For Quick Alerts
  ALLOW NOTIFICATIONS  
  For Daily Alerts

  ಪುನೀತ್ ನಮನ: ಕಾರ್ಯಕ್ರಮದಲ್ಲಿ ನಡೆದಿದ್ದೇನು? ಇಲ್ಲಿವೆ ಮುಖ್ಯಾಂಶಗಳು

  |

  ಪುನೀತ್ ರಾಜ್‌ಕುಮಾರ್ ಅಗಲಿ 19 ದಿನಗಳಾಗಿವೆ. ಪುನೀತ್ ಅನ್ನು ಮರೆಯಲು ಚಿತ್ರರಂಗಕ್ಕಾಗಲಿ, ಅಭಿಮಾನಿಗಳಿಗಾಗಲಿ ಸಾಧ್ಯವಾಗಿಲ್ಲ. ಪುನೀತ್ ಅನ್ನು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ.

  ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚಿತ್ರರಂಗದ ಪರವಾಗಿ ಪುನೀತ್‌ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಪುನೀತ್ ನಮನ ಕಾರ್ಯಕ್ರಮವನ್ನು ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.

  ಸಾರ್ವಜನಿಕರು, ಅಭಿಮಾನಿಗಳ ಹೊರತಾಗಿ ಕೇವಲ ವಿಶೇಷ ಆಹ್ವಾನಿತರು ಹಾಗೂ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರವೇ ಇಂದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೆರೆ-ಹೊರೆಯ ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಕನ್ನಡ ಚಿತ್ರೋದ್ಯಮದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನವಾಯಿತು. ಕಾರ್ಯಕ್ರಮದ ಮುಖ್ಯಾಂಶಗಳು ಇಲ್ಲಿವೆ.

  * ಕಾರ್ಯಕ್ರಮದಲ್ಲಿ ಕೊನೆಯವರಾಗಿ ಮಾತನಾಡಿದ ಶಿವರಾಜ್ ಕುಮಾರ್ ವೇದಿಕೆ ಮೇಲೆ ದುಃಖ ಹತ್ತಿಕ್ಕಲಾರದೆ ಕಣ್ಣೀರು ಹಾಕಿದರು. ''ಎಲ್ಲ ಸಂದರ್ಶನಗಳಲ್ಲಿ, ಎಲ್ಲ ಕಾರ್ಯಕ್ರಮಗಳಲ್ಲಿ ನನ್ನ ತಮ್ಮ, ನನ್ನ ತಮ್ಮ ಎಂದು ಹೊಗಳುತ್ತಿದ್ದೆ, ನನ್ನ ದೃಷ್ಟಿಯೇ ಅವನಿಗೆ ಬಿದ್ದಿತೇನೋ'' ಎನ್ನುತ್ತಾ ಕಣ್ಣೀರು ಸುರಿಸಿದರು. ಶಿವಣ್ಣ ಅತ್ತದ್ದು ಕಂಡು ವೇದಿಕೆ ಮುಂದೆ ಉಪಸ್ಥಿತರಿದ್ದವರು ಮಾತ್ರವೇ ಅಲ್ಲದೆ ಮನೆಯಲ್ಲಿ ಟಿವಿಗಳ ಮುಂದೆ ಕೂತಿದ್ದ ಕೋಟ್ಯಂತರ ಅಭಿಮಾನಿಗಳು ಕಣ್ಣೀರು ಹಾಕಿದರು. ಪುನೀತ್ ರಾಜ್‌ಕುಮಾರ್ ಅವರ ಮೆಚ್ಚಿನ ಹಾಡು 'ಮೇ ಶಾಯರ್ ತೋ ನಹಿ' ಹಾಡು ಹಾಡಿದ್ದನ್ನು ಅಭಿಮಾನಿಗಳು ಎಂದೂ ಮರೆಯಲು ಸಾಧ್ಯವಿಲ್ಲ.

  * ರಾಘವೇಂದ್ರ ರಾಜ್‌ಕುಮಾರ್ ಭಾಷಣವೂ ಅಷ್ಟೇ ಭಾವುಕವಾಗಿತ್ತು. ಇಷ್ಟು ದಿನ ಬಹಿರಂಗವಾಗಿ ಕಣ್ಣೀರು ಹಾಕದೆ ಇದ್ದ ರಾಘಣ್ಣ ಇಂದು ಕಾರ್ಯಕ್ರಮದಲ್ಲಿ ಕಣ್ಣೀರು ಹರಿಸಿದರು. ಅವರ ಭಾಷಣ ಎಲ್ಲರನ್ನೂ ಆರ್ದ್ರಗೊಳಿಸಿತು.

  * ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್‌ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಾಗಿ ಘೊಷಿಸಿದರು. ಸಿಎಂ ಅವರಿಂದ ಘೋಷಣೆ ಹೊರಬೀಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದರು.

  Puneeth Namana Program Highlights

  * ಯಡಿಯೂರಪ್ಪ ಮಾತನಾಡಿ, ತಾವು ಕೆಲವು ದಿನಗಳ ಹಿಂದಷ್ಟೆ ಪುನೀತ್ ರಾಜ್‌ಕುಮಾರ್ ಅವರ ಕೆಲವು ಸಿನಿಮಾಗಳನ್ನು ನೋಡಿದ್ದಾಗಿಯೂ, ಪುನೀತ್ ರಾಜ್‌ಕುಮಾರ್ ತಮ್ಮ ತಂದೆಯ ಗುಣಗಳನ್ನು ಹೊಂದಿರುವ ವ್ಯಕ್ತಿಯಾಗಿಯೂ ಇದ್ದುದಾಗಿ ಹೇಳಿದರು.

