ಅಪ್ಪು, ಯಶ್ ಕಥೆ ಕೇಳಿ ಬಿಟ್ಟ ದೊಡ್ಡ ಚಿತ್ರಕ್ಕೀಗ ರಕ್ಷಿತ್ ಶೆಟ್ಟಿ ಹೀರೊ!
ಸಿನಿಮಾ ರಂಗದಲ್ಲಿ ಪುಟ್ಟ ಅವಕಾಶ ಸಿಕ್ಕರೆ ಸಾಕು ತನ್ನಲ್ಲಿರುವ ಪ್ರತಿಭೆಯನ್ನು ತೋರಿಸುತ್ತೇನೆ ಎಂಬ ಕಲಾವಿದರ ಒಮ್ಮೆ ಸ್ಟಾರ್ ಪಟ್ಟಕ್ಕೇರಿದರೆ ಸಾಕು ಆತನಿಗೆ ಸಾಲು ಸಾಲು ಚಿತ್ರಗಳು ಹುಡುಕಿಕೊಂಡು ಬರುತ್ತವೆ. ನಿರ್ದೇಶಕರು ಈ ಕಥೆ ನಿಮಗೆ ಸೆಟ್ ಆಗುತ್ತೆ ಎಂದು ಆ ನಟನ ಮನವೊಲಿಸಲು ಯತ್ನಿಸಿದರೆ, ನಿರ್ಮಾಪಕರು ಹಾಕಿದ ಹಣ ವಾಪಸ್ ಬರುವ ಪಕ್ಕಾ ಭರವಸೆಯಿಂದ ಕೋಟಿ ಕೋಟಿ ಸುರಿಯಲು ಸಜ್ಜಾಗುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಈ ರೀತಿ ಬೇಡಿಕೆ ಹುಟ್ಟಿಸಿಕೊಂಡಿರುವ ನಟರ ಸಂಖ್ಯೆ ಸದ್ಯಕ್ಕೆ ತುಸು ಹೆಚ್ಚೇ ಇದೆ. ಅದರಲ್ಲಿಯೂ ಪ್ಯಾನ್ ಇಂಡಿಯಾ ಕಂಟೆಂಟ್‌ಗಳು ಹೆಚ್ಚಾದ ಮೇಲಂತೂ ಟ್ಯಾಲೆಂಟ್ ಇರುವವನೇ ಸ್ಟಾರ್ ಎಂಬುದು ಸಾಬೀತಾಗಿದ್ದು, ಪ್ರತಿಭಾವಂತ ನಟರೂ ತಮ್ಮ ಸ್ಟಾರ್‌ಡಂ ಅನ್ನು ಉಳಿಸಿಕೊಳ್ಳಲು ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಆರಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಇನ್ನು ಸ್ಟಾರ್ ನಟರು ಚಿತ್ರಗಳನ್ನು ಆರಿಸಿಕೊಳ್ಳುವುದರಲ್ಲಿ ಈ ಹಿಂದಿನಿಂದಲೂ ಚ್ಯೂಸಿಯಾಗಿದ್ದಾರೆ. ಕೆಲವೊಮ್ಮೆ ಚಿತ್ರದ ಕಥೆ ಹಿಡಿಸದ ಕಾರಣಕ್ಕೆ ಚಿತ್ರಗಳನ್ನು ಕೈಬಿಟ್ಟರೆ, ಇನ್ನೂ ಕೆಲವೊಮ್ಮೆ ಆ ಸಿನಿಮಾದ ಕಥೆ ತಮಗೆ ಸರಿಹೊಂದುವುದಿಲ್ಲ ಎಂಬ ಕಾರಣಕ್ಕೆ ಆಫರ್ ತಿರಸ್ಕರಿಸಿದ್ದಾರೆ. ಹೀಗೆ ಕಥೆ ವಿಚಾರವಾಗಿ ಕೆಲ ಚಿತ್ರಗಳನ್ನು ಸ್ಟಾರ್ ನಟರು ಕೈಬಿಟ್ಟಿದ್ದರೆ, ಇನ್ನೂ ಕೆಲವೊಮ್ಮೆ ಕಥೆಗೆ ಬಂಡವಾಳ ಹೂಡಲು ನಿರ್ಮಾಪಕರಿಲ್ಲದ ಕಾರಣಕ್ಕೆ ಆ ಚಿತ್ರಗಳು ತೆರೆಗೆ ಬರಲಾಗದೇ ಉಳಿದುಕೊಂಡಿಬಿಟ್ಟಿವೆ. ಹೀಗೆ ಸೆಟ್ಟೇರದೇ ನಿಂತ ಉತ್ತಮ ಕಥೆಗಳು ಬಹಳ ದಿನಗಳ ಬಳಿಕ ಸಿನಿಮಾವಾದ ಹಲವು ಉದಾಹರಣೆಗಳಿವೆ. ಆದರೆ ಮೊದಲಿಗೆ ಕಥೆ ಕೇಳಿದ್ದ ನಟರ ಬದಲು ಬೇರೆ ನಟರು ಈ ಕಥೆಗಳಿಗೆ ನಾಯಕರಾದ ಉದಾಹರಣೆಗಳೇ ಹೆಚ್ಚಿವೆ. ಅಂತಹದ್ದೇ ಸಾಲಿಗೆ ಸೇರುತ್ತೆ ರಕ್ಷಿತ್ ಶೆಟ್ಟಿ ನಟನೆಯ ಈ ಹೊಸ ಚಿತ್ರ..

