»   » ರಾಜ್‌ ಪುತ್ರರರೂ ನಾಯಕರಾದಂತಾಯಿತು.

ರಾಜ್‌ ಪುತ್ರರರೂ ನಾಯಕರಾದಂತಾಯಿತು.

Posted By: Staff
Subscribe to Filmibeat Kannada

ಬೆಟ್ಟದ ಹೂವು ಸಿನಿಮಾದ ಲೋಹಿತ್‌ ನಿಮಗೆ ನೆನಪಿರಬೇಕು. ಸಂದು ಹಲ್ಲಿನ, ಮುಗ್ಧ ನಗೆಯ ಆ ಚೋಟುದ್ದದ ಹುಡುಗ ಬೆಟ್ಟದ ಹೂವು ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದ . ಆ ಪ್ರಶಸ್ತಿ ಕನ್ನಡದ ಬಾಲನಟನೊಬ್ಬ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಳ್ಳಲು ನೆರವಾದದ್ದನ್ನು ಯಾರು ಮರೆತಾರು.

ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಲೋಹಿತ್‌ ಅಪ್ಪನ ಮೀರಿಸಿದ ಮಗನಾಗಿದ್ದರು (ರಾಜ್‌ ಏನೆಲ್ಲ ಪ್ರಶಸ್ತಿ ಪಡೆದರೂ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿಲ್ಲ ). ಅದೆಲ್ಲಾ ಈಗ ಇತಿಹಾಸ. ಲೋಹಿತ್‌ ಈಗ ಬೆಳೆದಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಆಗಿ ಬದಲಾಗಿದ್ದಾರೆ. ಮದುವೆಯಾಗಿರುವುದರಿಂದ ಸಾಕಷ್ಟು ಪ್ರೌಢತೆಯೂ ಮೈಗೂಡಿದೆಯೆಂದು ಭಾವಿಸಬಹುದು. ಹೊಸ ರೂಪದ ಪುನೀತ್‌ ಈಗ ನಾಯಕ ನಟರಾಗಿ ತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ.

ನಾಯಕ ನಟನಾಗಿ ಪುನೀತ್‌ ಅಭಿನಯಿಸುವ ಸುದ್ದಿ ಇಂದು ನೆನ್ನೆಯದಲ್ಲ . ನಾಲ್ಕೈದು ವರ್ಷಗಳಿಂದ ಪುನೀತ್‌ ಸಿನಿಮಾ ಬರುತ್ತದೆನ್ನುವ ಸುದ್ದಿ ಸದಾಶಿವನಗರ ಬಂಗಲೆಯಿಂದ ಹೊರಬೀಳುತ್ತಲೇ ಇದೆ. ತನ್ನ ಮೊದಲ ಸಿನಿಮಾವನ್ನು ಮಣಿರತ್ನಂ ಅವರೇ ನಿರ್ದೇಶಿಸಬೇಕು, ಸಂಗೀತ ರೆಹಮಾನ್‌ ಅವರದ್ದೇ ಆಗಿರಬೇಕು ಎಂದು ಸಂದರ್ಶನವೊಂದರಲ್ಲಿ ಪುನೀತ್‌ ಕನಸುಗಳನ್ನು ತೋಡಿಕೊಂಡಿದ್ದೂ ಉಂಟು. ಆನಂತರ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನೀರು ಹರಿದಿದೆ. ಪುನೀತ್‌ ಸಿನಿಮಾ ಸೆಟ್ಟೇರಲು ಈಗ ಸಿದ್ಧತೆಗಳು ಭರದಿಂದ ನಡೆದಿವೆ. ನಿರ್ದೇಶಕರು- ಪುನೀತ್‌ ಬಯಸಿದ ಮಣಿರತ್ನಂ ಅಲ್ಲ , ನಾಗತಿಹಳ್ಳಿ ಚಂದ್ರಶೇಖರ್‌.

ಅಮೇರಿಕಾ ಅಮೇರಿಕಾ, ಕೊಟ್ರೇಶಿ ಕನಸು ಹಾಗೂ ಹೂಮಳೆ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ಹ್ಯಾಟ್ರಿಕ್‌ ನಿರ್ದೇಶಕರೆಂದೇ ಹೆಸರಾಗಿರುವ ಹಾಗೂ ನನ್ನ ಪ್ರೀತಿಯ ಹುಡುಗಿ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸ ನೀರನ್ನು ಪರಿಚಯಿಸಿದ ನಾಗತಿಹಳ್ಳಿ, ಈಗ ಪುನೀತ್‌ ಮೂಲಕ ಮತ್ತೊಂದು ಸಾಹಸಕ್ಕೆ ಸಜ್ಜಾಗಿದ್ದಾರೆ.

ನಾಯಕ ಹಾಗೂ ನಿರ್ದೇಶಕ ಇಬ್ಬರಿಗೂ ಹೊಸ ಸಿನಿಮಾ ಸವಾಲಾಗಿ ಪರಿಣಮಿಸಿದೆ. ಮೀಸೆ ಹೊತ್ತ ನಾಯಕನಟನಾಗಿ ಮೊದಲ ಬಾರಿಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಪುನೀತ್‌ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದರೆ, ತನ್ನ ಇಮೇಜ್‌ಗೆ ಒಗ್ಗದ ಕಥೆಯನ್ನು ದಕ್ಕಿಸಿಕೊಳ್ಳುವ ಯತ್ನದಲ್ಲಿ ನಾಗತಿಹಳ್ಳಿ ತೊಡಗಿದ್ದಾರೆ. ಸಿನಿಮಾ ಸಾಹಸ ಪ್ರಧಾನವಾಗಿದ್ದು , ನಾಗತಿಹಳ್ಳಿ ಮಟ್ಟಿಗೆ ಇಂಥಾ ಕಥೆ ತೀರಾ ಹೊಸತು. ಈ ಹಿನ್ನೆಲೆಯಲ್ಲಿ ಪುನೀತ್‌ ಸಿನಿಮಾ ನಾಗತಿಹಳ್ಳಿ ಪಾಲಿಗೆ ಕೂಡ ಮೊದಲ ಸಿನಿಮಾ ಎನಿಸಿದಲ್ಲಿ ಆಶ್ಚರ್ಯವಿಲ್ಲ .

ಅಧಿಕೃತ ಮೂಲಗಳ ಪ್ರಕಾರ, ಪುನೀತ್‌ ರಾಜ್‌ಕುಮಾರ್‌ ಪ್ರಸ್ತುತ ಸಿಂಗಪೂರ ಪ್ರವಾಸದಲ್ಲಿದ್ದಾರೆ. ಹೊಸ ನಮೂನೆಯ ಡ್ರೆಸ್‌ ಹಾಗೂ ಸಾಹಸ ದೃಶ್ಯಗಳಿಗೆ ಅಗತ್ಯವಾದ ಜಾಕೆಟ್‌ಗಳನ್ನು ಖರೀದಿಸುವುದು ಪುನೀತ್‌ ಪ್ರವಾಸದ ಉದ್ದೇಶ. ಇದೇ ಅವಧಿಯಲ್ಲಿ ತಮ್ಮ ಯುನಿಟ್‌ಗಾಗಿ ಕ್ಯಾಮರಾವೊಂದನ್ನು ಕೂಡ ಪುನೀತ್‌ ಖರೀದಿಸುತ್ತಾರಂತೆ.

ಸ್ಯಾಂಡಲ್‌ವುಡ್‌ಗೆ ತಾಜಾ ಸಿನಿಮಾ ನೀಡುವ ನಿರೀಕ್ಷೆಯನ್ನಂತೂ ಪುನೀತ್‌- ನಾಗತಿಹಳ್ಳಿ ಜೋಡಿ ಮೂಡಿಸಿದೆ. ಪುನೀತ್‌ ನಾಯಕನಾಗಿ ಯಶಸ್ಸು ಗಳಿಸುತ್ತಾರೋ ಇಲ್ಲವೋ ಅನ್ನುವುದು ಹಾಗೂ ರಾಜ್‌ ಕ್ಯಾಂಪಿನಲ್ಲಿ 'ಮೇಷ್ಟ್ರು" ಪಾಸಾಗುತ್ತಾರೋ ಇಲ್ಲವೋ ಅನ್ನುವ ಪ್ರಶ್ನೆಗಳೀಗ ಭಾರೀ ಪ್ರಾಮುಖ್ಯತೆ ಗಳಿಸಿವೆ.

English summary
Puneeth Rajukumar is opting for acting as hero, the movie id directed by nagathihalli chandrashekhar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada