Puneeth Namana Live: ಪುನೀತ್‌ಗೆ ನಮನ: ವೇದಿಕೆ ಮೇಲೆ ಬಿಕ್ಕಿ-ಬಿಕ್ಕಿ ಶಿವಣ್ಣ-ರಾಘಣ್ಣ
ಚಿತ್ರರಂಗದ ಎಂದೂ ಮರೆಯಲಾಗದ ಮಾಣಿಕ್ಯ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ 19 ದಿನಗಳಾಗಿವೆ. ಸಿನಿಮಾವನ್ನು, ಚಿತ್ರರಂಗವನ್ನು ಅಪಾರವಾಗಿ ಅಪ್ಪು ಪ್ರೀತಿಸುತ್ತಿದ್ದರು. ಚಿತ್ರರಂಗ ಸಹ ಅಪ್ಪುವನ್ನು ಅಷ್ಟೇ ಗೌರವಿಸುತ್ತಿತ್ತು, ಪ್ರೀತಿಸುತ್ತಿತ್ತು. ಆ ಪ್ರೀತಿಯನ್ನು ವ್ಯಕ್ತಪಡಿಸಲೆಂದು, ಅಗಲಿದ ಮೇರು ಜೀವನಕ್ಕೆ ಗೌರವ ಸಲ್ಲಿಸಲೆಂದು ಇಂದು 'ಪುನೀತ್ ನಮನ' ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದೆ.
'ಪುನೀತ್ ನಮನ' ಕಾರ್ಯಕ್ರಮವು ಇಂದು ಬೆಂಗಳೂರಿಗೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ನೆರೆ-ಹೊರೆಯ ಚಿತ್ರನಟರು, ತಂತ್ರಜ್ಞರು, ಅಪ್ಪುವಿನ ಸಿನಿರಂಗದ ಆತ್ಮೀಯ ಗೆಳೆಯರು. ಕರ್ನಾಟಕದ ಸರ್ಕಾರದ ಬಹುಪಾಲು ಸಚಿವರು, ಮುಖ್ಯ ಮಂತ್ರಿಗಳು, ದೊಡ್ಮನೆ ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ. ಸುಮಾರು 3000 ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಒಳಾಂಗಣ ಕಾರ್ಯಕ್ರಮ ಇದಾಗಿರಲಿದ್ದು, ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನವಿರುವುದಿಲ್ಲ. ಇದು ಚಿತ್ರರಂಗದವರು ಮಾತ್ರವೇ ಭಾಗವಹಿಸುತ್ತಿರುವ ಕಾರ್ಯಕ್ರಮವಾಗಿದೆ.

07: 35: ಶಿವರಾಜ್ ಕುಮಾರ್ ಸಹ ಮಾತನಾಡುತ್ತಾ, ನಾನು ಎಲ್ಲಿ ಹೋದರೂ ನನ್ನ ತಮ್ಮ ನನ್ನ ಅಪ್ಪು ಎಂದು ಹೊಗಳುತ್ತಿದ್ದೆ. ನನ್ನ ಕಣ್ಣ ದೃಷ್ಟಿಯೇ ಅವನಿಗೆ ಬಿದ್ದುಬಿಟ್ಟಿತೋ ಏನೋ ನಮ್ಮನ್ನು ಬಿಟ್ಟು ಹೋಗಿಬಿಟ್ಟ ಎಂದು ಮಗುವಿನಂತೆ ಅತ್ತು ಬಿಟ್ಟರು. ಆದರೆ ಸಾವರಿಸಿಕೊಂಡು ಅಪ್ಪುವಿನ ಪ್ರಿಯವಾದ ಹಿಂದಿ ಗೀತೆಯೊಂದನ್ನು ಹಾಡಿದರು.
07:34: ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ ದುಃಖ ತಾಳಲಾರದೆ ಅತ್ತು ಬಿಟ್ಟರು. ದಯಮಾಡಿ ನನ್ನನ್ನು ಕರೆದುಕೊಂಡು ಅವನನ್ನು ಕಳಿಸಿಕೊಡಿ ಎಂದು ಅಂಗಲಾಚಿದರು. ನನಗೆ ಫೇಸ್ ಮೇಕರ್ ಹಾಕಿಸಿ ನನ್ನನ್ನು ಬದುಕಿಸಿದ ಆದರೆ ಅವನು ಹೋಗಿಬಿಟ್ಟ ನನಗೆ ಈಗ ಬದುಕಲೇ ನಾಚಿಕೆ ಆಗುತ್ತಿದೆ ಎಂದರು.
