷಾದ್ರಿ ಅವರ ಈ ಮಾತಿಗೆ ಖುದ್ದು ಅವರೇ ನಿದರ್ಶನ. ಕಿರುತೆರೆಯಲ್ಲಿ ಅನುಭವ ಮೊಗೆದು, ಪ್ರಶಸ್ತಿ ದೋಚಿರುವ ಮುನ್ನುಡಿಯಂಥಾ ಉತ್ತಮ ಚಿತ್ರ ಕೊಟ್ಟಿರುವ ಅಗ್ಗಳಿಕೆ ಅವರದು. ಇದಕ್ಕೆ ಇನ್ನೊಂದು ಉದಾಹರಣೆ, ಟಿ.ಎನ್‌.ಸೀತಾರಾಂ. ಅವರೂ ಕಿರಿತೆರೆ, ಹಿರಿತೆರೆ ಎರಡಕ್ಕೂ ಸಂದವರು.

ಅಂದಹಾಗೆ, ಕಿರುತೆರೆ ಕಲಾವಿದರ ಒಕ್ಕೂಟ ಹುಟ್ಟುಕೊಂಡಿರುವುದು ಜಗ್ಗೇಶ್‌ ವಿರುದ್ಧ ಸೊಲ್ಲೆತ್ತುವ ಏಕಮಾತ್ರ ಉದ್ದೇಶದಿಂದಲ್ಲ. ಕೇಂದ್ರ ಸರ್ಕಾರದ ಕ್ಷೇಮಾಭಿವೃದ್ಧಿ ಇಲಾಖೆಯ ಸೌಲಭ್ಯವನ್ನು ಪಡೆಯುವುದು ಒಕ್ಕೂಟದ ಉದ್ದೇಶ. ಕಿರುತೆರೆ ಕಲಾವಿದರಿಗೆ ನಿವೃತ್ತಿ ವೇತನ, ಅಪಘಾತ ಪರಿಹಾರ ನಿಧಿ, ಸಹಾಯಧನ ನೀಡುವುದು ಹಾಗೂ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ವಿತರಿಸುವುದು ಒಕ್ಕೂಟದ ಆಲೋಚನೆಗಳು.

ಇಂಥಾ ಒಕ್ಕೂಟ ಹುಟ್ಟಲು ಕಾರಣವಾದ ಜಗ್ಗೇಶ್‌ಗೆ ಧನ್ಯವಾದಗಳು. ಯಾಕೆಂದರೆ, ಕಿರುತೆರೆ ಕಲಾವಿದರ ಭವಿತವ್ಯ ಕಾಪಾಡುವ ಪ್ರಯತ್ನಗಳು ಇನ್ನು ಮುಂದೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ವಾರ್ತಾ ಸಂಚಯ

English summary
Karnataka television association president P. Sheshadri says, mum is the answer for Jaggesh
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada