ಅಪ್ಪು ಕೊನೆಯದಾಗಿ ಕಥೆ ಕೇಳಿ ಮೆಚ್ಚಿಕೊಂಡ ಚಿತ್ರವಿದು, ನಾಯಕ ಇವರೇ ಆಗಬೇಕು ಎಂದಿದ್ರು ಎಂದ ರವಿಶಂಕರ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿ ಒಂದೂವರೆ ವರ್ಷ ಕಳೆದಿದ್ದರೂ ಸಹ ಅವರ ಬಗ್ಗೆ ಮಾತನಾಡುವುದನ್ನು ಜನರು ಹಾಗೂ ಸಿನಿಮಾ ಕಲಾವಿದರು ಕೊಂಚವೂ ಕಡಿಮೆ ಮಾಡಿಲ್ಲ. ಯಾವ ಹೊಸ ಚಿತ್ರಗಳು ಬಂದರೂ ಸಹ ಆ ಚಿತ್ರ ತಂಡ ತಮ್ಮ ಜತೆ ಪುನೀತ್ ರಾಜ್‌ಕುಮಾರ್ ಇದ್ದ ರೀತಿ ಹಾಗೂ ಚಿತ್ರದ ಬಗ್ಗೆ ಅವರು ಆಡಿದ್ದ ಮಾತುಗಳನ್ನು ಬಿಚ್ಚಿಡುತ್ತಿವೆ.
ಕಳೆದ ತಿಂಗಳಷ್ಟೇ ಬಿಡುಗಡೆಗೊಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹಾಗೂ ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರತಂಡವೂ ಸಹ ಪುನೀತ್ ರಾಜ್‌ಕುಮಾರ್ ಅವರನ್ನು ದೊಡ್ಡ ಮಟ್ಟದಲ್ಲಿ ಸ್ಮರಿಸಿತ್ತು. ಕಬ್ಜ ಚಿತ್ರತಂಡ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ವಿಡಿಯೊ ಮಾಡಿ ಗೌರವವನ್ನೂ ಸಹ ನೀಡಿತ್ತು. ಇನ್ನು ಪುನೀತ್ ಅಗಲಿಕೆ ಬಳಿಕ ಬಿಡುಗಡೆಗೊಂಡ ಬಹುತೇಕ ಎಲ್ಲಾ ಚಿತ್ರಗಳೂ ಸಹ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವವನ್ನು ಸಲ್ಲಿಸಿದ ಬಳಿಕ ಪ್ರದರ್ಶನಗೊಂಡಿವೆ.

ಹೀಗೆ ಪುನೀತ್ ರಾಜ್‌ಕುಮಾರ್ ಹೆಸರು ದಿನನಿತ್ಯ ಕೇಳಿಬರುತ್ತಲೇ ಇದ್ದು, ಸದ್ಯ ಪುನೀತ್ ರಾಜ್‌ಕುಮಾರ್ ಆಪ್ತರೇ ತಯಾರಿಸಿರುವ ರಾಘವೇಂದ್ರ ಸ್ಟೋರ್ಸ್ ಚಿತ್ರತಂಡವೂ ಸಹ ಪುನೀತ್ ರಾಜ್‌ಕುಮಾರ್ ಚಿತ್ರದ ಬಗ್ಗೆ ತೋರಿದ್ದ ಕಾಳಜಿ ಹಾಗೂ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡಿದ್ದನ್ನು ಬಿಚ್ಚಿಟ್ಟಿದೆ.
ಹೌದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಸಂತೋಷ್ ಆನಂದ್‌ರಾಮ್ ನಿರ್ದೇಶನದ ಹಾಗೂ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಚಿತ್ರ ಇದೇ ತಿಂಗಳ 28ರಂದು ಬಿಡುಗಡೆಯಾಗಲಿದ್ದು, ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಕಾರಣ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಆರಂಭಿಸಿದೆ. ನಮ್ಮ ಕನ್ನಡ ಫಿಲ್ಮಿಬೀಟ್ ನಡೆಸಿದ ಸಂದರ್ಶನದಲ್ಲಿ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟ ರವಿಶಂಕರ್ ಗೌಡ ಭಾಗವಹಿಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು ಹಾಗೂ ಚಿತ್ರದ ಕಥೆಯನ್ನು ಪುನೀತ್ ರಾಜ್‌ಕುಮಾರ್ ಕೇಳಿ ನಡೆದುಕೊಂಡಿದ್ದ ರೀತಿಯನ್ನು ಬಿಚ್ಚಿಟ್ಟರು.
"ತುಂಬಾ ಪ್ರೀತಿಯಿಂದ, ಸಣ್ಣ ನೋವಿನಿಂದ ಹೇಳಬೇಕು ಅಂದ್ರೆ, ಅಪ್ಪು ಅವರು ತುಂಬಾ ಇಷ್ಟಪಟ್ಟ ಕಥೆ. ಜಗ್ಗಣ್ಣನೇ ಈ ಸಿನಿಮಾ ಮಾಡಬೇಕು ಅಂತ ಅವರು ಕೊನೆ ಗಳಿಕೆಯಲ್ಲಿ ಇಷ್ಟಪಟ್ಟಂತಹ ಕಥೆ ಇದು. ಅವರು ಈ ಸಿನಿಮಾ ಬಗ್ಗೆ ತುಂಬಾ ಒಲವನ್ನು ಇಟ್ಟುಕೊಂಡಿದ್ರು, ಚಿತ್ರವನ್ನು ನೋಡಬೇಕು ಅಂತ ತುಂಬಾ ಆಸೆಯನ್ನು ಇಟ್ಟುಕೊಂಡಿದ್ದರು. ದುರಾದೃಷ್ಟವಶಾತ್ ಇವತ್ತು ಅವರೇ ಇಲ್ಲ. ಅವರಿಂದನೇ ಈ ಸಿನಿಮಾ ಆಗಿದ್ದೂ ಕೂಡ. ಈ ಸಿನಿಮಾ ಆಗೋದಕ್ಕೆ ಅವರೇ ಕಾರಣ. ಸಂತೋಷ್ ಆನಂದ್‌ರಾಮ್ ಅವರು ಕಥೆ ಹೇಳಿದಾಗ ಜಗ್ಗೇಶ್ ಅವರೇ ನಾಯಕ ಆಗಬೇಕು ಎಂದು ಹೇಳಿದ್ದರು" ಎಂದು ಮಾಹಿತಿ ಹಂಚಿಕೊಂಡರು.

