ಪುನೀತ್ ರಾಜ್‌ಕುಮಾರ್ 50ನೇ ಜಯಂತೋತ್ಸವ; ರಾಜರತ್ನನಿಗೆ ಅಭಿಮಾನಿಗಳ ನಮನ
ಅಭಿಮಾನಿಗಳ ಪ್ರೀತಿಯ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಜಯಂತೋತ್ಸವ ನಡೆಯುತ್ತಿದೆ. ಅಪ್ಪು ಅಗಲಿಕೆಯ ನೋವಿನಲ್ಲೇ ಸಂಭ್ರಮಾಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ.
ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನ್ನದಾನ, ರಕ್ತದಾನ ಹಾಗೂ ನೇತ್ರದಾನ ಶಿಬಿರದಂತಹ ಸಮಾಜಮುಖಿ ಕೆಲಸಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಪುನೀತ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ಹೀರೊ ಆಗಿಯೂ ಮೋಡಿ ಮಾಡಿದರು. ತಮ್ಮ ಸರಳ ಸಜ್ಜನ ಸಹಾಯಗುಣದಿಂದಲೂ ಜನರಿಗೆ ಹತ್ತಿರವಾಗಿದ್ದರು. 3 ವರ್ಷಗಳ ಹಿಂದೆ ಹೃದಯಾಘಾತದಿಂದ ಪುನೀತ್ ಇಹಲೋಕ ತ್ಯಜಿಸಿದ್ದರು.

ಈ ಬಾರಿ ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬ. ಇದನ್ನು ಮತ್ತಷ್ಟು ವಿಶೇಷವಾಗಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಕಂಠೀರವ ಸ್ಟುಡಿಯೋ ಬಳಿ ಸಂಭ್ರಮಾಚರಣೆ ಜೋರಾಗಿದೆ. 25 ಕೇಕ್ ಕತ್ತರಿಸಿ ಪುನೀತ್ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನನ್ನು ಆಪ್ತರು, ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. 3 ದಿನ ಮೊದಲೇ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ.
ಪುನೀತ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಚೊಚ್ಚಲ ಸಿನಿಮಾ ಇದು. ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿ ನಟಿಸಿದ್ದರು. ಆಕೆಗೂ ಅದು ಮೊದಲ ಸಿನಿಮಾ ಆಗಿತ್ತು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ನಿರ್ಮಿಸಿದ್ದರು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತಂದಿದ್ದು ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.
'ಅಪ್ಪು' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡು ಸದ್ದು ಮಾಡ್ತಿದೆ. ನಟಿಯರಾದ ರಮ್ಯಾ, ರಕ್ಷಿತಾ, ಶರ್ಮಿಳಾ ಮಾಂಡ್ರೆ, ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸೇರಿದಂತೆ ಹಲವರು ಮತ್ತೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಭಿಮಾನಿಗಳಂತೂ ಹಬ್ಬದ ರೀತಿ ಚಿತ್ರವನ್ನು ಸ್ವಾಗತಿಸಿ ಕುಣಿದು ಸಂಭ್ರಮಿಸುತ್ತಿದ್ದಾರೆ. ರಾಜ್ಯದ ಹಲವೆಡೆ ಅಭಿಮಾನಿಗಳು ಕೇಕ್ ಕತ್ತರಿಸಿ ಅಪ್ಪು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ಕುಟುಂಬ ಸದಸ್ಯರು ಕೂಡ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಅಪ್ಪು ಯೂತ್ ಬ್ರಿಗೇಡ್‌ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಂಠೀರವ ಸ್ಟೂಡಿಯೋದಲ್ಲಿ ಕೆಲಸ ಮಾಡುವವರಿಗೆ ಬಟ್ಟೆ ವಿತರಣೆ ಮಾಡಲಾಗತ್ತಿದೆ. ಕುರುಬರಹಳ್ಳಿಯಲ್ಲಿ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಪುನೀತ್ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ.

'ಧ್ರುವತಾರೆ 369' ಎಂಬ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಗ್ರಾಫಿಕ್ಸ್ ಬಳಸಿ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಜೆ.ಕೆ. ಶಂಕರ್‌ನಾಗ್ ಎಂಬುವವರು ಚಿತ್ರದ ಸಾರಥ್ಯ ವಹಿಸಿದ್ದು ಶ್ರೀಕೃಷ್ಣ ಕಾಂತಿಲ ಹಣ ಹೂಡುತ್ತಿದ್ದಾರೆ. ಬಹಳ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು 'ಧ್ರುವತಾರೆ 369' ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.


Click it and Unblock the Notifications