6:10: ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪುನೀತ್ ಹೆಸರಲ್ಲಿ ಸ್ಟುಡಿಯೋ ಹಾಗೂ ಹೊಸ ಕಲಾವಿದರನ್ನು ತಯಾರು ಮಾಡುವ ಸಂಸ್ಥೆ ಪ್ರಾರಂಭಿಸಬೇಕು ಎಂದು ಸಿಎಂ ಬಳಿ ಮನವಿ ಮಾಡಿದರು.
06:00 ತಮಿಳಿನ ನಟ ವಿಶಾಲ್ ಮಾತನಾಡಿ, ಅಪ್ಪು ನಿಧನವಾದ ಬಳಿಕ ಎರಡು ದಿನ ನಿದ್ದೆ ಬರಲಿಲ್ಲ. ಅಪ್ಪು ಮಾಡಿರುವ ಸಾಮಾಜಿಕ ಕಾರ್ಯ ನಮಗೆಲ್ಲ ಪ್ರೇರಣೆ. ಅಣ್ಣಾವ್ರ ಕುಟುಂಬವನ್ನು ನಾನು ಕೇಳಿಕೊಳ್ಳುತ್ತಿದ್ದೇನೆ. ಅಪ್ಪು ಮಾಡುತ್ತಿದ್ದ ಸಾಮಾಜಿಕ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಅವಕಾಶ ಮಾಡಿಕೊಡಿ ಎಂದರು.
5 30: ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರುಗಳು ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದರು. ''ಅಪ್ಪು ಒಳ್ಳೆಯ ಮಾನವತಾವಾದಿಯಾಗಿದ್ದರು. ಅಪ್ಪನ ಗುಣಗಳನ್ನು ಮನದಲ್ಲಿ ತುಂಬಿಕೊಂಡಿದ್ದರು'' ಎಂದರು ಸಿದ್ದರಾಮಯ್ಯ.
4:50: ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಸಿಎಂ ಘೋಷಿಸಿದರು
4: 30: ಪುನೀತ್ ನಮನ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು, ದೊಡ್ಮನೆ ಕುಟುಂಬದ ಸದಸ್ಯರು, ಮೈಸೂರು ಸಂಸ್ಥಾನದ ರಾಜ ಯಧುವೀರ್ ಹಾಗೂ ಇನ್ನಿತರ ಗಣ್ಯರು ದೀಪ ಬೆಳಿಗಿಸಿ ನಂತರ ಪುನೀತ್ ರಾಜ್‌ಕುಮಾರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
04:15: ಪುನೀತ್ ರಾಜ್‌ಕುಮಾರ್‌ಗೆ ಗೀತ ನಮನ ಹಾಗೂ ದೀಪ ನಮನ ಸಲ್ಲಿಸಲಾಗುತ್ತಿದೆ. ವೇದಿಕೆಯ ಮುಂದೆ ಮೊದಲ ಸಾಲಿನಲ್ಲಿ ಕುಳಿತ ಗಣ್ಯರೆಲ್ಲರೂ ದೀಪ ಹಿಡಿದು ಎದ್ದು ನಿಂತು ಪುನೀತ್‌ಗೆ ನಮನ ಸಲ್ಲಿಸಿದ್ದಾರೆ. ಹಿನ್ನೆಲೆಯಲ್ಲಿ ನಾಗೇಂದ್ರ ಪ್ರಸಾದ್ ಬರೆದು ವಿಜಯ್ ಪ್ರಕಾಶ್ ಹಾಡಿರುವ ಹಾಡು ಪ್ರಸಾರವಾಗುತ್ತಿದೆ. ಸಂಗೀತ ನೀಡಿರುವುದು ಗುರುಕಿರಣ್.
4: 05: ಪುನೀತ್ ನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಜೀವನ ಸಾಧನೆಯ ವಿಡಿಯೋ ಪ್ರಸಾರ ಮಾಡಲಾಗಿದೆ. ವಿಡಿಯೋಕ್ಕೆ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ವಿಡಿಯೋ ನೋಡುತ್ತಾ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಕಣ್ಣೀರು ಸುರಿಸುತ್ತಿದ್ದಾರೆ.
4:00: ಪುನೀತ್ ನಮನಕ್ಕೆ ಆಗಮಿಸಿದ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಮಗಳು ವೇದಿಕೆ ಮುಂದೆಯೇ ಕುಳಿತು ಕಣ್ಣೀರು ತಡೆದುಕೊಳ್ಳಲು ಯತ್ನಿಸಿ ಯತ್ನಿಸಿ ವಿಫಲವಾಗುತ್ತಿದ್ದಾರೆ. ಪುನೀತ್ ಮಗಳು ಅಮ್ಮನ ಭುಜಕ್ಕೆ ಒರಗೆ ಕಣ್ಣೀರು ಒರೆಸುತ್ತಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿದೆ.