ಅಪ್ಪು, ಯಶ್ ಕೇಳಿದ್ದ ಕಥೆ ಇದು
ಹೌದು, ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಪ್ರತಿಭಾವಂತ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಕಥೆಯನ್ನು ರಕ್ಷಿತ್ ಶೆಟ್ಟಿಗೂ ಮುನ್ನ ಕನ್ನಡದ ದೊಡ್ಡ ಸ್ಟಾರ್ ನಟರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕೇಳಿದ್ದರಂತೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಹೇಮಂತ್ ರಾವ್ ಹಲವು ತಿಂಗಳುಗಳ ಹಿಂದೆಯೇ ಸಂದರ್ಶವೊಂದರಲ್ಲಿ ಬಿಚ್ಚಿಟ್ಟಿದ್ದರು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಇಬ್ಬರು ನಟರು ಈ ಚಿತ್ರವನ್ನು ಏಕೆ ಮಾಡಲಿಲ್ಲ ಎಂಬ ಚರ್ಚೆಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಕಮರ್ಷಿಯಲ್ ಅಂಶ ಕಡಿಮೆ ಎಂಬ ಕಾರಣಕ್ಕೆ ಕೈಬಿಟ್ಟಿದ್ರಾ?
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಇದರ ಕುರಿತು ಪ್ರತಿಕ್ರಿಯಿಸಿರುವ ಹಲವು ಸಿನಿ ರಸಿಕರು ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿಮಾನಿಗಳು ನಿರೀಕ್ಷಿಸುವಂತಹ ಅಂಶಗಳ ಕೊರತೆ ಇದೆ ಎಂಬ ಕಾರಣಕ್ಕೇನಾದರೂ ಅಪ್ಪು ಹಾಗೂ ಯಶ್ ಈ ಚಿತ್ರವನ್ನು ಕೈಬಿಟ್ಟಿದ್ರಾ ಎಂಬ ಪ್ರಶ್ನೆ ಹಾಕಿ ಅಭಿಪ್ರಾಯ ತಿಳಿಸಿದ್ದಾರೆ.

ಅಪ್ಪು ಹಾಗೂ ಯಶ್ ನಟಿಸದಿರಲು ಕಾರಣವಿದು
ಇನ್ನು ಅಪ್ಪು ಹಾಗೂ ಯಶ್ ಈ ಚಿತ್ರದಲ್ಲಿ ನಟಿಸದಿರಲು ಕಾರಣ ಹೇಮಂತ್ ರಾವ್ ಈ ಕಥೆಯನ್ನು ಇಬ್ಬರ ಬಳಿ ಹೇಳಿದ್ದಾಗ ಅವರ ಬಳಿ ನಿರ್ಮಾಪಕರು ಇಲ್ಲದೇ ಇದ್ದದ್ದು. ಹೌದು, ಈ ಚಿತ್ರದ ಕಥೆ ರೆಡಿಯಿದ್ದರೂ ಸಹ ಬಂಡವಾಳ ಹೂಡಲು ನಿರ್ಮಾಪಕರು ಇರದಿದ್ದ ಕಾರಣ ಚಿತ್ರ ಸೆಟ್ಟೇರಲು ತಡವಾಯಿತು ಎಂದು ಹೇಮಂತ್ ರಾವ್ ಅವರೇ ತಿಳಿಸಿದ್ದಾರೆ. ಅವರೇ ಹೇಳಿದಂತೆ ಈ ಕಥೆಯನ್ನು ಅವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗೂ ಮುನ್ನವೇ ತಯಾರಿಸಿದ್ದರಂತೆ. ಹೀಗೆ ಸುಮಾರು ಏಳೆಂಟು ವರ್ಷಗಳ ಹಿಂದೆ ತಯಾರಿಸಿದ್ದ ಈ ಕಥೆ ಈಗ ಚಿತ್ರವಾಗಿ ತೆರೆ ಮೇಲೆ ಬರುತ್ತಿದ್ದು, ಸಿನಿ ರಸಿಕರು ಯಾವ ರೀತಿ ಈ ಚಿತ್ರವನ್ನು ಸ್ವೀಕರಿಸುತ್ತಾರೆಯೋ ಕಾದುನೋಡಬೇಕಿದೆ.


Click it and Unblock the Notifications











