'ಲಕ್ಕಿಮ್ಯಾನ್' ಪುನೀತ್ ರಾಜ್‌ಕುಮಾರ್ ದೇವರ ರೂಪ ಅನಾವರಣಕ್ಕೆ ದಿನಾಂಕ ಫಿಕ್ಸ್!
ನಟ ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅದು ಅವರು ಹೀರೋ ಆಗಿ ಅಭಿಸಿರುವ ಕೊನೆಯ ಚಿತ್ರ. 'ಜೇಮ್ಸ್' ಜೊತೆಗೆ ಪುನೀತ್ ರಾಜ್‌ಕುಮಾರ್ ಡಾರ್ಲಿಂಗ್ ಕೃಷ್ಣ ಹೀರೋ ಆಗಿರುವ 'ಲಕ್ಕಿ ಮ್ಯಾನ್' ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.
ಈಗಾಗಲೇ 'ಲಕ್ಕಿ ಮ್ಯಾನ್' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿಯೂ ಅಪ್ಪು ಗಮನ ಸೆಳೆದಿದ್ದಾರೆ. ಈ ಪೋಸ್ಟರ್ ಬಳಿಕ ಈಗ ಅಪ್ಪು ಟೀಸರ್‌ನಲ್ಲಿ ಬರಲಿದ್ದಾರೆ.
ಅಪ್ಪು ಪಾತ್ರದ ಬಗ್ಗೆ ಹೇಳುವ ಪೋಸ್ಟರ್ ರಿಲೀಸ್ ಆಗಿತ್ತು. ಹೊಸ ವರ್ಷದ ಪ್ರಯುಕ್ತ ಚಿತ್ರ ತಂಡ ಪೋಸ್ಟರ್ ಹಂಚಿಕೊಂಡಿತ್ತು. ಈಗ ಟೀಸರ್ ರಿಲೀಸ್‌ಗೆ ಮುಂದಾಗಿದ್ದು, ಅಪ್ಪು ಹೇಗೆ ಕಂಗೊಳಿಸಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

'ಲಕ್ಕಿ ಮ್ಯಾನ್'ಗಾಗಿ ಅಪ್ಪು ದೇವರ ರೂಪ!
'ಲಕ್ಕಿ ಮ್ಯಾನ್' ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರ ತಮಿಳಿನ 'ಒ ಮೈ ಕಡವುಳೆ' ಚಿತ್ರದ ರಿಮೇಕ್. ಹಾಗಾಗಿ ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪು ನಾಯಕ ನಟನಿಗೆ ಸರಿಯಾದ ದಾರಿ ತೋರಿಸುವ 'ದೇವರ' ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಜುಲೈ 25ಕ್ಕೆ ಅಪ್ಪು ಹೊಸ ರೂಪ!
ಸದ್ಯ ಲಕ್ಕಿ ಮ್ಯಾನ್ ಚಿತ್ರದ ಟೀಸರ್ ರಿಲೀದ್‌ಗೆ ತಯಾರಾಗಿದೆ. ಇದೇ ಜುಲೈ 25ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಪ್ರಕಟ ಮಾಡಿದೆ. ಇತ್ತೀಚೆಗಷ್ಟೇ ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋ ವೈರಲ್ ಆಗಿತ್ತು. ಅಂತೆಯೇ ಈಗ ಚಿತ್ರದ ಟೀಸರ್‌ಗಾಗಿ ಎಲ್ಲರೂ ಕಾಯ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಟೀಸರ್‌ನಲ್ಲಿ ಹೇಗೆ ಇರಲಿದ್ದಾರೆ ಎನ್ನುವ ಕುತೂಹಲ ಕೂಡ ಮನೆ ಮಾಡಿದೆ.

ಪ್ರಭುದೇವ ಜೊತೆಗೆ ಅಪ್ಪು ಡಾನ್ಸ್!
ಪರ್ಸಾ ಪಿಕ್ಚರ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್ ಕೆಲಸಗಳು ಮುಗಿದಿವೆ. ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. 'ಲಕ್ಕಿ ಮ್ಯಾನ್' ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್‌ಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್‌ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್‌ಕುಮಾರ್ ಅವರ ಕುರಿತಾಗಿ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್ ಮಾಡಿದ್ದಾರೆ.

ಸದ್ಯದಲ್ಲೇ ರಿಲೀಸ್ ದಿನಾಂಕ ಪ್ರಕಟ!
ಸದ್ಯದಲ್ಲೇ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಿದೆ ಚಿತ್ರತಂಡ. 'ಲಕ್ಕಿ ಮ್ಯಾನ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್, ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