03:55: ಪುನೀತ್ ಅಂತಿಮ ನಮನ ಹಾಗೂ ಅಂತಿಮ ಕಾರ್ಯಕ್ಕೆ ಸರ್ಕಾರ ನೀಡಿದ ಸಹಾಯಕ್ಕೆ ಸಾರಾ ಗೋವಿಂದು ಧನ್ಯವಾದ ಸಲ್ಲಿಸಿದರು.
3: 50: ಪುನೀತ್ ನಮನ ಕಾರ್ಯಕ್ರಮ ಆರಂಭ, ನಿರೂಪಣೆ ಮಾಡುತ್ತಿರುವ ಅಪರ್ಣಾ, ಸಾರಾ ಗೋವಿಂದ ಪ್ರಾಸ್ತಾವನೆ ಭಾಷಣ ಮಾಡುತ್ತಿದ್ದಾರೆ.
3:20: ಪುನೀತ್ ನಮನ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
3:15: ಪುನೀತ್ ನಮನ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಆಗಮಿಸಿದ್ದಾರೆ. ಅವರೊಟ್ಟಿಗೆ ಸಚಿವ ಆನಂದ್ ಸಿಂಗ್ ಸಹ ಬಂದರು. ಸಿಎಂ ಬಸವರಾಜ ಬೊಮ್ಮಾಯಿ ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
3:10: ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಪುನೀತ್ ಸಾವಿನ ಬಳಿಕ ಬಹಿರಂಗವಾಗಿ ಎಲ್ಲಿಯೂ ಮಾತನಾಡದೇ ಇರುವ ಅಶ್ವಿನಿ ಇಂದು ವೇದಿಕೆಯಲ್ಲಿ ಮಾತನಾಡಲಿದ್ದಾರೆ ಎನ್ನಲಾಗಿದೆ.
3:05: ಪುನೀತ್ ನಮನ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ದಂಪತಿ ಆಗಮಿಸಿದ್ದಾರೆ. ಈಗಾಗಲೇ ದೊಡ್ಮನೆ ಕುಟುಂಬದ ಸದಸ್ಯರು ಆಗಮಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಒಂದು ಗಂಟೆ ಮುಂಚಿತವಾಗಿಯೇ ಕಾರ್ಯಕ್ರಮಕ್ಕೆ ಆಗಮಿಸಿ ಆಸೀನರಾಗಿದ್ದಾರೆ.
2:50: ಪುನೀತ್ ರಾಜ್‌ಕುಮಾರ್ ಬಗ್ಗೆ ಹಾಡಿನ ಒಂದೊಂದು ಸಾಲು ಬರೆವಾಗಲೂ ನಾನು ಭಾವೋದ್ವೇಗಕ್ಕೆ ಒಳಗಾದೆ. ಅವರ ಸಾಧನೆಗೆ ಹಾಡು ಬರೆದವನು ನಾನು. ಈಗ ಬರೆದಿರುವ ಹಾಡಿಗೆ ವಿಜಯ್ ಪ್ರಕಾಶ್ ಜೀವ ತುಂಬಿದ್ದಾರೆ. ಹಾಡು ಬರೆವಾಗ, ಹಾಡುವಾಗ, ಅದಕ್ಕೆ ವಿಡಿಯೋಗಳನ್ನು ಸೆಟ್ ಮಾಡುವಾಗ ಈ ಪ್ರಕ್ರಿಯೆಯಲ್ಲಿ ನೂರಾರು ಭಾರಿ ಭಾವುಕನಾಗಿದ್ದೇನೆ: ನಾಗೇಂದ್ರ ಪ್ರಸಾದ್, ಚಿತ್ರ ಸಾಹಿತಿ.