  * ಸಿದ್ದರಾಮಯ್ಯ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅನ್ನು ಕಳೆದುಕೊಂಡಿದ್ದು ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಷ್ಟೆ ದುಃಖವಾಗಿದೆಯೆಂದು ಹೇಳಿದರು. ಪುನೀತ್‌ಗೆ ಮರಣೋತ್ತರ ಪದ್ಮಶ್ರೀ ನೀಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಹೇಳಿದರು.

  * ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರವು ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೊಸ ಕಲಾವಿದರನ್ನು ತಯಾರು ಮಾಡುವ ಸಂಸ್ಥೆಯೊಂದನ್ನು ಕಟ್ಟಬೇಕು, ಜೊತೆಗೆ ಸ್ಟುಡಿಯೋ ಒಂದನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

  * ತಮಿಳಿನ ನಟ ವಿಶಾಲ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ತಮಗೆ ಅಣ್ಣನಿದ್ದಂತೆ, ಅವರ ಕುಟುಂಬದವರು ಮನಸ್ಸು ಮಾಡಿ ಪುನೀತ್ ರಾಜ್‌ಕುಮಾರ್ ಮಾಡುತ್ತಿದ್ದ ಸಾಮಾಜಿಕ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಶಕ್ತಿಧಾಮದ ವಿದ್ಯಾರ್ಥಿನಿಯರ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಮತ್ತೊಮ್ಮೆ ಹೇಳಿದರು.

  * ಕಾರ್ಯಕ್ರಮದಲ್ಲಿ ವಿ ನಾಗೇಂದ್ರ ಪ್ರಸಾದ್ ರಚಿಸಿರುವ ''ಮುತ್ತುರಾಜನ ಮುತ್ತು ಎತ್ತ ಹೋದೆಯೋ'' ಎಂಬ ಹಾಡನ್ನು ಬಿಡುಗಡೆ ಮಾಡಲಾಯ್ತು. ಹಾಡನ್ನು ವಿಜಯಪ್ರಕಾಶ್ ಹಾಡಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ.

  * ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ಶರವಣ ಅವರು ಪುನೀತ್ ರಾಜ್‌ಕುಮಾರ್ ಚಿತ್ರವುಳ್ಳ ನಾಣ್ಯವನ್ನು ಬಿಡುಗಡೆಗೊಳಿಸಿದರು. ವೇದಿಕೆ ಮೇಲೆ ಎಲ್ಲ ಪಕ್ಷದ ಮುಖಂಡರು ಒಟ್ಟಾಗಿ ನಾಣ್ಯ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

  * ನಟ ದರ್ಶನ್ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಅವರನ್ನು ಪೊಲೀಸರು ಹೊರಗಡೆ ತಡೆದು, ಒಳಗೆ ಜಾಗ ಖಾಲಿ ಇಲ್ಲ ಎಂದರು. ನನ್ನನ್ನು ಒಳಗೆ ಬಿಡಿ ಸಾಕು ಎಲ್ಲೋ ಒಂದು ಕಡೆ ಕುಳಿತುಕೊಳ್ಳುತ್ತೇನೆ ಎಂದರು. ಆ ನಂತರ ಒಳಗೆ ಬಂದ ದರ್ಶನ್ ವೇದಿಕೆ ಏರಿ ಪುನೀತ್ ಬಗ್ಗೆ ಪ್ರೀತಿಯ ಮಾತನ್ನಾಡಿದರು. ಪುನೀತ್‌ಗೆ 47 ವರ್ಷ ಆಯಸ್ಸು ಎಂದು ಬ್ರಹ್ಮ ಬರೆದಿದ್ದ ಎನಿಸುತ್ತದೆ, ಅವನೇ ಅದನ್ನು ತಿದ್ದಬೇಕು ಎನಿಸಿಕೊಂಡರು ತಿದ್ದಲಾಗಿಲ್ಲ ಎಂದರು.

  * ಕಾರ್ಯಕ್ರಮದಲ್ಲಿ ಶಕ್ತಿಧಾಮದ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಹಾಡು ಹಾಡಿದ್ದು ಎಲ್ಲರನ್ನೂ ಆರ್ದ್ರಗೊಳಿಸಿತು. ಶಕ್ತಿಧಾಮಕ್ಕೆ ಪುನೀತ್ ಬೆನ್ನೆಲುಬಾಗಿದ್ದರು. ದೊಡ್ಮನೆ ಕುಟುಂಬ ಶಕ್ತಿಧಾಮವನ್ನು ಕಟ್ಟಿದ್ದು ಅದುವೇ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ.

  * ತೆಲುಗಿನ ನಟ ಮೋಹನ್‌ಲಾಲ್ ಪುತ್ರ ಮಂಚು ಮನೋಜ್, ಕಾರ್ಯಕ್ರಮದಲ್ಲಿ ಮಾತನಾಡಿ ಪುನೀತ್ ರಾಜ್‌ಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ತೆಲುಗು ಚಿತ್ರರಂಗದಿಂದ ಮನವಿಯನ್ನು ಕೇಂದ್ರಕ್ಕೆ ಕಳಿಸುತ್ತೇವೆ, ಅಂತೆಯೇ ಎಲ್ಲ ಚಿತ್ರರಂಗದಿಂದಲೂ ಮನವಿ ಕಳಿಸುವಂತಾಗಬೇಕು ಎಂದರು.

  English summary
  Karnataka Film Chamber organized Puneeth Namana program in remember of Puneeth Rajkumar today in palace ground. Here is the highlights of the program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X