ಅಲ್ಲದೇ ಈ ಚಿತ್ರದಲ್ಲಿ ಜಗ್ಗೇಶ್ ನಲವತ್ತು ವರ್ಷ ಕಳೆದರೂ ಮದುವೆಯಾಗದ ಪುರುಷನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾನು ನಾಯಕ ಗೆಳೆಯನ ಪಾತ್ರದಲ್ಲಿ ನಟಿಸಿದ್ದೇನೆ ಎಂದು ರವಿಶಂಕರ್ ಗೌಡ ತಿಳಿಸಿದ್ದಾರೆ. ಅಲ್ಲದೇ ಚಿತ್ರದ ಕಥೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರವಿಶಂಕರ್ ಗೌಡ ಜನರು ಹೊಂಬಾಳೆ ಫಿಲ್ಮ್ಸ್ ಹಾಗೂ ಸಂತೋಷ್ ಆನಂದ್‌ರಾಮ್ ಅವರ ಸಿನಿಮಾಗಳ ಮೇಲೆ ಏನು ನಂಬಿಕೆ ಇಡ್ತಾರೋ ಆ ನಂಬಿಕೆಯನ್ನು ಚಿತ್ರ ಉಳಿಸಿಕೊಳ್ಳಲಿದೆ ಎಂದರು.
ಕಾಮಿಡಿ ಜತೆಗೆ ಭಾವನೆಗಳ ಜತೆ ಸಾಗುವ ಕಥೆ ಕೊನೆಗೆ ಒಂದೊಳ್ಳೆ ಸಂದೇಶದೊಂದಿಗೆ ಮುಕ್ತಾಯವಾಗಲಿದ್ದು, ನಾವು ನೀವು ನಮ್ಮ ಸುತ್ತಮುತ್ತ ಕಾಣುವ ಸಮಸ್ಯೆಗಳನ್ನು ತೆರೆ ಮೇಲೆ ತೋರಿಸಲಾಗಿದ್ದು, ನಾವು ಈ ರೀತಿ ಮಾಡಬಾರದು ಅಲ್ವಾ, ಅನುಸರಿಸಿಕೊಂಡು ಹೋಗಬೇಕು ಅಲ್ವ ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದು ಚಿತ್ರ ಒಂದೊಳ್ಳೆ ಮೌಲ್ಯ ಸಾರುವ ಕಥೆ ಹೊಂದಿದೆ ಎಂದು ರವಿಶಂಕರ್ ತಿಳಿಸಿದ್ದಾರೆ.


Click it and Unblock the Notifications