2:40 ಹಲವು ನಟರು ಈಗಾಗಲೇ ಕಾರ್ಯಕ್ರಮದಲ್ಲಿ ಹಾಜರಿದ್ದಾರೆ. ಪ್ರಕಾಶ್ ರೈ, ಶ್ರೀಕಾಂತ್, ಶರಣ್ ಇನ್ನೂ ಹಲವರು ಬಂದಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಹಾಗೂ ಇಡೀ ದೊಡ್ಮನೆ ಕುಟುಂಬದವರು ವಿಶೇಷ ಬಸ್ಸಿನಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ. ಮೈಸೂರು ರಾಜಮನೆತನದ ಯಧುವೀರ್ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
2:20: ಜೇಮ್ಸ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದೇನೆ. ಅವರಿ ಎಲ್ಲರ ಹೃದಯದಲ್ಲೂ ಇರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.: ತೆಲುಗು ನಟ ಶ್ರೀಕಾಂತ್
1:30: ಪುನೀತ್ ನಮನ ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ ಈಗಾಗಲೇ ಬೆಂಗಳೂರಿಗೆ ಗಣ್ಯರ ಆಗಮನ ಆರಂಭವಾಗಿದೆ. ನಟ ಪ್ರಕಾಶ್ ರೈ, ಶ್ರೀಕಾಂತ್ ಹಾಗೂ ಇನ್ನೂ ಹಲವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ತಮಿಳಿನ ನಟ ವಿಶಾಲ್ ಈಗಾಗಲೇ ಮೈಸೂರಿಗೆ ಆಗಮಿಸಿದ್ದಾರೆ. ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
01:05: ಪುನೀತ್ ನಮನ ಕಾರ್ಯಕ್ರಮದ ವೇದಿಕೆ ಸಜ್ಜಾಗಿದೆ. ಗಾಯಕರಾದ ವಿಜಯ್ ಪ್ರಕಾಶ್ ಶಮಿತಾ ಮಲ್ನಾಡ್, ಮಂಜುಳಾ ಗುರುರಾಜ್, ಹೇಮಂತ್, ಚೇತನ್, ರಾಜೇಶ್ ಕೃಷ್ಣನ್, ಸುನಿತಾ, ಇಂದು ಇನ್ನು ಹಲವು ಗಾಯಕರು ಈಗಾಗಲೇ ವೇದಿಕೆಗೆ ಆಗಮಿಸಿದ್ದಾರೆ. ವೇದಿಕೆಯನ್ನು ಸಂಗೀತ ಕಾರ್ಯಕ್ರಮಕ್ಕಾಗಿ ಸಜ್ಜು ಗೊಳಿಸಿಕೊಳ್ಳಲಾಗುತ್ತಿದೆ.
12:50: ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ರಜನೀಕಾಂತ್, ಅಮಿತಾಬ್ ಬಚ್ಚನ್, ದಳಪತಿ ವಿಜಯ್, ಚಿರಂಜೀವಿ, ಜೂ ಎನ್‌ಟಿಆರ್, ಸೂರ್ಯಾ, ವಿಶಾಲ್, ನಾಗಾರ್ಜುನ, ವೆಂಕಟೇಶ್, ಮೋಹನ್‌ಲಾಲ್, ಮಮ್ಮುಟಿ, ಇನ್ನೂ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
12:30: ಪುನೀತ್ ನಮನ ಕಾರ್ಯಕ್ರಮಕ್ಕೆ ಪಾಸ್ ನೀಡಲಾಗಿಲ್ಲವೆಂದು ನಿರ್ಮಾಪಕರ ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಐಪಿ ಪಾಸ್ ಕೊರತೆ ಆಗಿರುವ ಬಗ್ಗೆ ಈಗಾಗಲೇ ವರದಿಯಾಗಿದೆ.
9:40: ಪುನೀತ್ ನಮನ ಕಾರ್ಯಕ್ರಮದಲ್ಲಿ ಗೀತ ರಚನೆಕಾರ ವಿ ನಾಗೇಂದ್ರ ಪ್ರಸಾದ್ ಬರೆದಿರುವ ಅಪ್ಪುವಿನ ಬಗೆಗಿನ ವಿಶೇಷ ಹಾಡಿನ ಪ್ರಸ್ತುತಿ ಇರಲಿದೆ. ಹಾಡನ್ನು ವಿಜಯ್ ಪ್ರಕಾಶ್ ಹಾಡಲಿದ್ದಾರೆ. ಸಂಗೀತ ನೀಡಿರುವುದು ಗುರುಕಿರಣ್.
9:35: ಪುನೀತ್ ನಮನ ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಗೀತ ನಮನ, ನುಡಿ ನಮನ ಸಲ್ಲಿಕೆಯಾಗುತ್ತದೆ.
9:30: ಪುನೀತ್ ನಮನ ಕಾರ್ಯಕ್ರಮದಲ್ಲಿ 3000 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪಾಸ್ ಇದ್ದವರಿಗಷ್ಟೆ ಕಾರ್ಯಕ್ರಮಕ್ಕೆ ಪ್ರವೇಶ ಇರಲಿದೆ.


Click it and Unblock the Notifications











